ಮಹಿಳೆಯರ ಉಚಿತ ಪ್ರಯಾಣ: 'ಶಕ್ತಿ' ಮೀರಿ ಪ್ರಯಾಣಿಸಿದರೆ ಓವರ್ ಲೋಡ್ ಕೇಸ್?

By Kannadaprabha NewsFirst Published Sep 27, 2024, 9:06 AM IST
Highlights

ಮಂಗಳೂರು ನಗರದಲ್ಲಿ ಕೆಎಸ್‌ಆರ್‌ಟಿಸಿಯ ನರ್ಮ್ ಬಸ್‌ ಗಳು ಸಂಚರಿಸುತ್ತಿವೆ. 'ಶಕ್ತಿ' ಯೋಜನೆಯಿಂದಾಗಿ ಬಸ್ ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಈ ಬಸ್‌ಗಳು ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತವೆ. ಕಡಿಮೆ ಸೀಟು ಸಾಮರ್ಥದ ನರ್ಮ್ ಬಸ್ ಗಳಲ್ಲಿ ಪ್ರಯಾಣಿಕರ ಓವರ್ ಲೋಡ್, ಫುಟ್ ಬೋರ್ಡ್‌ ನಲ್ಲಿ ನಿಲ್ಲುವ ಸಮಸ್ಯೆ ತಲೆದೂರಿದೆ. 

ಆತ್ಮ ಭೂಷಣ್ 

ಮಂಗಳೂರು(ಸೆ.27):  ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದ ತುಂಬಿ ತುಳುಕುತ್ತಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ)ದ ಬಸ್‌ಗಳು ಈಗ ಪೊಲೀಸರ ಓವರ್ ಲೋಡ್ ಕೇಸ್ ಎದುರಿಸುವಂತಾಗಿದೆ. ಇತ್ತೀಚೆಗೆ ಖಾಸಗಿ ಬಸ್‌ ವೊಂದರಲ್ಲಿ ಓವರ್‌ ಲೋಡ್ ಆಗಿ, ತಲಪಾಡಿ ಹಾಗೂ ನಿಟ್ಟೆಯಲ್ಲಿ ಪುಟ್ ಬೋರ್ಡ್‌ನಿಂದ ಕೆಳಕ್ಕೆ ಬಿದ್ದು ಒಬ್ಬ ಮೃತಪಟ್ಟಿದ್ದ. ಓವರ್ ಲೋಡ್ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೂ ಒಳಗಾಗಿತ್ತು. ಬಳಿಕ, ಪೊಲೀಸರು ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. 

Latest Videos

ಮಂಗಳೂರು ನಗರದಲ್ಲಿ ಕೆಎಸ್‌ಆರ್‌ಟಿಸಿಯ ನರ್ಮ್ ಬಸ್‌ ಗಳು ಸಂಚರಿಸುತ್ತಿವೆ. 'ಶಕ್ತಿ' ಯೋಜನೆಯಿಂದಾಗಿ ಬಸ್ ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಈ ಬಸ್‌ಗಳು ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತವೆ. ಕಡಿಮೆ ಸೀಟು ಸಾಮರ್ಥದ ನರ್ಮ್ ಬಸ್ ಗಳಲ್ಲಿ ಪ್ರಯಾಣಿಕರ ಓವರ್ ಲೋಡ್, ಫುಟ್ ಬೋರ್ಡ್‌ ನಲ್ಲಿ ನಿಲ್ಲುವ ಸಮಸ್ಯೆ ತಲೆದೂರಿದೆ. ನರ್ಮ್ ಬಸ್‌ನಲ್ಲಿ ಕುಳಿತುಕೊಳ್ಳುವ ಸಾಮರ್ಥ 30 ಸೀಟು ಇದು, 70 ಮಂದಿಗೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಅಲ್ಲದೆ, ಬಸ್‌ನ ಫುಟ್‌ ಬೋರ್ಡ್‌ ನಲ್ಲಿ ನಿಂತುಕೊಂಡು ಸಂಚರಿಸುವುದೂ ಇದೆ. ಇದು ಸಂಚಾರಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದು, ಈಗ ಓವರ್ ಲೋಡ್ ಕೇಸ್‌ನ ಎಚ್ಚರಿಕೆ ನೀಡುತ್ತಿದ್ದಾರೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ನಗರ ಸಾರಿಗೆ ಬಸ್‌ಗಳು ಓವರ್ ಲೋಡ್ ಆಗಿ ಸಂಚರಿಸುತ್ತಿವೆ. ತಲಪಾಡಿ, ಮುಡಿಪು ಮಾತ್ರವಲ್ಲ ಧರ್ಮಸ್ಥಳ, ಪುತ್ತೂರು ನಡುವೆ ಸಂಚರಿಸುವ ಬಸ್‌ಗಳೂ ಈ ಹೊತ್ತಿನಲ್ಲಿ ತುಂಬಿ ತುಳುಕುತ್ತಿವೆ. 

ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪ್ರಯಾಣದ ಕೊಡುಗೆ ಕೊಟ್ಟ ಸಾರಿಗೆ ಸಂಸ್ಥೆ!

ಓವರ್‌ ಲೋಡ್‌ ಕಂಡು ಬಂದರೆ ನಿರ್ವಾಹಕರ ಮೇಲೆ ಕೇಸು ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಪೊಲೀಸರ ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ-ನಿರ್ವಾಹಕರು ಓವರ್ ಲೋಡ್‌ಗೆ ಅವಕಾಶ ನೀಡದೆ, ಕೆಲವು ಸ್ಟಾಪ್‌ಗಳಲ್ಲಿ ಬಸ್ ಗಳನ್ನು ನಿಲ್ಲಿಸದೆ ಓಡಿಸಲು ಯತ್ನಿಸುತ್ತಿದ್ದಾರೆ. ಇದು ಬೆಳಗ್ಗೆ ಮತ್ತು ಸಂಜೆ ವೇಳೆ ಕಚೇರಿ, ಶಾಲಾ ಕಾಲೇಜಿಗೆ ತೆರಳುವವರಿಗೆ ತೊಂದರೆಯಾಗುತ್ತಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. 
ಮಂಗಳೂರು ನಗರದಲ್ಲಿ ಇನ್ನೂ ಹೆಚ್ಚಿನ ರೂಟ್‌ಗಳಲ್ಲಿ ಬಸ್ ಸಂಚಾರಕ್ಕೆ ಪರವಾನಗಿ ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಕೆಎಸ್‌ಆರ್‌ಟಿಸಿ ಮನವಿ ಸಲ್ಲಿಸಿದೆ. ಆದರೆ, ಹೆಚ್ಚುವರಿ ಬಸ್‌ಗಳು ಇನ್ನೂ ಬಂದಿಲ್ಲ. 

ಬಿಜೆಪಿ ನೂರು ಜನ್ಮ ತಾಳಿದ್ರೂ ಗ್ಯಾರಂಟಿ ಯೋಜನೆ ನಿಲ್ಲಿಸೋಕಾಗಲ್ಲ: ಡಿಕೆ ಶಿವಕುಮಾರ ವಾಗ್ದಾಳಿ!

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ನಡೆಸುವ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ಬೆಂಬಲ ವ್ಯಕ್ತಪಡಿಸುತ್ತದೆ. ನಿಗಮದಿಂದಲೂ ಪ್ರತ್ಯೇಕ ತಂಡ ರಚಿಸಿ ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಓವರ್ ಲೋಡ್ ಆಗದಂತೆ ಚಾಲಕ-ನಿರ್ವಾಹಕರಿಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ. 

ಯಾವುದೇ ವಾಹನಗಳಲ್ಲಿ ಫುಟ್ ಬೋರ್ಡ್‌ಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ, ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮಾನುಸಾರ ಓವರ್‌ಲೋಡ್ ಕೂಡ ಹಾಕುವಂತಿಲ್ಲ. ಸುರಕ್ಷತೆ ಸಲುವಾಗಿ ಕಠಿಣ ಕ್ರಮ ಅನಿವಾರ್ಯ ಎಂದು ಮಂಗಳೂರು ಸಂಚಾರಿ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ. 

click me!