ಗಂಗಾವತಿ: ರಾಂಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಸೋರಿಕೆ
* ನೀರು ಬಿಡುಗಡೆ ಮಾಡಿದ 10 ದಿನದಲ್ಲಿ ನೀರು ಸೋರಿಕೆ, ರೈತರಲ್ಲಿ ಆತಂಕ
* ಕಾಲುವೆ ನೀರು ಸೋರಿಕೆಯಾಗುತ್ತಿದ್ದರಿಂದ ರೈತರ ಆತಂಕಕ್ಕೆ ಕಾರಣ
* ಮಳೆಯಾದರೆ ಕಾಲುವೆ ನೀರಿನ ಜತೆಗೆ ಮಳೆ ನೀರು ಬಂದರೆ ಕಾಲುವೆಗೆ ಧಕ್ಕೆ
ರಾಮಮೂರ್ತಿ ನವಲಿ
ಗಂಗಾವತಿ(ಜು.30): ತಾಲೂಕಿನ ರಾಂಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನೀರು ಸೋರಿಕೆಯಾಗುತ್ತಿದ್ದು, ಇದರಿಂದಾಗಿ ರೈತರಲ್ಲಿ ಅತಂಕ ಸೃಷ್ಟಿಯಾಗಿದೆ!
ಕಳೆದ ಜುಲೈ 18ರಂದು ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗಿದೆ. ನೀರು ಬಿಟ್ಟ10 ದಿನದಲ್ಲಿ ಸೋರಿಕೆ ಆಗುತ್ತಿದ್ದು, ಬತ್ತ ನಾಟಿ ಮಾಡುತ್ತಿರುವ ರೈತರಿಗೆ ಭಯ ಉಂಟಾಗಿದೆ. ರಾಂಪುರ ಗ್ರಾಮದ ಮೈಲ್ ನಂ.19, ಚೈನ್ 916ರಲ್ಲಿ ಅಕ್ವಡಕ್ಟ್ನಿಂದ ನೀರು ಸೋರಿಕೆಯಾಗುತ್ತಿದೆ. ಕಾಲುವೆ ಗೋಡೆಯ ಒಳ ಭಾಗದಿಂದ ನೀರು ಬರುತ್ತಿದ್ದರಿಂದ ಯಾವ ಸಮಯದಲ್ಲಿ ಕಾಲುವೆಗೆ ಧಕ್ಕೆಯಾಗುವುದು ಎನ್ನುವುದು ರೈತರಲ್ಲಿ ಅನುಮಾನ ವ್ಯಕ್ತವಾಗಿದೆ. ಪ್ರಸ್ತುತ ಕಾಲುವೆಯಲ್ಲಿ 4100 ಕ್ಯುಸೆಕ್ ನೀರು ಹರಿಯುತ್ತಿದ್ದು, ಇದರಿಂದ ಕಾಲುವೆ ಮೇಲ್ಮಟ್ಟದಲ್ಲಿ ನೀರು ಭರ್ತಿಯಾಗಿದೆ.
ಕಾಲುವೆಗೆ ಧಕ್ಕೆ
12 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಕಾಲುವೆ ಸೋರಿಕೆಯಾಗಿ ನಂತರ ಬೃಹತ್ ಪ್ರಮಾಣದಲ್ಲಿ ಕಾಲುವೆ ಒಡೆದು ಅವಘಡ ಸಂಭವಿಸಿ ಕೋಟ್ಯಂತರ ರುಪಾಯಿ ಆಸ್ತಿ ಪಾಸ್ತಿ ಹಾನಿಯಾಗಿತ್ತು. ಮೈಲ್ 19ರ ಅಕ್ವಡಕ್ಟ್ 2009ರಲ್ಲಿ ಕಾಲುವೆ ಬಿರುಕು ಬಿಟ್ಟಿತ್ತು, ನೀರಾವರಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸೋರಿಕೆಯಾದ ಮೂರೇ ದಿನದಲ್ಲಿ ಕಾಲುವೆ ಒಡೆದು ರಾಂಪುರ, ಮಲ್ಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಬತ್ತದ ಗದ್ದೆಗಳು ಹಾಗೂ ಗ್ರಾಮಗಳಲ್ಲಿರುವ ಗುಡಿಸಲುಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿಗಳಿಗೆ ಹಾನಿಯಾಗಿತ್ತು. 2010ರಲ್ಲಿಯು ಸಹ ಕಾಲುವೆಗೆ ಜಲಾಶಯದ ನೀರು ಮತ್ತು ನಿರಂತರ ಮಳೆಯಿಂದಾಗಿ ಕಾಲುವೆ ಭರ್ತಿಯಾಗಿ ಗ್ರಾಮಗಳಲ್ಲಿ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿತ್ತು.
ಅಲ್ಲದೇ ಕೇಸರಹಟ್ಟಿ, ಸೋಮನಾಳ, ಬಂಡಿ ಹರ್ಲಾಪುರ ಬಳಿ ಎಡದಂಡೆ ಕಾಲುವೆ ಒಡೆಯುತ್ತಿರುವುದು ಸಾಮಾನ್ಯವಾಗಿದೆ. ಪ್ರಸ್ತುತ ಕಾಲುವೆ ನೀರು ಸೋರಿಕೆಯಾಗುತ್ತಿದ್ದರಿಂದ ರೈತರ ಆತಂಕಕ್ಕೆ ಕಾರಣವಾಗಿದೆ.
