ಪಾಲಿಕೆಯ ವಿದೇಶಿ ಅಲಂಕಾರಿಕ ಮರಗಳ ಪ್ರೀತಿ ರಾಜಧಾನಿ ಬೆಂಗಳೂರು ಜನರ ಪ್ರಾಣಕ್ಕೆ ಹೊರೆಯಾಗಿ ಪರಿಣಮಿಸಿದೆ. ಸಣ್ಣ ಗಾಳಿ, ಮಳೆಗೂ ಧರೆಗುರುಳುತ್ತಿರುವ ಈ ಮರಗಳು ಯಾವಾಗ ಯಾರ ಪ್ರಾಣ ಹೊತ್ತೊಯ್ಯತ್ತವೆಯೋ ಎಂಬ ಭಯದಲ್ಲೇ ಜನರು ಓಡಾಡುವಂತಾಗಿದೆ.
• ರಾಜು ಕಾಂಬಳೆ
ಬೆಂಗಳೂರು (ಆ.30): ಪಾಲಿಕೆಯ ವಿದೇಶಿ ಅಲಂಕಾರಿಕ ಮರಗಳ ಪ್ರೀತಿ ರಾಜಧಾನಿ ಬೆಂಗಳೂರು ಜನರ ಪ್ರಾಣಕ್ಕೆ ಹೊರೆಯಾಗಿ ಪರಿಣಮಿಸಿದೆ. ಸಣ್ಣ ಗಾಳಿ, ಮಳೆಗೂ ಧರೆಗುರುಳುತ್ತಿರುವ ಈ ಮರಗಳು ಯಾವಾಗ ಯಾರ ಪ್ರಾಣ ಹೊತ್ತೊಯ್ಯತ್ತವೆಯೋ ಎಂಬ ಭಯದಲ್ಲೇ ಜನರು ಓಡಾಡುವಂತಾಗಿದೆ. ಉದ್ಯಾನ ನಗರಿಯ ಸೌಂದರ್ಯ ಹೆಚ್ಚುಸುತ್ತವೆ ಎಂಬ ಕಾರಣಕ್ಕೆ ಈ ವಿದೇಶಿ ತಳಿಯ ಅಲಂಕಾರಿಕ ಮರಗಳನ್ನು ನಗರದ ಶೇ. 50ಕ್ಕಿಂತ ಹೆಚ್ಚು ಕಡೆಗಳಲ್ಲಿ 40-50 ವರ್ಷಗಳ ಹಿಂದೆಯೇ ಬೆಳೆಯಲಾಗಿದೆ. ಈ ಮರಗಳು ಸಣ್ಣ ಗಾಳಿ ಮಳೆಗೂ ಇದ್ದಕ್ಕಿದ್ದಂತೆ ನೆಲಕ್ಕುರುಳಿ ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರರನ್ನು ಬಲಿಪಡೆದಿದೆ. ವಾಹನಗಳ ಜಖಂ, ವಿದ್ಯುತ್ ಕಂಬಗಳು ಮುರಿದು ಬಿದ್ದು ಸಾರ್ವಜನಿಕರು ಪರದಾಡುವ ಪ್ರಸಂಗ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಮಾಮೂಲಿಯಾಗಿವೆ.
ದೇಶಿ ತಳಿಯ ಮರ ಬೆಳೆಸಿ-ಪರಿಸರವಾದಿಗಳು: ಮರಗಳು ಬೀಳುತ್ತಿರುವ ಪ್ರಕರಣಕ್ಕೆ ಕಡಿವಾಣ ಹಾಕಬೇಕಾದರೆ ರಸ್ತೆ ನಿರ್ಮಾಣ, ಮೆಟ್ರೊ ಮಾರ್ಗ, ಒಳಚರಂಡಿ, ನೀರಿನ ಕೊಳವೆ, ವಿದ್ಯುತ್ ಕೇಬಲ್ ಸೇರಿದಂತೆ ಇನ್ನಿತರ ಕಾಮಗಾರಿಗಾಗಿ ಪದೇ ಪದೇ ರಸ್ತೆ ಅಗೆತ ನಿಲ್ಲಿಸಬೇಕು. ಪಾಲಿಕೆಯಿಂದಲೇ ಅಶ್ವತ್ಥ, ಅರಳಿ, ಹೊಂಗೆ, ಹುಣಸೆ, ಮಾವು, ಬೇವು, ಹಲಸು, ಆಕಾಶಗಂಗೆ ಅಂತಹ ದೇಶಿ ತಳಿಯ ಮರಗಳನ್ನು ನೆಡಬೇಕು. ಈ ಮರಗಳ ಬೇರು ಭೂಮಿಯ ಆಳಕ್ಕೆ ಇಳಿಯುತ್ತವೆ. ಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.
