ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧಿಸಿ ಇಂದು ಬಳ್ಳಾರಿ ಬಂದ್| ಟೈರ್‌ಗೆ ಬೆಂಕಿ ಹಚ್ಚಿ ಬಂದ್ ಪ್ರಾರಂಭಿಸಿದ್ದಾರೆ ಹೋರಾಟಗಾರರು| ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆಗೆ ತೀವ್ರ ವಿರೋಧ|
ಬಳ್ಳಾರಿ(ನ.26): ಅಖಂಡ ಬಳ್ಳಾರಿ ಜಿಲ್ಲೆಗಾಗಿ ಆಗ್ರಹಿಸಿದ ಹೋರಾಟಗಾರರು ಇಂದು(ಗುರುವಾರ) ಬೆಳಿಗ್ಗೆ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎರಡು ಕತ್ತೆಗಳನ್ನು ತಂದ ಹೋರಾಟಗಾರರು ಒಂದು ಕತ್ತೆ ಯಡಿಯೂರಪ್ಪ ಮತ್ತೊಂದು ಕತ್ತೆ ಆನಂದ ಸಿಂಗ್ ಎಂದು ಕೂಗಿ ಕತ್ತೆ ಮೇಲೆ ಕುಳಿತು ಉಭಯ ನಾಯಕರ ವಿರುದ್ಧ ಹೋರಾಟಗಾರರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಗೆ ವಿರೋಧಿಸಿ ಇಂದು ಬಳ್ಳಾರಿ ಬಂದ್ ಕರೆ ನೀಡಲಾಗಿದೆ. ಹೀಗಾಗಿ ನಗರದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಂದ್ ಪ್ರಾರಂಭಿಸಿದ್ದಾರೆ ಹೋರಾಟಗಾರರು. ನಗರದ ರಾಯಲ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆಯನ್ನ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆ ಉಳಿವಿಗಾಗಿ ಒತ್ತಾಯಿಸಿದ 15 ಕ್ಕೂ ವಿವಿಧ ಸಂಘಟನೆಗಳು ಮತ್ತು ಆಟೋ ಚಾಲಕರು ಬಳ್ಳಾರಿ ಬಂದ್‌ಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿವೆ. ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಳ್ಳಾರಿ ಬಂದ್ ಮಾಡಲಾಗುತ್ತಿದೆ.
'ಸಿಂಗ್ ಸ್ವಾರ್ಥಕ್ಕಾಗಿ ಜಿಲ್ಲೆ ಇಬ್ಭಾಗ ಸರಿಯೇ?, ಅಖಂಡ ಬಳ್ಳಾರಿ ಹೋರಾಟಕ್ಕೆ ಸಜ್ಜಾಗಿ'
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಬಂದ್ ನಡೆಯಲಿದೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ, ಕೈ ಶಾಸಕ ನಾಗೇಂದ್ರ ಬಹಿರಂಗವಾಗಿ ಬಂದ್‌ನಲ್ಲಿ ಭಾಗಿಯಾಗುವುದಿಲ್ಲ, ಆದರೆ ನೈತಿಕ ಬೆಂಬಲ ಮಾತ್ರ ಎಂದು ಘೋಷಣೆ ಮಾಡಿದ್ದಾರೆ.
ಈಗಾಗಲೇ ನಗರದ ರಾಯಲ್ ವೃತ್ತದಲ್ಲಿ ಮಾನವ ಸರಪಳಿ ಮಾಡುವ ಮೂಲಕ ಹೋರಾಟಗಾರರು ರಸ್ತೆ ತಡೆ ಮಾಡಿದ್ದಾರೆ. ನಗರದಲ್ಲಿ ಬರುತ್ತಿರುವ ವಾಹನ ಸವಾರರಿಗೆ ಬಂದ್ ಗೆ ಬೆಂಬಲಿಸಿ ಬಳ್ಳಾರಿ ಉಳಿವಿಗಾಗಿ ನಮ್ಮ ಕೈಜೋಡಿಸಿ ಎಂದು ಹೋರಾಟಗಾರರು ಮನವಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಆನಂದ ಸಿಂಗ್ ಫೋಟೋಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.