ಚಾಕೋಲೆಟ್ ಖರೀದಿಸಲು ಹೋದ ಬಾಲಕ ನಾಯಿಗಳ ಅಟ್ಟಹಾಸಕ್ಕೆ ಬಲಿ!

By Kannadaprabha NewsFirst Published Jun 26, 2019, 7:56 AM IST
Highlights

ರಕ್ಕಸ ನಾಯಿಗಳ ಅಟ್ಟಹಾಸ: 5 ವರ್ಷದ ಬಾಲಕ ಬಲಿ| ಚಾಕೋಲೆಟ್ ಖರೀದಿಸಲು ಹೋದ ಬಾಲಕನ ಮೇಲೆ ನಾಯಿಗಳ ದಾಳಿ | ಯಲಹಂಕ ಸಮೀಪದ ಅಜ್ಜೇಹಳ್ಳಿಯಲ್ಲಿ ಘಟನೆ

ಬೆಂಗಳೂರು[ಜೂ.26]: ಅಪ್ಪ ಕೊಟ್ಟ ಒಂದು ರುಪಾಯಿನಲ್ಲಿ ಚಾಕೋಲೆಟ್ ಖರೀದಿ ಮಾಡಲು ಹೋದ ಪುಟ್ಟ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಮಂಗಳವಾರ ಸೋಲದೇವನಹಳ್ಳಿ ಬಳಿ ನಡೆದಿದೆ

ನಿರ್ಮಾಣ ಹಂತದ ಕಟ್ಟಡದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಮೂಲದ ಮಲ್ಲಪ್ಪ ಕೆಲಸ ನಿರ್ವಹಿಸುತ್ತಿದ್ದ. ಅಲ್ಲಿಗೆ ಆತನ ಐದು ವರ್ಷದ ಪುತ್ರ ದುರ್ಗೇಶ್ ಬಂದು ಚಾಕೊಲೇಟ್ ಬೇಕು ಎಂದು ಕೇಳಿದ್ದಾನೆ. ಮಗನ ಆಸೆ ಈಡೇರಿಸಲು ಅಪ್ಪ 1 ರು. ನೀಡಿ ಚಾಕೋಲೆಟ್ ತೆಗೆದುಕೊಂಡು ಅಮ್ಮ ಅನಿತಾ ಬಳಿಗೆ ಹೋಗು ಎಂದು ಹೇಳಿ ತನ್ನ ಕೆಲಸದಲ್ಲಿ ನಿರತನಾಗಿದ್ದನು.

ಅಪ್ಪ ಕೆಲಸ ಮಾಡುತ್ತಿದ್ದ ಜಾಗದಿಂದ ಸುಮಾರು ಅರ್ಧ ಕಿಲೋ ಮೀಟರ್‌ಗೂ ದೂರ ಇದ್ದ ಅಂಗಡಿಗೆ ತೆರಳಲು ಬಾಲಕ ನಡೆದು ಹೋಗುತ್ತಿದ್ದಾಗ ನಿರ್ಜನ ಪ್ರದೇಶದ ಬಳಿ ಬೀದಿ ನಾಯಿಗಳು ಏಕಾಏಕಿ ಬಾಲಕನ ಮೇಲೆ ದಾಳಿ ಮಾಡಿವೆ.

ಈ ಸಂದರ್ಭದಲ್ಲಿ ಆತ ಕಿರುಚಾಡಿದರು ಯಾರಿಗೂ ಕೇಳಿಸಿಲ್ಲ. ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಬಾಲಕ ನರಳಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ನಂತರ ಅಲ್ಲಿ ಸ್ಥಳೀಯರು ಓಡಾಡುವಾಗ ಬಾಲಕ ನಾಯಿ ದಾಳಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಬೀದಿ ನಾಯಿಗಳ ದಾಳಿಗೆ ಮಗನನ್ನು ಕಳೆದುಕೊಂಡ ಪೋಷಕರ ರೋದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬಿಬಿಎಂಪಿ ಕಸ ಮತ್ತು ಪ್ರಾಣಿ ತ್ಯಾಜ್ಯವನ್ನು ತಂದು ಎಸೆಯುತ್ತಿದೆ. ಹೀಗಾಗಿ ಈ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಮುನ್ನ ಪ್ರಾಣಿ ತ್ಯಾಜ್ಯ ಸುರಿಯದಂತೆ ಬಿಬಿಎಂಪಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

click me!