ಬಸವ ಜಯಂತಿ ಪ್ರಯುಕ್ತ ಕೊಪ್ಪಳದಲ್ಲಿ ಎತ್ತಿ‌ನ ಓಟ, ಗಮನಸೆಳೆದ ಸ್ಪರ್ಧೆ

By Suvarna News  |  First Published May 1, 2022, 6:33 PM IST

ಬಸವ ಜಯಂತಿ ಪ್ರಯುಕ್ತ ಕೊಪ್ಪಳದಲ್ಲಿ ಎತ್ತಿ‌ನ ಓಟ, 
ರೋಚಕ ಸ್ಪರ್ಧೆಗೆ ನೆರೆದಿದ್ದವರ ಸಿಳ್ಳೆ-ಚಪ್ಪಾಳೆ
ಗೆದ್ದ ಎತ್ತುಗಳಿಗೆ ಬಹುಮಾನ


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಮೇ.01): ಇನ್ನೇನು ಎರಡು ದಿನಗಳನ್ನು ಕಳೆದರೆ ಬಸವ ಜಯಂತಿ ಹಬ್ಬ ಇದೆ.‌ಈ ಹಿನ್ನಲೆಯಲ್ಲಿ ಈಗಾಗಲೇ ನಾಡಿನಾದ್ಯಂತ ಬಸವ ಜಯಂತಿಯ ಸಂಭ್ರಮ ಮನೆ ಮಾಡುತ್ತಿದೆ. ಇದರ ಮದ್ಯೆ ಇಲ್ಲೊಂದು ಊರಲ್ಲಿ ಬಸವ ಜಯಂತಿ ಪ್ರಯುಕ್ತ ಎತ್ತಿ‌ನ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.ಅಷ್ಟಕ್ಕೂ ಎಲ್ಲಿ ಎತ್ತಿ‌ನ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು, ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಸದಾ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದ ಆ ಎತ್ತುಗಳು ಇಂದು(ಭಾನುವಾರ) ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕೊಪ್ಪಳ ತಾಲೂಕಿನ ದನಕನದೊಡ್ಡಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಇಂದು ಎತ್ತಿ‌ನ ಓಟದ ಸ್ಪರ್ಧೆಯ ಸಂಭ್ರಮ ಮನೆ ಮಾಡಿತ್ತು. ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ 17 ಜೋಡಿ ಎತ್ತುಗಳು ಎತ್ತಿನ ಓಟದ ಸ್ಪರ್ದೆಯಲ್ಲಿ ಭಾಗವಹಿಸಿ, ತಮ್ಮ ತಾಕತ್ತು ಪ್ರದರ್ಶಿಸಿದವು. 

Tap to resize

Latest Videos

ಇದು ಹೇಳಿ ಕೇಳಿ ಬಸವ ಜಯಂತಿಯ ಸಂಭ್ರಮ. ಈ ಸಮಯದಲ್ಲಿ ಎತ್ತುಗಳನ್ನು ಚೇನ್ನಾಗಿ ಅಲಂಕರಿಸಿ,ಪೂಜೆ ಸಲ್ಲಿಸಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ರೈತರಿಗೊಂದು ಸಂಭ್ರಮದ ಸಂದರ್ಭ. ಈ ಹಿನ್ನಲೆಯಲ್ಲಿ  ವರ್ಷಪೂರ್ತಿ ಜಮೀನಿನಲ್ಲಿ ಕೆಲಸ ಮಾಡುವ ಎತ್ತುಗಳಿಗಾಗಿ ಬಸವ ಜಯಂತಿ ಹಿನ್ನಲೆಯಲ್ಲಿ ಎತ್ತಿನ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಎತ್ತಿನ ಓಟದ ಸ್ಪರ್ಧೆಯಲ್ಲಿ ಕೊಪ್ಪಳ ತಾಲೂಕಿನ ದನಕನದೊಡ್ಡಿ, ಅಬ್ಬಿಗೇರಿ,ಹಳೆಕುಮುಟಾ,ಶಹಾಪುರ,ಕೊಪ್ಪಳ, ಕನಕಗಿರಿ ತಾಲೂಕಿನ ಗಂಗನಾಳ ಗ್ರಾಮಗಳ 17 ಜೋಡಿ ಎತ್ತುಗಳು ಭಾಗವಹಿಸಿದ್ದವು. ಈ ಎತ್ತುಗಳು ಒಂದು ಕ್ವಿಂಟಲ್ ಭಾರದ ಧಾನ್ಯದ ಚೀಲವನ್ನು ಎಳೆದುಕೊಂಡು  ತಮ್ಮ ಶಕ್ತಿ ಪ್ರದರ್ಶನ ಮಾಡಿದವು.

