ಈ ನಡುವೆ ಸಣ್ಣಪುಟ್ಟ ಕಾಮಗಾರಿಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆದಾರರಿಗೆ ಇದೀಗ ಪ್ಯಾಕೇಜ್ ಕಾಮಗಾರಿಗಳಿಂದಾಗಿ ಕೆಲಸವೇ ಸಿಗದಂತಾಗಿದೆ. ಸರ್ಕಾರದ ಆದೇಶವಿದ್ದರೂ ಅದನ್ನು ಲೆಕ್ಕಿಸದೇ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಆ.26): ರಾಜ್ಯ ರಾಜಕಾರಣದಲ್ಲಿ ಪರ್ಸಂಟೇಜ್ ವಿಚಾರ ಪದೇ ಪದೇ ಕೇಳಿಬರುತ್ತಿದೆ. ಯಾವುದೇ ಕಾಮಗಾರಿ ನಡೆಸಬೇಕಾದ್ರೂ ಅಥವಾ ನಡೆಸಿದ ಕಾಮಗಾರಿಗೆ ಹಣ ಪಡೆಯಬೇಕಾದ್ರೂ ಪರ್ಸಂಟೇಜ್ ನೀಡಲೇಬೇಕಿದೆ ಅನ್ನೋ ಆರೋಪ ಗುತ್ತಿಗೆದಾರರದ್ದು. ಈ ನಡುವೆ ಸಣ್ಣಪುಟ್ಟ ಕಾಮಗಾರಿಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆದಾರರಿಗೆ ಇದೀಗ ಪ್ಯಾಕೇಜ್ ಕಾಮಗಾರಿಗಳಿಂದಾಗಿ ಕೆಲಸವೇ ಸಿಗದಂತಾಗಿದೆ. ಸರ್ಕಾರದ ಆದೇಶವಿದ್ದರೂ ಅದನ್ನು ಲೆಕ್ಕಿಸದೇ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ ಎಂದು ಆರೋಪಿಸಿ ಉತ್ತರಕನ್ನಡ ಜಿಲ್ಲೆಯ ಗುತ್ತಿಗೆದಾರರು ಒಟ್ಟಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ.
undefined
ರಾಜ್ಯ ಸರಕಾರದ ಹಲವು ಸಚಿವರು, ಶಾಸಕರ ವಿರುದ್ಧ ಶೇ.40 ಪರ್ಸೆಂಟೇಜ್ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಈ ವಿಚಾರದ ವಿರುದ್ಧ ಸಾಕಷ್ಟು ಭಾರೀ ಪ್ರತಿಭಟನೆಗಳು ನಡೆದಿವೆ. ಈ ನಡುವೆ ಕಳೆದ ಹಲವು ತಿಂಗಳಿಂದ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದ್ದ ಪ್ಯಾಕೇಜ್ ರೂಪದ ಕಾಮಗಾರಿ ವಿರುದ್ಧ ಇದೀಗ ಜಿಲ್ಲಾ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಿಡಿದೆದ್ದಿದ್ದಾರೆ. 100 ಲಕ್ಷ ರೂ. ಮೇಲಿನ ಕಾಮಗಾರಿಗಳನ್ನು ಪ್ಯಾಕೇಜ್ ರೂಪದಲ್ಲಿ ನೀಡದಂತೆ ಸರ್ಕಾರ ಹಾಗೂ ಕೋರ್ಟ್ ಆದೇಶ ನೀಡಿದ್ದರೂ, ನಿಯಮವನ್ನು ಉಲ್ಲಂಘನೆ ಮಾಡಿ ಪ್ಯಾಕೇಜ್ ರೂಪದಲ್ಲಿಯೇ ಗುತ್ತಿಗೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಉತ್ತರ ಕನ್ನಡ: ಕಾರವಾದಲ್ಲಿ ಜಿಲ್ಲಾ ಕ್ರೀಡಾಂಗಣವೇ ಇಲ್ಲ, ಸಂಕಷ್ಟದಲ್ಲಿ ಕ್ರೀಡಾಪಟುಗಳು..!
