ಕಳಸಾ ಬಂಡೂರಿ ಯೋಜನೆ ಪೂರ್ಣಗಳಿಸಿ| ಕಳಸಾ ಬಂಡೂರಿ ಹೋರಾಟಗಾರರಿಂದ ಒತ್ತಾಯ| ಕೇಂದ್ರ, ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ| ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇವೆ| ಉತ್ತರ ಕರ್ನಾಟಕ ಭಾಗದವರೇ ಆಗಿರುವ ಜಾರಕಿಹೊಳಿ ಅವರೇ ಜಲಸಂಪನ್ಮೂಲಗಳ ಸಚಿವರಾಗಿದ್ದಾರೆ, ಕೂಡಲೇ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಆಗ್ರಹ|
ಗದಗ(ಜೂ.25): ಕಳಸಾ ಬಂಡೂರಿ ಯೋಜನೆ ಪೂರ್ಣಗೊಳ್ಳಲು ಇದ್ದ ಕಾನೂನು ಅಡೆತಡೆಗಳೆಲ್ಲ ನಿವಾರಣೆಯಾದರೂ ಕಾಮಗಾರಿ ಮುಗಿಸಿ ಯೋಜನೆ ಪೂರ್ಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಯನ್ನು ಕಡೆಗಣಿಸುತ್ತಿವೆ ಎಂದು ಮಹಾದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕಳಸಾ ಬಂಡೂರಿ ಹೋರಾಟಗಾರರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ವೀಕ್ಷಣೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಕಳೆದ 25 ವರ್ಷಳಿಂದ ಕಳಸಾ ಬಂಡೂರಿ ಯೋಜನೆ ಶಾಶ್ವತವಾಗಿ ಜಾರಿಗೆ ತಂದು ಕರ್ನಾಟಕ ಪಾಲಿನ ನೀರನ್ನು ರೈತರಿಗೆ ಹಾಗೂ ಉತ್ತರ ಕರ್ನಾಟಕದ ಜನರಿಗೆ ಒದಗಿಸುವಲ್ಲಿ ಮಲತಾಯಿ ಧೋರಣೆ ಅನುಭವಿಸುತ್ತಿದ್ದೇವೆ. ಸರ್ಕಾರ ಕಳಸಾ ಬಂಡೂರಿ ವಿಷಯದಲ್ಲಿ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿಯೇ ಕಾಲ ಹರಣ ಮಾಡಿದೆ. ಯೋಜನೆಯು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಒಂದು ಹಳ್ಳಗಳ ಜೋಡಣೆಯ ವಿಷಯವಾಗಿದೆ. ಇದರಲ್ಲಿ ರಾಜಕೀಯ ಬೇರೆಸಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯಯೇತರ ಕಾಮಗಾರಿ ಮುಗಿದಿದ್ದು, ಕೇವಲ 450 ಮೀ. ಅರಣ್ಯ ಮೀಸಲು ಪ್ರದೇಶದಲ್ಲಿ ಕಾಮಗಾರಿ ಮಾತ್ರ ಬಾಕಿ ಇದ್ದು ವಿನಾಕಾರಣ ಕಾಲ ಹರಣ ಮಾಡಿ ಈ ಬೃಹತ್ ಯೋಜನೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಹದಾಯಿ,ಭೀಮಾ, ಕಳಸಾ, ಬಂಡೂರಿ; ಸಂಪುಟ ಸಭೆಯಲ್ಲಿ ರಾಜ್ಯದ ನೀರಾವರಿಗೆ ಬಂಪರ್ ಗಿಫ್ಟ್!
ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇವೆ. ಉತ್ತರ ಕರ್ನಾಟಕ ಭಾಗದವರೇ ಆಗಿರುವ ಜಾರಕಿಹೊಳಿ ಅವರೇ ಜಲಸಂಪನ್ಮೂಲಗಳ ಸಚಿವರಾಗಿದ್ದಾರೆ. ಕೂಡಲೇ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಂಖಡರಾದ ಡಾ. ಶಿವಯೋಗಿ ಹಿರೇಮಠ, ಶಂಕ್ರಪ್ಪ ಹುಲಿ, ಅಶೋಕ ಜಾನೋಪಂತರ, ಜಿ.ಆರ್. ತಿಮ್ಮರೆಡ್ಡಿ, ಗುರಪ್ಪ ಕಡ್ಲಿಕೊಪ್ಪ, ಶಂಕ್ರಪ್ಪ ಏರಗುಪ್ಪಿ, ಮಲ್ಲಪ್ಪ ಹಾರೋಗೊಂಚಿ, ವೀರನಗೌಡ ಹಾಲನಗೌಡ್ರ, ಶಂಕ್ರಪ್ಪ ಒದರಿ, ರುದ್ರಗೌಡ ರಾಚನಗೌಡ್ರ ಮುಂತಾದವರು ಇದ್ದರು.