ರಾಮ ಮಂದಿರ ಕನಸು ಸಾಕಾರ, ರಾಮರಾಜ್ಯದ ಕನಸು ಬಾಕಿ: ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳು
ದಾವಣಗೆರೆ(ಡಿ.14): ದಲಿತರ ಮನೆಗೆ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಭೇಟಿ ನೀಡುವ ಮೂಲಕ ಹಿರಿಯ ಗುರುಗಳ ಪರಂಪರೆಯ ಮುಂದುವರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಶಕ್ತಿ ನಗರದಲ್ಲಿ ಬಿಜೆಪಿಯ ಹಿರಿಯ ದಲಿತ ಮುಖಂಡ ಆಲೂರು ನಿಂಗರಾಜ ನಿವಾಸಕ್ಕೆ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಭೇಟಿ ನೀಡಿದ್ದರು. ಇದೇ ವೇಳೆ ಆಲೂರು ಲಿಂಗರಾಜ ದಂಪತಿ, ಪುತ್ರಿಯರು ಶ್ರೀಗಳ ಪಾದಪೂಜೆ ನೆರವೇರಿಸಿ, ಆಶೀರ್ವಾದ ಪಡೆದರು. ಪೇಜಾವರ ಪೀಠಾಧೀಶರ ಜೊತೆಗೆ ಆದಿ ಜಾಂಬವ ಪೀಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಭಾಗಿಯಾಗಿದ್ದರು. ಆಲೂರು ನಿಂಗರಾಜ ದಂಪತಿ ಹಾಗೂ ಮಕ್ಕಳಿಗೆ ಉಭಯ ಶ್ರೀಗಳು ಆಶೀರ್ವದಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಕನಸು ಇತ್ತು. ಅಂತಹದ್ದೊಂದು ಶತ ಶತಮಾನಗಳ ಕನಸು ಈಗ ಈಡೇರುತ್ತಿದೆ. ಅದೊಂದೇ ಅಲ್ಲ, ರಾಮ ರಾಜ್ಯದ ಕನಸು ಸಹ ಇದೆ. ಈ ಕನಸನ್ನು ನಾವೆಲ್ಲರೂ ಸೇರಿ, ಸಾಕಾರಗೊಳಿಸಲು ಪ್ರಯತ್ನಿಸೋಣ. ರಾಮರಾಜ್ಯ ಸ್ಥಾಪನೆಗೆ ಶ್ರಮಿಸೋಣ ಎಂದರು. ಪ್ರತಿಯೊಬ್ಬರೂ ಶ್ರೀರಾಮನ ಆದರ್ಶವನ್ನು ಮೈಗೂಡಿಸಿಕೊಂಡು ರಾಮರಾಜ್ಯದಲ್ಲಿ ಎಲ್ಲರೂ ಸುಖ, ಸಂತೋಷವಾಗಿದ್ದರು. ಅಂತಹ ಕಾಲ ಮತ್ತೆ ಮರುಕಳಿಸಬೇಕು ಎಂದು ಕಿವಿಮಾತು ಹೇಳಿದರು.
ಕುವೆಂಪು ಗುರುಗಳು ಕೃಷ್ಣಪ್ಪ ಶಾಸ್ತ್ರಿ ಸ್ಮಾರಕ ನಿರ್ಮಾಣಕ್ಕೆ ನಿರ್ಲಕ್ಷ್ಯ
ಒಳ ಮೀಸಲಾತಿ ಮಾದಿಗ ಸಮಾಜದ ಹಕ್ಕು:
ಮಾದಿಗ ಸಮಾಜದ ಆದಿಜಾಂಬವ ಗುರುಪೀಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ಪರಿಶಿಷ್ಟಜಾತಿಯಲ್ಲಿ ಒಳ ಮೀಸಲಾತಿ ಮಾದಿಗ ಸಮುದಾಯದ ಹಕ್ಕು. ನಾವು ಬೇರೆ ಯಾರದ್ದೋ ತಟ್ಟೆಯಿಂದ ಮೀಸಲಾತಿ ಕದಿಯುತ್ತಿಲ್ಲ. ಪರಿಶಿಷ್ಟಜಾತಿಗಳಲ್ಲೇ ಅತ್ಯಂತ ಶೋಷಿತರಾದ ಮಾದಿಗರಿಗೆ ಸಿಗಬೇಕಾದ ಹಕ್ಕು ಕೊಡಿ. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಲಿ ಎಂಬುದು ಒತ್ತಾಯ ಎಂದು ತಿಳಿಸಿದರು.
ಮಾಯಕೊಂಡ ಕ್ಷೇತ್ರದ ಬಿಜೆಪಿ ಮುಖಂಡ ಆಲೂರು ನಿಂಗರಾಜ, ಕುಟುಂಬ ವರ್ಗ, ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು ಇದ್ದರು.
ಒಳ ಮೀಸಲಾತಿಗಾಗಿ ಪ್ರತಿಭಟನೆ
ಪರಿಶಿಷ್ಟಜಾತಿಯಲ್ಲಿ ಮಾದಿಗ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ಈ ವರ್ಗದಲ್ಲಿ ಅತೀ ಹೆಚ್ಚು ಶೋಷಣೆಗೆ ಈಡಾಗಿರುವ ಸಮುದಾಯವೂ ಆಗಿದೆ. ಇದೇ ಕಾರಣಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ತಮ್ಮ ವರದಿಯಲ್ಲಿ ಮೀಸಲಾತಿ ಹಂಚಿಕೆ ಮಾಡಿ, ಶಿಫಾರಸ್ಸು ಮಾಡಿದ್ದಾರೆ. ಒಳ ಮೀಸಲಾತಿಗಾಗಿ ಈಗಾಗಲೇ ಪಾದಯಾತ್ರೆ ಮಾಡಿದ್ದೇವೆ. ಡಿ.18ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಒಳ ಮೀಸಲಾತಿಗಾಗಿ ಪ್ರತಿಭಟನೆ ನಡೆಸಲಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಎಚ್ಚೆತ್ತುಕೊಳ್ಳಲಿ ಎಂದು ಷಡಕ್ಷರಿ ಮುನಿ ಸ್ವಾಮೀಜಿ ಸೂಚ್ಯವಾಗಿ ಎಚ್ಚರಿಸಿದರು.