* ಕೋವಿಡ್‌ಗೆ ಹೆದರಿ ತಪಾಸಣೆ, ಚಿಕಿತ್ಸೆಗೆ ಮುಂದಾಗದ ಗ್ರಾಮಸ್ಥರು
* ಧಾರವಾಡ ತಾಲೂಕಿನ ಲಕಮಾಪುರ ಗ್ರಾಮ
* ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿ ಆರೋಗ್ಯ ತಪಾಸಣೆ
ಧಾರವಾಡ(ಜೂ.03): ಈ ಗ್ರಾಮದಲ್ಲಿ ಕೋವಿಡ್ ಸೋಂಕಿಗಿಂತ ರೋಗದ ಕಾಟ ಜಾಸ್ತಿಯಾಗಿದೆ. ಬೇಸರದ ಸಂಗತಿ ಏನೆಂದರೆ, ಕೋವಿಡ್ ಭಯದಿಂದಾಗಿ ಗ್ರಾಮದ ಬಹುತೇಕ ಚಿಕೂನ್ ಗುನ್ಯಾ ರೋಗಿಗಳು ತಪಾಸಣೆಗೆ ಮನಸ್ಸು ಮಾಡುತ್ತಿಲ್ಲ.
ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಚಿಕೂನ್ ಗುನ್ಯಾ ತಲೆನೋವಾಗಿದ್ದು, ಗ್ರಾಮದ 50ಕ್ಕೂ ಹೆಚ್ಚು ಜನರಿಗೆ ಈ ರೋಗದ ಲಕ್ಷಣಗಳಿವೆ. ಜನರು ಕೋವಿಡ್ ಭಯದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರದೇ ಮನೆಯಲ್ಲಿಯೇ ರೋಗದಿಂದ ನರಳುತ್ತಿರುವುದು ಆರೋಗ್ಯ ಇಲಾಖೆ ಹಾಗೂ ಪಂಚಾಯ್ತಿ ಅಧಿಕಾರಿಗಳಿಗೆ ತಲೆನೋವಾಗಿದೆ. ಇಷ್ಟಾಗಿಯೂ ಮಂಗಳವಾರ ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ.
undefined
ದಷ್ಟಪುಷ್ಟರಾಗಿದ್ದ ಸಹೋದರರನ್ನು ಬಲಿಪಡೆದ ಕೊರೋನಾ
ಈ ಕುರಿತು ಪತ್ರಿಕೆಯೊಂದಿಗೆ ಮಾಹಿತಿ ನೀಡಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್.ಜಿ. ಚಲವಾದಿ, ಗ್ರಾಮದಲ್ಲಿ ಚಿಕೂನ್ ಗುನ್ಯಾ ಪ್ರಕರಣ ದಾಖಲಾಗುತ್ತಿದ್ದಂತೆ ಕಳೆದ ಮೇ 6ರಂದೇ ಇಡೀ ಗ್ರಾಮಕ್ಕೆ ಔಷಧಿ ಸಿಂಪರಿಸಲಾಗಿದೆ. ಈಗಾಗಲೇ ಒಂದು ಬಾರಿ ಲಾರ್ವಾ ಸಮೀಕ್ಷೆ ಸಹ ಮಾಡಿ, ಗಟಾರು ಸ್ವಚ್ಛಗೊಳಿಸಲಾಗಿದೆ. ಗ್ರಾಮಕ್ಕೆ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಬುಧವಾರ ಸಂಜೆ ಮತ್ತೊಮ್ಮೆ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಫಾಗಿಂಗ್ ಮಾಡಿಸಲಾಗಿದೆ. ಜೊತೆಗೆ ಮಂಗಳವಾರ ಮೆಡಿಕಲ್ ಕ್ಯಾಂಪ್ ಸಹ ಮಾಡಿದ್ದು ಗ್ರಾಮಸ್ಥರ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಇಷ್ಟಾಗಿಯೂ ಗ್ರಾಮಸ್ಥರು ರೋಗದ ಲಕ್ಷಣ ಇದ್ದರೆ ಅದನ್ನು ಪಂಚಾಯ್ತಿಗೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಳಿಸುವ ಮೂಲಕ ಚಿಕೂನ್ ಗುನ್ಯಾ ರೋಗದ ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.