ರೈತರಿಗೆ ಇನ್ನೂ ಬಾರದ ಬೆಳೆವಿಮೆ ಪರಿಹಾರ: ಅನ್ನದಾತರ ಆಕ್ರೋಶ
ಈಗಾಗಲೇ ಈ ಕಾಲುವೆ ದುರಸ್ತಿಗೆ ಇಲಾಖೆ ಒಟ್ಟು .63 ಕೋಟಿ ವೆಚ್ಚ ಮಾಡಿದ್ದು, ರಾಂಪುರ ಬಳಿಯ ಕಾಲುವೆ ದುರಸ್ತಿಗೆ ನೀರಾವರಿ ಇಲಾಖೆ . 5 ಕೋಟಿ ವೆಚ್ಚ ಮಾಡಿದೆ. ಆದರೆ ಅಧಿಕಾರಿಗಳು ಕಾಲುವೆ ದುರಸ್ತಿ ಕಡೆ ಗಮನಹರಿಸದೇ ಇರುವುದರಿಂದ ಕಾಲುವೆ ರಕ್ಷಣೆ ಮಾಡುವರು ಯಾರು ಎಂಬುದು ರೈತರ ಆರೋಪವಾಗಿದೆ.
ಮಳೆಯಾದರೆ ಕಾಲುವೆಗೆ ಧಕ್ಕೆ
ರಾಂಪುರ-ಮಲ್ಲಾಪುರ ಗ್ರಾಮದ ಬಳಿ ಇರುವ ಎಡದಂಡೆ ಕಾಲುವೆಗೆ ಮಳೆ ಬಂದರೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚು ಎನ್ನುವುದು ನೀರಾವರಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಜಲಾಶಯದಿಂದ ಕಾಲುವೆಗೆ 4100 ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದು, ಜತೆಗೆ ಮಳೆಯಾದರೆ ಗುಡ್ಡದ ನೀರು ಸಹ ಕಾಲುವೆ ಭರ್ತಿಯಾಗಿ ಗ್ರಾಮಕ್ಕೆ ನುಗ್ಗುವ ಅವಕಾಶಗಳೇ ಹೆಚ್ಚಾಗಿವೆ. ಕಾಲುವೆಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಕೆಳ ಭಾಗದ ರೈತರಿಗೆ ನೀರು ತಲುಪುತ್ತದೆ. ಸಿಂಧೂನೂರು, ಮಾನ್ವಿ, ರಾಯಚೂರು ಸೇರಿದಂತೆ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ತಲಪುವುದಕ್ಕೋಸ್ಕರ ಅಧಿಕ ಪ್ರಮಾಣದಲ್ಲಿ ನೀರು ಬಿಡಗಡೆ ಮಾಡಿದ್ದಾರೆ. ಆದರೆ ಮಳೆಯಾದರೆ ಕಾಲುವೆ ನೀರಿನ ಜತೆಗೆ ಮಳೆ ನೀರು ಬಂದರೆ ಕಾಲುವೆಗೆ ಧಕ್ಕೆಯಾಗುವುದು ಖಚಿತ ಎಂಬದು ರೈತರ ಅಭಿಪ್ರಾಯವಾಗಿದೆ.
ರಾಂಪುರ ಬಳಿ ಎಡದಂಡೆ ಕಾಲುವೆ ಅಕ್ವಡಕ್ಟ್ನಲ್ಲಿ ನೀರು ಸೋರಿಕೆಯಾಗುತ್ತಿರುವುದು ಹೊಸದಲ್ಲ. ಈ ಹಿಂದೆಯು ಸಹ ನೀರು ಸೋರಿಕೆಯಾಗಿತ್ತು. ಈಗ ಕಾಲುವೆ ದುರಸ್ತಿ ಮಾಡಿದರೂ ಸಹ ಸೋರಿಕೆಯಾಗುತ್ತಿದೆ. ಈಗ ಸ್ಥಳದಲ್ಲಿ ಗ್ರೌಟಿಂಗ್ ಮಾಡಿ ಸೋರಿಕೆಯಾಗುವ ಸ್ಥಳ ಮುಚ್ಚಲಾಗುತ್ತದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಗಳಕೇರಾ ಕಿರಿಯ ಅಭಿಯಂತರರು ನೀರಾವರಿ ಇಲಾಖೆ ಅಮರೇಶ ತಿಳಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ಪ್ರತಿ ಬಾರಿಯು ಸೋರಿಕೆ, ಒಡೆಯುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೇ ಪ್ರತಿ ವರ್ಷ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಕಳೆದ 12 ವರ್ಷಗಳ ಹಿಂದೆ ಇದೇ ಮಾದರಿಯಲ್ಲಿ ಕಾಲುವೆ ಒಡೆದು ಕೋಟ್ಯಂತರ ರುಪಾಯಿ ಹಾನಿಯಾಗಿತ್ತು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದಾಗಿ ಇಂತಹ ಅವಘಡಗಳು ಸಂಭವಿಸುತ್ತವೆ ಎಂದು ರಾಂಪುರ ಗ್ರಾಮದ ರೈತರು ಗೌರೀಶ್ ಬಾಗೋಡಿ ಹೇಳಿದ್ದಾರೆ.