ಇನ್ನು ದನಕನದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಎತ್ತಿನ ಓಟದ ಸ್ಪರ್ಧೆಯಲ್ಲಿ ದನಕನದೊಡ್ಡಿ ಗ್ರಾಮದ ನಿಂಗಜ್ಜ ಕುಷ್ಟಗಿ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದರೆ, ಕೆರಹಳ್ಳಿ ಗ್ರಾಮದ ಯಮನೂರಪ್ಪ ಅವರ ಎತ್ತುಗಳು ದ್ವಿತೀಯ ಸ್ಥಾನ ಹಾಗೂ ಹಳೆಕುಮುಟಾ ಗ್ರಾಮದ ಹನುನಂತಪ್ಪ ಯಡೆಹಳ್ಳಿ ಅವರ ಎತ್ತುಗಳು ತೃತೀಯ ಸ್ಥಾನ ಪಡೆದವು. 

ಗೆದ್ದ ಎತ್ತುಗಳಿಗೆ ಬಹುಮಾನ
ಇನ್ನು ಎತ್ತಿನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಎತ್ತುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. ಇನ್ನು ಪ್ರಥಮ ಸ್ಥಾನ ಪಡೆದ ಎತ್ತುಗಳ ಮಾಲೀಕರಿಗೆ 2.5 ಗ್ರಾಂ ಬಂಗಾರ, ದ್ವಿತೀಯ ಸ್ಥಾನ ಪಡೆದ ಎತ್ತಿನ ಮಾಲೀಕರಿಗೆ 11 ತೊಲೆ ಬೆಳ್ಳಿ ಹಾಗೂ ತೃತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕರಿಗೆ 5 ತೊಲೆ ಬಂಗಾರ ಬಹುಮಾನ ವಿತರಿಸಲಾಯಿತು.

ಗ್ರಾಮಸ್ಥರಿಗೆ ಹೊಸ ಚೈತನ್ಯ ತುಂಬಿದ ಎತ್ತಿನ ಓಟದ ಸ್ಪರ್ಧೆ
ಇನ್ನು ಬಸವ ಜಯಂತಿ ಹಿನ್ನಲೆಯಲ್ಲಿ ದನಕನದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಎತ್ತಿನ‌ ಓಟದ ಸ್ಪರ್ಧೆ ಕಾರ್ಯಕ್ರಮವು ದನಕನದೊಡ್ಡಿ ಗ್ರಾಮಸ್ಥರಿಗೆ ಹೊಸ ಚೈತನ್ಯ ತುಂಬಿದೆ ಎಂದು ಹೇಳಬಹುದು. ಇನ್ನು ಎತ್ತಿನ ಓಟದ ಸ್ಪರ್ಧೆ ವೇಳೆ ಗ್ರಾಮಸ್ಥರು ಸಿಳ್ಳೆ,ಕೇಕೆ ಹಾಕುತ್ತ ಎತ್ತುಗಳಿಗೆ ಹಾಗೂ ಅವುಗಳನ್ನು ಓಡಿಸುವವರಿಗೆ ಹುರಿದುಂಬಿಸುತ್ತಿದ್ದರು. 

ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿ,ಕೃಷಿ, ಮರೆಯಾಗುತ್ತಿರುವ ಈ ವೇಳೆಯಲ್ಲಿ ದನಕನದೊಡ್ಡಿ ಗ್ರಾಮಸ್ಥರು ಬಸವ ಜಯಂತಿ ಹನ್ನಲೆಯಲ್ಲಿ ಕೃಷಿ ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ‌ ನೀಡುವ ಸಲುವಾಗಿ ಎತ್ತಿನ ಒಟದ ಸ್ಪರ್ಧೆ ಆಯೋಜಿಸಿರುವುದು ನಿಜಕ್ಕೂ ಖುಷಿಯ ಸಂಗತಿಯೇ ಸರಿ.

click me!