ಸರ್ಕಾರದ ಆದೇಶದಂತೆ 100 ಲಕ್ಷ ರೂ. ಮೇಲ್ಪಟ್ಟ ಕಾಮಗಾರಿಗಳನ್ನು ಪ್ಯಾಕೇಜ್ ಮಾದರಿಯಲ್ಲಿ ಗುತ್ತಿಗೆ ನೀಡುವಂತಿಲ್ಲ. ಈ ಕುರಿತು ಕಳೆದ ಮೇ 11 ರಂದು ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಪೂರಕವಾಗಿ ಹೈಕೋರ್ಟ್ ಕೂಡಾ 1 ಕೋಟಿ ರೂ. ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್ ಮಾಡದಂತೆ ಸೂಚನೆ ನೀಡಿದೆ. ಆದರೆ, ಇದಕ್ಕೆ ಕ್ಯಾರೇ ಎನ್ನದೇ ಇದೇ 20ರಂದು 100 ಲಕ್ಷ ರೂ. ಮೇಲ್ಪಟ್ಟ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿದೆ. ಅಲ್ಲದೇ, ಯಂತ್ರೋಪಕರಣಗಳು, ಸಿಬ್ಬಂದಿ ಇಲ್ಲದ ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್, ಕೆಆರ್‌ಆರ್‌ಡಿಎಲ್ ಸಂಸ್ಥೆಗಳಿಗೆ ಮುಂಗಡ ಹಣ ನೀಡಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದ್ದು, ಈ ಮೂಲಕ ರಾಜಕಾರಣಿಗಳು ಕಮಿಷನ್ ಹೊಡೆಯುತ್ತಿದ್ದಾರೆ ಅಂತ ಉತ್ತರಕನ್ನಡ ಜಿಲ್ಲೆಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಮಾಧವ ನಾಯಕ ತಿಳಿಸಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಗುತ್ತಿಗೆ ಕಾಮಗಾರಿ ಹಂಚಿಕೆಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿವೆ. ಗುತ್ತಿಗೆ ಪಡೆಯೋದಕ್ಕೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಜನಪ್ರತಿನಿಧಿಗಳೂ ಕೂಡಾ ಕಾಮಗಾರಿ ನೀಡಲು ಪರ್ಸೆಂಟೇಜ್ ಕೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಅನಿವಾರ್ಯವಾಗಿ ಭ್ರಷ್ಟಾಚಾರಕ್ಕೆ ಸಹಕರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನ ನಿರ್ವಹಿಸುವುದು ಅಸಾಧ್ಯ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ, ಕಳೆದ ಹಲವು ವರ್ಷಗಳ ಹಿಂದೆ ಸರ್ಕಾರದ ನಿಯಮದಂತೆ ಸಮಯಕ್ಕೆ ಸರಿಯಾಗಿ ಮುಗಿಸಿಕೊಟ್ಟ ಕಾಮಗಾರಿಗಳ ಕೊಟ್ಯಾಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಕೇಳಿದರೆ ಹಣ ಬಂದಿಲ್ಲ ಎಂದು ಅಧಿಕಾರಿಗಳು ಸಬೂಬು ನೀಡುತ್ತಾರೆ. ಈ ಮೊದಲು ಮಳೆಗಾಲದ ಅವಧಿ ಹೊರತುಪಡಿಸಿ ಕಾಮಗಾರಿ ಅವಧಿಯನ್ನು ನಿಗದಿಪಡಿಸಲಾಗುತ್ತಿತ್ತು. ಆದರೆ, ಇದೀಗ ಮಳೆಗಾಲವನ್ನೂ ಸೇರಿ ಕಾಮಗಾರಿ ಅವಧಿಯೆಂದು ಗುತ್ತಿಗೆ ನೀಡಲಾಗುತ್ತಿದ್ದು, ಮಳೆಗಾಲದಲ್ಲಿ ಕೆಲವೊಂದು ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಕಾಮಗಾರಿ ವಿಳಂಬದ ಹೆಸರಿನಲ್ಲಿ ಗುತ್ತಿಗೆದಾರರಿಗೆ ದಂಡ ಹಾಕಲಾಗುತ್ತದೆ. ಆದರೆ, ಬಿಲ್ ಪಾವತಿ ವಿಳಂಬವಾದರೂ ಅದಕ್ಕೆ ಯಾವುದೇ ದಂಡ ಇಲ್ಲ. ಹೀಗಾಗಿ ವಿಳಂಬವಾಗಿರುವುದರ ಬಿಲ್ ಮೊತ್ತಕ್ಕೆ ಬಡ್ಡಿ ಸೇರಿಸಿ ನೀಡುವ ಕ್ರಮವಾಗಬೇಕು ಅಂತ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಹಿರೇಮಠ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಗುತ್ತಿಗೆ ಕಾಮಗಾರಿ ನೀಡುವಲ್ಲಿ ನಡೆಯೋ ಭ್ರಷ್ಟಾಚಾರದ ವಿರುದ್ಧ ಇದೀಗ ಗುತ್ತಿಗೆದಾರರು ತಿರುಗಿಬಿದ್ದಿದ್ದು, ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಇನ್ನಾದ್ರೂ ಸರ್ಕಾರ ಈ ಬಗ್ಗೆ ಎಚ್ಚೆತ್ತು ಗುತ್ತಿಗೆದಾರರ ಸಮಸ್ಯೆಗಳನ್ನ ಪರಿಹರಿಸತ್ತಾ ಅನ್ನೋದನ್ನ ಕಾದುನೋಡಬೇಕಿದೆ.