Shivamogga: ಶಿವಮೊಗ್ಗಕ್ಕೆ ಹಲವು ರೈಲ್ವೆ ಅಭಿವೃದ್ಧಿಯ ಭರವಸೆ ನೀಡಿದ ವಿ.ಸೋಮಣ್ಣ

By Santosh NaikFirst Published Sep 27, 2024, 8:59 AM IST
Highlights

ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಕೋಚಿಂಗ್ ಟರ್ಮಿನಲ್ 2026ರ ವೇಳೆಗೆ ಪೂರ್ಣಗೊಳ್ಳಲಿದೆ. ₹80 ಕೋಟಿ ವೆಚ್ಚದ ಈ ಯೋಜನೆಯು ಪ್ಲಾಟ್‌ಫಾರ್ಮ್‌ಗಳು ಮತ್ತು ಸ್ಟೇಬ್ಲಿಂಗ್ ಲೈನ್‌ಗಳನ್ನು ಒಳಗೊಂಡಿರುತ್ತದೆ. ಸಚಿವ ಸೋಮಣ್ಣ ಅವರು ಈ ಯೋಜನೆಯ ಕುರಿತು ಮಾಹಿತಿ ನೀಡಿದರು ಮತ್ತು ಶಿವಮೊಗ್ಗದ ಇತರ ರೈಲ್ವೇ ಯೋಜನೆಗಳ ಪ್ರಗತಿ ಪರಿಶೀಲಿಸಿದರು.

ಶಿವಮೊಗ್ಗ (ಸೆ.27): ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ನಿರ್ಮಿಸುತ್ತಿರುವ ರೈಲ್ವೇ ಕೋಚಿಂಗ್ ಟರ್ಮಿನಲ್ 2026ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಗುರುವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಪ್ಲಾಟ್‌ಫಾರ್ಮ್‌ಗಳು ಮತ್ತು ಸ್ಟೇಬ್ಲಿಂಗ್ ಲೈನ್‌ಗಳನ್ನು ಒಳಗೊಂಡಿರುವ ಕೋಚಿಂಗ್ ಟರ್ಮಿನಲ್ ಅನ್ನು ₹80 ಕೋಟಿ ವೆಚ್ಚದಲ್ಲಿ 74 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. 2026ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆ ಪಡೆದಿರುವ ಏಜೆನ್ಸಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ರೈಲ್ವೆ ಸಚಿವ ವಿ. ಸೋಮಣ್ಣ ಭೇಟಿಯಿಂದ ಸಿಕ್ಕಿದ್ದೇನು ಅನ್ನೋದರ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಸಚಿವರ ಮುಂದೆ ಶಿವಮೊಗ್ಗದ ಜನತೆ ಹಲವು ಬೇಡಿಕೆಗಳನ್ನು ಇಟ್ಟಿತ್ತು.

ಶಿವಮೊಗ್ಗ- ಬೀರೂರು ಮಾರ್ಗದ ಡಬ್ಲಿಂಗ್ ಕಾಮಗಾರಿ ಶೀಘ್ರವೇ ಆರಂಭವಾಗಬೇಕು. ಕುಂಸಿ, ಹಾರಹಳ್ಳಿ ಹಾಗೂ ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಎಲ್ಲ ರೈಲುಗಳಿಗೆ ನಿಲುಗಡೆ ನೀಡಬೇಕು.  ಭದ್ರಾವತಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು.  ಶಿವಮೊಗ್ಗದ ಉಷಾ ನರ್ಸಿಂಗ್‌ ಹೋಂ ಸರ್ಕಲ್ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸವಾಗಬೇಕು. ಶಿವಮೊಗ್ಗಕ್ಕೆ ವಂದೇ ಭಾರತ್‌ ರೈಲು ಸೇವೆ ಒದಗಿಸಬೇಕು.  ಅಮೃತ್‌ ಭಾರತ್ ನಿಲ್ದಾಣ ಯೋಜನೆಯಡಿ ತಾಳಗುಪ್ಪ, ಸಾಗರ, ಶಿವಮೊಗ್ಗ ನಿಲ್ದಾಣ ಆಯ್ಕೆಯಾಗಿದೆ. ಇದಕ್ಕಾಗಿ ಶಿವಮೊಗ್ಗಕ್ಕೆ 20 ಕೋಟಿ ರೂ. ಕೊಟ್ಟಿದ್ದಾರೆ. ಇನ್ನೂ 25 ಕೋಟಿ ರೂ. ಅನುದಾನ ಬೇಕು.  ಭದ್ರಾವತಿ ನಿಲ್ದಾಣವನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಅವರು ವಿ. ಸೋಮಣ್ಣ ಎದುರು ಬೇಡಿಕೆಗಳನ್ನು ಇಟ್ಟಿದ್ದಾರೆ.

ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ನೂತನ ಮಾರ್ಗಕ್ಕೆ ಸಂಬಂಧಿಸಿ ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಕಾಮಗಾರಿಯಲ್ಲಿ ಪ್ರಗತಿಯಾಗಿಲ್ಲ. ಶಿವಮೊಗ್ಗದ ಕೋಟೆ ಗಂಗೂರು ನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ಶೇ.28ರಷ್ಟಾಗಿದೆ ಎನ್ನುವ ಮಾಹಿತಿಯನ್ನು ಸೋಮಣ್ಣ ಪಡೆದುಕೊಂಡಿದ್ದಾರೆ.

ರೈಲ್ವೆ ಅಭಿವೃದ್ಧಿ ಬಗ್ಗೆ ಸಚಿವರು ನೀಡಿದ ಭರವಸೆಗಳೇನು?:  ಶಿವಮೊಗ್ಗ-ಶಿಕಾರಿಪುರ ಮಾರ್ಗದ ಕಾಮಗಾರಿ 2023 ಡಿಸೆಂಬರ್‌ಗೆ ಆರಂಭವಾಗಿದ್ದು, 2025ರ ಜೂನ್‌ಗೆ ಮುಕ್ತಾಯ ಆಗಲಿದೆ. ಬೀರೂರು-ಶಿವಮೊಗ್ಗ ಮಾರ್ಗದ ಡಬ್ಲಿಂಗ್ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಮಗಾರಿ ಆರಂಭವಾಗಲಿದೆ. ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ಪಿಟ್‌ಲೈನ್ ಕಾಮಗಾರಿ ಬಳಿಕ ಯಶವಂತಪುರ ಶಿವಮೊಗ್ಗ ವಂದೇ ಭಾರತ್ ರೈಲು ಸೇವೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Latest Videos

ಶಿವಮೊಗ್ಗದಿಂದ ಉತ್ತರ ಕರ್ನಾಟಕಕ್ಕೆ ರೇಲ್ವೆ ಯೋಜನೆ: ಕೇಂದ್ರ ಸಚಿವ ಸೋಮಣ್ಣ ಹೇಳಿದ್ದಿಷ್ಟು

ಶಿಕಾರಿಪುರದಿಂದ ರಾಣೆಬೆನ್ನೂರು ರೈಲ್ವೆ ಮಾರ್ಗದಲ್ಲಿ ಭೂ ಸ್ವಾದಿನ ಪ್ರಕ್ರಿಯೆ ಇದೇ ವರ್ಷ ಡಿಸೆಂಬರ್ ಅಂತ್ಯದೊಳಗೆ ಪೂರ್ಣವಾಗಬೇಕು. ಶಿವಮೊಗ್ಗದ ಉಷಾ ನರ್ಸಿಂಗ್ ಹೋಮ್ ಸರ್ಕಲ್ ಅಭಿವೃದ್ಧಿಗೆ ರೈಲ್ವೆ ಇಲಾಖೆಯಿಂದ 2 ಕೋಟಿ ರೂ ಅನುದಾನ ನೀಡಲಾಗುತ್ತದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರ್ಮ್ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ನೀಡಲಿದ್ದೇವೆ. ಅಮೃತ್ ಭಾರತ್ ಯೋಜನೆ ಅಡಿ ಉನ್ನತ ದರ್ಜೆಗೆ ಏರಿಸಲು ಭದ್ರಾವತಿ ರೈಲ್ವೆ ನಿಲ್ದಾಣ ಸೇರ್ಪಡೆಯಾಗಲಿದೆ. ತಾಳಗುಪ್ಪ - ಶಿರಸಿ -ಹುಬ್ಬಳ್ಳಿ ರೈಲ್ವೆ ಮಾರ್ಗದ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶವಮೊಗ್ಗ ರೈಲ್ವೆ ನಿಲ್ದಾಣವನ್ನು ತುಮಕೂರು ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯ ಅನುದಾನ. ಶಿವಮೊಗ್ಗ ತಾಲೂಕಿನ ಕೋಟೆ ಗಂಗೂರು ಗ್ರಾಮದ 74 ಎಕರೆ ಪ್ರದೇಶದಲ್ಲಿ 80 ಕೋಟಿ ರೂ ವೆಚ್ಚದಲ್ಲಿ ಕೋಚಿಂಗ್ ಡಿಪೋ ನಿರ್ಮಾಣ 2026 ಕ್ಕೆ ಪೂರ್ಣ  ಆಗಲಿದೆ ಎಂದು ತಿಳಿಸಿದ್ದಾರೆ.

Shivamogga: ಶಿವಮೊಗ್ಗಕ್ಕೆ ಬರಲಿದೆ ವಂದೇ ಭಾರತ್‌ ರೈಲು!

click me!