ಕುಡಿಯಲು ನೀರು, ಮೇವಿಲ್ಲದೆ ಕಂಗಾಲಾದ ದೇವರ ಎತ್ತುಗಳು ಎರಡು ವಾರದಲ್ಲಿ 5 ಸಾವು!

By Kannadaprabha News  |  First Published Jul 2, 2023, 12:15 PM IST

ಮುಂಗಾರು ಕೈಕೊಟ್ಟಿದ್ದರಿಂದ ಸ್ಥಳೀಯ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರ ಎತ್ತುಗಳು ನೀರು, ಮೇವಿಲ್ಲದೇ ಪರದಾಡುತ್ತಿವೆ. 2 ವಾರದಲ್ಲಿ 5 ದೇವರ ಎತ್ತುಗಳು ಸಾವಿಗೀಡಾಗಿವೆ.


ಭೀಮಣ್ಣ ಗಜಾಪುರ

ಕೂಡ್ಲಿಗಿ (ಜು.2):  ಮುಂಗಾರು ಕೈಕೊಟ್ಟಿದ್ದರಿಂದ ಸ್ಥಳೀಯ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರ ಎತ್ತುಗಳು ನೀರು, ಮೇವಿಲ್ಲದೇ ಪರದಾಡುತ್ತಿವೆ. 2 ವಾರದಲ್ಲಿ 5 ದೇವರ ಎತ್ತುಗಳು ಸಾವಿಗೀಡಾಗಿವೆ.

Latest Videos

undefined

ದೇವರ ಹೆಸರಿನಲ್ಲಿ ದೇಶಿ ತಳಿಯ ಆಕಳು, ಎತ್ತುಗಳನ್ನು ಪೋಷಿಸಿಕೊಂಡು ಬರುತ್ತಿರುವ ಕಿಲಾರಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಾಡಿನಲ್ಲಿ ಜೀವನ ಮಾಡುತ್ತಿದ್ದಾರೆ. ಕೂಡ್ಲಿಗಿ, ಹೊಸಪೇಟೆ, ಆಂಧ್ರಪ್ರದೇಶದ ರಾಯದುರ್ಗ, ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ತಾಲೂಕುಗಳಲ್ಲಿ ಹೆಚ್ಚಾಗಿ ವಾಸಿಸುವ ಮ್ಯಾಸಬೇಡ ಸಮುದಾಯಗಳಲ್ಲಿ ಈ ದೇವರ ಎತ್ತುಗಳು ಪೂಜನೀಯವಾಗಿದ್ದು, ಈ ದೇವರ ಎತ್ತುಗಳನ್ನು ನಿರಂತರವಾಗಿ ಪೋಷಿಸಲು ಕಿಲಾರಿಗಳನ್ನು ನೇಮಕ ಮಾಡಲಾಗುತ್ತದೆ.

ಈ ಕಿಲಾರಿಗಳು ಕಾಡಿನಲ್ಲಿ ಬರಿಗಾಲಿನಲ್ಲಿಯೇ ದೇವರ ಎತ್ತು, ಹಸುಗಳನ್ನು ಮೇಯಿಸುತ್ತಾರೆ. ಇವರು ಸಂಸಾರಿ ಆಗಿದ್ದು, ಸಂಸಾರ ಊರೊಳಗೆ ಇರುತ್ತದೆ. ಈತ ಮಾತ್ರ ಸದಾ ಕಾಡು, ಬೆಟ್ಟಗುಡ್ಡಗಳ ಸಂಚಾರಿ. ಸಂಸಾರ ನೋಡಲು ಆಗಾಗ್ಗೆ ಬರುತ್ತಾರೆ. ತಮ್ಮ ಒಕ್ಕಲು (ಭಕ್ತಾದಿಗಳು) ಮನೆಗಳಿಗೆ ಹೋಗಿ ತನ್ನ ಸಂಸಾರಕ್ಕೆ ಬೇಕಾದ ಹಿಟ್ಟು, ಬಟ್ಟೆ, ಹಣ ಸಂಗ್ರಹಿಸಿಕೊಂಡು ಬಂದು ಮನೆಯವರಿಗೆ ನೀಡಿ ಪುನಃ ದೇವರ ಎತ್ತುಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಾರೆ.

ಅತ್ತ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ; ಇತ್ತ ಸಪ್ತಭಜನೆ ಸುರಿವುದೇ ಮಳೆ?

ಪಾಪೇದೇವರು, ಯರಗಟ್ಟೆನಾಯಕ ದೇವರು, ಹಿರೇಹಳ್ಳಿಯ ದಡ್ಡಿ ಸೂರನಾಯಕ ದೇವರು, ಬೊಮ್ಮದೇವರು ಹೀಗೆ ಆಯಾ ದೇವರ ಎತ್ತುಗಳನ್ನು ಕಾಯುವ ಕಿಲಾರಿಗಳು ಬೇರೆ ಬೇರೆಯೇ ಇರುತ್ತಾರೆ. ಆಯಾ ದೇವರಿಗೆ ಭಕ್ತರು ಸಹ ಇರುತ್ತಾರೆ. ಕೂಡ್ಲಿಗಿ ತಾಲೂಕಿನಲ್ಲೇ ಅಂದಾಜು 2 ಸಾವಿರಕ್ಕೂ ಹೆಚ್ಚು ದೇವರ ಎತ್ತುಗಳಿದ್ದು, 18ಕ್ಕೂ ಹೆಚ್ಚು ಕಿಲಾರಿಗಳು ಕಾಡಿನಲ್ಲಿಯೇ ದೇವರ ಎತ್ತುಗಳ ಜತೆ ವಾಸ ಮಾಡುತ್ತಾರೆ.

