* ದಾವಣಗೆರೆ ಪಾಲಿಕೆಯ ಎರಡು ವಾರ್ಡ್‌ಗಳಿಗೆ ಬೈ ಎಲೆಕ್ಷನ್ ಘೋಷಣೆ
* ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ 2 ವಾರ್ಡ್ ಗಳಲ್ಲಿ ಬೈ ಎಲೆಕ್ಷನ್
* ವಾರ್ಡ್ ಬೈ ಎಲೆಕ್ಷನ್‌ಗೆ ಮುನ್ನ 2 ವಾರ್ಡ್ ಗಳಿಗೆ 11.40 ಕೋಟಿ ಅನುದಾನ ನೀಡಿದ ಬಿಜೆಪಿ
* ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ವರದಿ : ವರದರಾಜ್
ದಾವಣಗೆರೆ ( ಮೇ1 ) ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಸಿದ್ದಪಡಿಸಿ, ಚುನಾವಣೆ ನಡೆಸಲು ಆದೇಶ ಹೊರಡಿಸಿದೆ.ಮೇ 2ಕ್ಕೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು ಮೇ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ.
ಮೇ 10ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಮೇ 12ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ಮೇ 20ರಂದು ಬೆಳಿಗ್ಗೆ 7ರಿಂದ ಸಾಯಂಕಾಲ 5ರವರೆಗೆ ಮತದಾನ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ಮೇ 21ರಂದು ಬೆಳಿಗ್ಗೆ 7ರಿಂದ ಸಾಯಂಕಾಲ 5ರವರೆಗೆ ಮತದಾನ ನಡೆಸಲಾಗುವುದು. ಮೇ 22ರಂದು ಆಯಾ ತಾಲೂಕು ಕೇಂದ್ರ ಸ್ಥಳಗಳಲ್ಲಿ ಮತಗಳ ಎಣಿಕೆ ಬೆಳಿಗ್ಗೆ 8ರಿಂದ ನಡೆಯಲಿದೆ ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.
Davanagere: ನೂತನ ಮನೆಗೆ ನರೇಂದ್ರ ಮೋದಿ ಹೆಸರಿಟ್ಟ ಕಟ್ಟಾ ಅಭಿಮಾನಿ..!
ಚುನಾವಣೆಗೆ ಸಂಬಂಧಪಟ್ಟಂತೆ ಸದಾಚಾರ ಸಂಹಿತೆಯು ಮೇ 2ರಿಂದ ಮೇ 22ರವರೆಗೆ ಚುನಾವಣೆ ನಡೆಯುವ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿ ಇರುತ್ತದೆ.
ದಾವಣಗೆರೆ ಪಾಲಿಕೆ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್-ಬಿಜೆಪಿ ಪೈಟ್
ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 28 ಹಾಗೂ ವಾರ್ಡ್ ಸಂಖ್ಯೆ 37ಕ್ಕೆ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಉಭಯ ವಾರ್ಡುಗಳಲ್ಲಿ ಇದ್ದ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಜೆ ಎನ್ ಶ್ರೀನಿವಾಸ್ ಅವರ ಪತ್ನಿ ಶ್ವೇತಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿ ಒಂದು ವಾರ ಕಳೆಯುವಷ್ಟರಲ್ಲೇ ಚುನಾವಣೆ ಅಧಿಸೂಚನೆ ಹೊರಬಿದ್ದಿದ್ದು ಈ ಎರಡೂ ವಾರ್ಡ್ಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಚುನಾವಣೆ ಘೋಷಣೆ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾಗುವ ತರಾತುರಿಯಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್, ಶಾಸಕ ಎಸ್ ಎ ರವೀಂದ್ರನಾಥ್ 11. 40 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದಾರೆ.
ಬೈ ಎಲೆಕ್ಷನ್‌ಗೂ ಮುನ್ನ ಎರಡು ವಾರ್ಡ್‌ಗಳಿಗೆ ಬಿಜೆಪಿ ಭರ್ಜರಿ ಅನುದಾನ
