* ವಿವಿಧ ಸಂಘಟನೆಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್
* ಕೊಪ್ಪಳ ಜಿಲ್ಲೆಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಬರಾಜು
* ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಅನುಕೂಲ
ಗಂಗಾವತಿ(ಜೂ.03): ಅಮೆರಿಕದಲ್ಲಿರುವ ಭಾರತೀಯ ಪ್ರಜೆಗಳು ನಿರಂತರ ಆಕ್ಸಿಜನ್ ಸರಬರಾಜು ಮಾಡುತ್ತಿದ್ದು, ಬೆಂಗಳೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆ ನೀಡಲಾಗುತ್ತಿದೆ ಎಂದು ನಗರದ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಮೆರಿಕದ ವಾಸವಿ ಸೇವಾ ಫೌಂಡೇಶನ್, ಆಶಾಜ್ಯೋತಿ ಫೌಂಡೇಶನ್, ಮಿಷನ್ ಆಕ್ಸಿಜನ್, ಆರ್ಟ್ ಆಫ್ ಇಂಡಿಯಾ ಸಂಸ್ಥೆ ನೆರವಿಗೆ ಮುಂದಾಗಿದೆ. ವಂಶಿ, ಉಮಾಶಂಕರ, ಮಣಿಕಂಠ ಅವರು ಈಗಾಗಲೇ ವಾಸವಿ ಸೇವಾ ಸಂಸ್ಥೆಯಿಂದ 170 ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳನ್ನು ಬೆಂಗಳೂರಿಗೆ ನೀಡಿದ್ದಾರೆ. ಅದರಂತೆ ಆಶಾಜ್ಯೋತಿ ಸೇವಾ ಸಂಸ್ಥೆಯವರು ಗಂಗಾವತಿಗೆ 39 ಮತ್ತು ವಾಸವಿ ಸೇವಾ ಸಂಸ್ಥೆಯವರು 11 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
'ಆನ್‌ಲೈನ್ ಶಿಕ್ಷಣದಿಂದ ಮಕ್ಕಳಿಗೆ ಹಿನ್ನಡೆ, SSLC, PUC ಪರೀಕ್ಷೆ ನಡೆಸಲೇಬೇಕು'
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ನಮ್ಮ ಹುಟ್ಟೂರಿಗೆ, ರಾಜ್ಯದ ಜನತೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ನೆರವು ನೀಡುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ಇರಕಲ್‌ಗಡಾ, ಕಿನ್ನಾಳ, ಹಿರೇ ಬೊಮ್ಮನಾಳ, ಕನಕಗಿರಿ ವಿಧಾನಸಭಾ ಕ್ಷೇತ್ರದ ನವಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಕೊಡಲಾಗುತ್ತದೆ ಎಂದರು. ಅಲ್ಲದೇ 60 ಪಲ್ಸ್ ಆಕ್ಸಿಮೀಟರ್, 500 ಆಕ್ಸಿ ಮೀಟರ್ ಮತ್ತು ಮಾಸ್ಕ್‌ಗಳನ್ನು ವಿತರಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್ ದಾಸೋಹ ನಡೆಯಬೇಕು. ಸೋಂಕಿನಿಂದ ಬಳಲುತ್ತಿದ್ದವರಿಗೆ ಆಕ್ಸಿಜನ್ ಕೊರತೆಯಾಗಬಾರದೆಂಬ ಕಾರಣಕ್ಕೆ ಅಮೆರಿಕದಲ್ಲಿರುವ ಕನ್ನಡಿಗರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಂತೋಷ ಕೆಲೋಜಿ ತಿಳಿಸಿದರು.