ಬಳ್ಳಾರಿಯಲ್ಲಿ ಸಭೆ ನಡೆಸಿದ ಕಲಾವಿದರು| ಹಂಪಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ| ಮೂರು ದಿನ ಉತ್ಸವ ನಡೆಸಬೇಕು ಎಂದು ಒತ್ತಾಯ|
ಬಳ್ಳಾರಿ(ನ.08): ಹಂಪಿ ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ಧೋರಣೆಗೆ ಜಿಲ್ಲೆಯ ಕಲಾವಿದರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜಿಲ್ಲೆಯ ಕಲಾವಿದರ ಸಭೆ ಕರೆಯದೆ ಏಕಾಏಕಿ ಅಂತಾರಾಷ್ಟ್ರೀಯ ಮಟ್ಟದ ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರ ಹಾಗೂ ಜಿಲ್ಲಾಡಳಿತ ನಡೆ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲು ಕಲಾವಿದರು ನಿರ್ಧರಿಸಿದ್ದು, ನವೆಂಬರ್ 13ರ ಉತ್ಸವ ದಿನದಂದು ಹಂಪಿಗೆ ತೆರಳಿ ಕಲಾವಿದರು ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.
ನಗರದ ಸ್ನೇಹಸಂಪುಟ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿದ ಕಲಾವಿದರು ಒಂದು ದಿನದ ಉತ್ಸವ ನಡೆಸಲು ತರಾತುರಿ ನಿರ್ಧಾರ ಕೈಗೊಂಡಿರುವ ಸರ್ಕಾರದ ಧೋರಣೆಯನ್ನು ಖಂಡಿಸಿದರಲ್ಲದೆ, ಕಲಾವಿದರಿಗೆ ವೇದಿಕೆ ಅವಕಾಶ ನೀಡದೆ ಉತ್ಸವ ನಡೆಸುವುದರಿಂದಾಗುವ ಪ್ರಯೋಜನ ಏನು? ಎಂದು ಪ್ರಶ್ನಿಸಿದರು
ಕೊರೋನಾ ಇದ್ದರೂ ಮೈಸೂರು ದಸರಾ ಉತ್ಸವದಲ್ಲಿ ಸಾಂಪ್ರದಾಯಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂಬುದು ಬಿಟ್ಟರೆ ಪ್ರತಿವರ್ಷದಂತೆ ಅನೇಕ ಕಾರ್ಯಕ್ರಮಗಳು ನಡೆದಿವೆ. ಆದರೆ, ಹಂಪಿ ಉತ್ಸವಕ್ಕೆ ಮಾತ್ರ ಕೊರೋನಾ ಹೆಸರಿನಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಕಲಾವಿದರು ತೀವ್ರ ಬೇಸರ ವ್ಯಕ್ತಪಡಿಸಿದರು.
ಹಂಪಿ ಉತ್ಸವಕ್ಕೆ ಸಮಸ್ಯೆಯಾಗುತ್ತಿರುವುದು ಇದೇ ಮೊದಲಲ್ಲ. ನೆರೆ, ಬರ ನೆಪದಲ್ಲಿ ಆಗಾಗ್ಗೆ ಉತ್ಸವಗಳನ್ನು ಸ್ಥಗಿತಗೊಳಿಸುತ್ತಲೇ ಬರಲಾಗಿದೆ. ಮೂರು ದಿನಗಳ ಉತ್ಸವವನ್ನು ಎರಡು ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಈ ಬಾರಿ ಒಂದು ದಿನಕ್ಕೆ ಉತ್ಸವ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಕಲಾವಿದರು ಹಾಗೂ ಸಾಹಿತಿಗಳ ಪೂರ್ವಭಾವಿ ಸಭೆ ಕರೆಯದೆ ಸರ್ಕಾರ ಹಾಗೂ ಜಿಲ್ಲಾ ಸಚಿವರು ಉತ್ಸವ ನಡೆಸಲು ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ಸಚಿವರು ಈ ರೀತಿಯ ನಡೆಯ ಹಿಂದಿನ ಉದ್ದೇಶವೇನು? ಕಲಾವಿದರನ್ನು ದೂರವಿಟ್ಟು ಉತ್ಸವ ಮಾಡುವಂತಿದ್ದರೆ ಅದನ್ನು ಹಂಪಿಉತ್ಸವ ಎಂದು ಏಕೆ ಕರೆಯಬೇಕು ಎಂದು ಸಭೆಯಲ್ಲಿದ್ದ ಕಲಾವಿದರು ಪ್ರಶ್ನಿಸಿದರು.