ಜೆ ನ್ ಶ್ರೀನಿವಾಸ ಹಾಗು ಪತ್ನಿ ಕಾಂಗ್ರೆಸ್ ಇಬ್ಬರು ಸದಸ್ಯರಾಗಿದ್ದು ಕಳೆದ ವಾರವಷ್ಟೇ ಬಿಜೆಪಿ ಸೇರಿದ್ದರು. ಯಡಿಯೂರಪ್ಪ ಆರ್ ಆಶೋಕ್ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಜೆ ಎನ್ ಶ್ರೀನಿವಾಸ್ ಅವರ ಪತ್ನಿ ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿ ಒಂದು ವಾರದಲ್ಲೇ ಆ ವಾರ್ಡ್ ಗಳಿಗೆ ಆಡಳಿತ ರೂಢ ಬಿಜೆಪಿ ಪಕ್ಷ 11 .40 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಮಹಾತ್ಮ ಗಾಂಧಿ ವಿಕಾಸ ಯೋಜನೆ ಮತ್ತು ಮಹಾನಗರ ಪಾಲಿಕೆ ಅನುದಾನದಲ್ಲಿ 28 ಮತ್ತು 37 ನೇ ವಾರ್ಡ್ ಗಳಲ್ಲಿ ಒಟ್ಟು ನಾಲ್ಕು ಹಂತದ ಕಾಮಗಾರಿಗೆ ಸಂಸದ ಜಿ ಎಂ ಸಿದ್ದೇಶ್ವರ್ ಹಾಗು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್ ಎ ರವೀಂದ್ರನಾಥ ಶಂಕುಸ್ಥಾಪನೆ ನೆರೆವೇರಿಸಿದ್ದಾರೆ. ಚರಂಡಿ, ಕಾಂಕ್ರೀಟ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮೂರು ತಿಂಗಳ ಒಳಗಾಗಿ ಮುಗಿಸಲು ಸಂಸದರು ಸೂಚನೆ ನೀಡಿದ್ದಾರೆ. ಬಹುಶಃ ಪಾಲಿಕೆ ಸದಸ್ಯ ಜೆ ಎನ್ ಶ್ರೀನಿವಾಸ ಆಸೆ ಇವತ್ತು ನೆರವೇರಿದೆ. ಅವರು ಕಾಂಗ್ರೆಸ್‌ನಲ್ಲಿದ್ದು ಏನು ಆಗಲಿಲ್ಲ ಕಾಂಗ್ರೆಸ್ ನಲ್ಲಿದ್ದುದರಿಂದ 1 ಕೋಟಿ ಅನುದಾನ ಬಂದಿರಲಿಲ್ಲ .ಬಿಜೆಪಿ ಸೇರಿದ ನಂತರ ಅವರ ಅದೃಷ್ಟ ಬದಲಾಗಿದೆ ಎಂದು ಜಿ ಎಂ ಸಿದ್ದೇಶ್ವರ್ ಹೇಳಿದರು. ಮುಂದಿನ ಪಾಲಿಕೆ ಚುನಾವಣೆಯಲ್ಲಿ ಆ ದಂಪತಿಗಳನ್ನು ಗೆಲ್ಲಿಸಬೇಕೆಂದು ವಾರ್ಡ್ ನ ಜನತೆಯಲ್ಲಿ ಜಿ ಎಂ ಸಿದ್ದೇಶ್ವರ್ ಮನವಿ ಮಾಡಿದರು.
ವಾರ್ಡ್ ಜನತೆ ಮುಖ್ಯ ಎಂದ ಮಾಜಿ ಸದಸ್ಯ ಜೆ ಎನ್ ಶ್ರೀನಿವಾಸ್
ನನ್ನ ವಾರ್ಡ್ ನ ಜನರಿಗೆ ಕೆಲಸ ಆಗಬೇಕಿತ್ತು. ಅದಕ್ಕಾಗಿ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬೇಕಾಯಿತು. ನನಗೆ ಆ ಪಕ್ಷ ಈ ಪಕ್ಷ ಎಂಬುದೇನು ಇಲ್ಲ.ನನಗೆ ನನ್ನ ವಾರ್ಡ್ ನ ಕೆಲಸ ಆಗಬೇಕಿತ್ತು ಅದಕ್ಕೆ ಬಂದೇ. ಕಾಂಗ್ರೆಸ್ ನವರು ಮೇಯರ್ ಮಾಡಲಿಲ್ಲ ಎಂಬ ಬೇಸರವೇನು ಇಲ್ಲ. ನನಗೆ ಮೇಯರ್ ಆಗಬೇಕೆಂಬ ಉದ್ದೇಶ ಇಲ್ಲ. ನನಗೆ ನನ್ನ ವಾರ್ಡಿನ ಕೆಲಸ ಆಗಬೇಕಿತ್ತು ಅದಕ್ಕಾಗಿ ನಾನು ಬಂದೇ ಇದೀಗ 11 ಕೋಟಿ ವೆಚ್ಚದ ನಾಲ್ಕು ಕೆಲಸಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಜೆ ಎನ್ ಶ್ರೀನಿವಾಸ್ ಹೇಳಿದರು.
ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಜೆ ಎನ್ ಶ್ರೀನಿವಾಸ್ ಪತ್ನಿ ಶ್ವೇತಾ ಶ್ರೀನಿವಾಸ್ ಕಾಂಗ್ರೆಸ್ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವುದು ಜಿಲ್ಲಾ ಕಾಂಗ್ರೇಸ್ ಗೆ ಬಿಗ್ ಶಾಕ್ ನೀಡಿದಂತಾಗಿದೆ. ದಾವಣಗೆರೆ ಕಾಂಗ್ರೆಸ್ ನ ದೊಡ್ಡ ಶಕ್ತಿಯಾಗಿರುವ ಶಾಮನೂರು ಕುಟುಂಬಕ್ಕೆ ಇದು ಸವಾಲ್ ಆಗಿದ್ದು 28 ಮತ್ತು 37 ನೇ ವಾರ್ಡ್ ನಲ್ಲಿ ದಂಪತಿಗಳನ್ನು ಚುನಾವಣೆ ಸೋಲಿಸಲು ರಣತಂತ್ರ ರೂಪಿಸುತ್ತಿದೆ. ರೌಡಿಶೀಟರ್ ಹಿನ್ನಲೆಯುಳ್ಳ ಅಭ್ಯರ್ಥಿಯನ್ನು ಸೋಲಿಸಲು ಪೈಪೋಟಿ ನೀಡುವ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ ತೊಡಗಿದೆ. ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳಿಗೆ ವಾರ್ಡ್ ಬೈ ಎಲೆಕ್ಷನ್ ಪ್ರತಿಷ್ಠೆಯಾಗಿರುವುದಂತು ಸತ್ಯ.