ಪೋಷಣೆಗಿಲ್ಲ ಪ್ರೋತ್ಸಾಹ:

ಸರ್ಕಾರ ದೇಶಿತಳಿ ಆಕಳು, ಎತ್ತುಗಳಿಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ. ಆದರೆ ಸದ್ದಿಲ್ಲದೇ ಬುಡುಕಟ್ಟು ಆಚರಣೆಯ ಮೂಲಕ ಸಹಸ್ರಾರು ದೇಶಿತಳಿಯ ಆಕಳು, ಎತ್ತುಗಳನ್ನು ನೂರಾರು ವರ್ಷಗಳ ಕಾಲ ಪೋಷಿಸುತ್ತಾ ಬಂದಿರುವ ಇಲ್ಲಿಯ ಬುಡಕಟ್ಟು ಕಿಲಾರಿಗಳ ಬದುಕಿನ ಬಗ್ಗೆ ಸರ್ಕಾರ ಗಮನಹರಿಸದೆ ಇರುವುದು ವಿಷಾಧದ ಸಂಗತಿ. ದೇಶಿತಳಿಯ ದೇವರ ಎತ್ತುಗಳು ಕಾಡಿನಲ್ಲಿ ಮೇವಿಲ್ಲದೇ ಹಸಿವಿನಿಂದ ಕಂಗಾಲಾಗಿವೆ. ಈಗಲಾದರೂ ಸರ್ಕಾರ ದೇವರ ಎತ್ತುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಬೇಕಿದೆ.

ಬೊಮ್ಮದೇವರಹಟ್ಟಿ ಬಳಿ ದೇವರ ಎತ್ತುಗಳಿಗೆ‌ ಕಾಡ್ತಿದೆ ಮೇವಿನ ಅಭಾವ

ದೇವರ ಎತ್ತುಗಳಿಗೆ ಮೇವು, ನೀರು ತೀರಾ ಅಗತ್ಯವಾಗಿದ್ದು, ತಾಲೂಕಿನ ಗುಡೇಕೋಟೆ ಭಾಗದಲ್ಲಿ ಕೆಲವು ದೇವರ ಎತ್ತುಗಳು ಬೀಡುಬಿಟ್ಟಿದ್ದು, ಭಕ್ತರು ನೀಡಿರುವ ಮೇವು ಸಾಕಾಗುತ್ತಿಲ್ಲ. ಸರ್ಕಾರದಿಂದ ಮೇವು, ನೀರಿನ ಸೌಲಭ್ಯ ನೀಡಬೇಕು.

ಕಿಲಾರಿ ಬೋರಯ್ಯ, ದೇವರ ಎತ್ತುಗಳ ಪೋಷಿಸುವ ವ್ಯಕ್ತಿ

ದೇಶಿ ತಳಿಯ ದೇವರ ಎತ್ತುಗಳಿಗೆ ಈಗ್ಗೆ ಮೂರು ತಿಂಗಳಿಂದಲೂ ಮೇವಿನ ಕೊರತೆಯಾಗಿದ್ದು, ಇತ್ತೀಚೆಗೆ 2 ವಾರಗಳಲ್ಲಿ 5 ದೇವರ ಎತ್ತುಗಳು ಸಾವಿಗೀಡಾಗಿದ್ದು, ಭಕ್ತರಾದ ನಮಗೆ ಆತಂಕ ತಂದಿದೆ.

ಎನ್‌.ಎಸ್‌. ಸುರೇಶ್‌, ಹಿರೇಹಳ್ಳಿಯ ದಡ್ಡಿ ಸೂರನಾಯಕ ದೇವರ ಎತ್ತುಗಳ ಭಕ್ತ

 

ಕಿಲಾರಿಗಳ ಕೈಗಳಿಗೆ ಹಾಗೂ ದೇವರ ಎತ್ತು, ಹಸುಗಳಿಗೆ ಮುದ್ರೆ ಹಾಕ್ತಾರೆ. ಕಿಲಾರಿಗಳು ಮಾಂಸ ಸೇವಿಸುವಂತಿಲ್ಲ. ಕಾಡಿನಲ್ಲಿ ವಾಸಿಸುತ್ತಿದ್ದರೂ ಕಾಲಲ್ಲಿ ಚಪ್ಪಲಿಗಳನ್ನು ಹಾಕುವಂತಿಲ್ಲ. ಕಷ್ಟ- ಕಾರ್ಪಣ್ಯಗಳು ಬಂದಾಗ ಮ್ಯಾಸಬೇಡ ಸಮುದಾಯದಲ್ಲಿ ದೇವರಿಗೆ ದನಗಳನ್ನು ಬಿಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ದನಗಳನ್ನು ದೇವಗಂಪಳ ಎಂದು ಕರೆಯುತ್ತಾರೆ. ಮದುವೆ ಮುಂತಾದ ಕಾರ್ಯಗಳಲ್ಲಿ ದೇವರ ಎತ್ತು ಹಾಗೂ ಕಿಲಾರಿಗಳ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ.

ಡಾ. ವಿರುಪಾಕ್ಷಿ ಪೂಜಾರಹಳ್ಳಿ, ಸಂಶೋಧಕ

click me!