ಕೊರೋನಾ ಭೀತಿ: ಹಂಪಿ ಉತ್ಸವ ಒಂದೇ ದಿನಕ್ಕೆ ಸೀಮಿತ..!
ರಂಗಕರ್ಮಿ ಎಸ್‌ಬಿಐ ಜಗದೀಶ್ ಮಾತನಾಡಿ, ಉತ್ಸವ ನಿಗದಿತ ದಿನಾಂಕ ಹಾಗೂ ದಿನಗಳಲ್ಲಿ ನಡೆಯುವುದಿಲ್ಲ. ಕಳೆದ ವರ್ಷ ಎರಡು ದಿನಕ್ಕೆ ಸೀಮಿತಗೊಳಿಸಲಾಯಿತು. ಈ ಬಾರಿ ಒಂದು ದಿನಕ್ಕೆ ಎನ್ನುತ್ತಿದ್ದಾರೆ. ತುಂಗಾರತಿ ಮಾಡಿ ಕೈ ತೊಳೆದುಕೊಳ್ಳುವಂತಿದ್ದರೆ ಹಂಪಿ ಉತ್ಸವ ಎಂದು ಹೆಸರಿಡುವುದು ಬೇಕಾಗಿಲ್ಲ. ತುಂಗಾ ಉತ್ಸವ ಎಂದು ಕರೆದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ದಸರಾದಲ್ಲಿ ಸಂಪ್ರದಾಯದಂತೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಬಳ್ಳಾರಿ ವಿಚಾರ ಬಂದಾಗ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಸರ್ಕರ ಉತ್ಸವದ ಘನತೆ ಗೌರವ ಕಳೆಯುತ್ತಿದೆ ಎಂದು ದೂರಿದರು.
ತೊಗಲುಗೊಂಬೆ ಕಲಾವಿದ ನಾರಾಯಣಪ್ಪ, ಸುಬ್ಬಣ್ಣ, ಅಂಜಲಿ ಭರತನಾಟ್ಯ ಕೇಂದ್ರ, ಜಾನಪದ ಕಲಾವಿದ ಹುಲುಗಪ್ಪ, ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಸಿದ್ಮಲ್ ಮಂಜುನಾಥ್, ಕಾಪು ಶ್ರೀನಿವಾಸ್, ಕಲ್ಲುಕಂಬ ಪಂಪಾಪತಿ ಸೇರಿದಂತೆ ಜಿಲ್ಲೆಯ ವಿವಿಧ ಕಲಾವಿದರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಕಲಿ ಉತ್ಸವ-ಢೋಂಗಿ ಉತ್ಸವ ಎಂದು ಘೋಷಣೆ...
ಹಂಪಿ ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರ ಕೂಡಲೇ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು. ಮೂರು ದಿನಗಳ ಕಾಲ ಉತ್ಸವ ನಡೆಸಿ, ಕಲಾವಿದ ಕಲಾಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಇಲ್ಲದೇ ಹೋದರೆ ನವೆಂಬರ್ 13ರಂದು ಒಂದು ದಿನದ ಮಟ್ಟಿಗೆ ಹಮ್ಮಿಕೊಂಡಿರುವ ಉತ್ಸವದಲ್ಲಿ ಕಲಾವಿದರು ಪ್ರತಿಭಟನೆ ನಡೆಸಲು ಹಾಗೂ ನಕಲಿ ಉತ್ಸವ, ಢೋಂಗಿ ಉತ್ಸವ ಎಂದು ಘೋಷಣೆ ಕೂಗಲು ಕಲಾವಿದರು ಸಭೆಯಲ್ಲಿ ನಿರ್ಧರಿಸಿದ್ದಾರೆ.