ಪರಿಸರದ ರಕ್ಷಣೆ, ಭವಿಷ್ಯಕ್ಕಾಗಿ ಹಸಿರು ಇಂಧನ ಬಳಸಿ: ಸಚಿವ ನಿತಿನ್ ಗಡ್ಕರಿ
ಪಾಲಿಕೆಯ ಕ್ರಮ: ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದಲ್ಲೇ ಈ ಬಾರಿ ಅತೀ ಹೆಚ್ಚು ಮರಗಳು ಧರೆಗೆ ಉರುಳಿದ್ದು, ಸಾರ್ವಜನಿಕ ದೂರಿನ ಅನ್ವಯ ಅಪಾಯ ಸೃಷ್ಟಿಸುವ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನಗರೀಕರಣದಿಂದ ಸಾಕಷ್ಟು ಮರಗಳಿಗೆ ಹಾನಿಯಾಗಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ದೇಶಿ ತಳಿಯ ಹೊಸ ಸಸಿ ನೆಡಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ಯಾವ ಮರ ಬೇಡ?: ವಿದೇಶಿ ಪ್ರಭೇದದ, ಅಲಂಕಾರಿಕವಾ ಗಿರುವ ತಬೂಬಿಯಾ, ಗುಲ್‌ಮೊಹರ್, ಆಕಾಶ ಮಲ್ಲಿಗೆ, ಸಾಥೋಡಿಯಾ, ರೈನ್ ಟೀ, ಕಾಪರ್‌ಪೊಡ್ ಮರಗಳ ಆಯುಷ್ಯ ಕೇವಲ 30-40 ವರ್ಷ. ಇವು ಮೆದು ಮರಗಳಾಗಿದ್ದು, ಗಾಳಿ-ಮಳೆಯ ಹೊಡೆತವನ್ನು ಸಹಿಸಿಕೊಳ್ಳುವಷ್ಟು ಶಕ್ತವಾಗಿಲ್ಲ.
ಯಾವ ಮರ ಬೇಕು?: ಭಾರತೀಯ ತಳಿಗಳಾದ ಅಶ್ವತ್ಥ, ಅರಳಿ, ಹೊಂಗೆ, ಹುಣಸೆ, ಮಾವು, ಬೇವು, ಹಲಸು, ಆಕಾಶಗಂಗೆ ಅಂತಹ ದೇಶಿ ತಳಿಯ ಮರಗಳನ್ನು ನೆಡಬೇಕು. ಈ ಮರಗಳ ಬೇರು ಭೂಮಿಯ ಆಳಕ್ಕೆ ಇಳಿಯುತ್ತವೆ. ಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.
ಎಲ್ಲಿ ಎಷ್ಟು ಮರ ಧರೆಗೆ? ಈ ಮಳೆಗಾಲದಲ್ಲಿ (ಮೇ ತಿಂಗಳಿನಿಂದ ಇಲ್ಲಿಯವರೆಗೆ)
ದಕ್ಷಿಣ ವಲಯ 383
ಪಶ್ಚಿಮ ವಲಯ 239
ಆರ್.ಆರ್. ನಗರ ವಲಯ 189
ಪೂರ್ವ ವಲಯ 129
ಯಲಹಂಕ ವಲಯ 99
ಬೊಮ್ಮನಹಳ್ಳಿ ವಲಯ 87
ಮಹದೇವಪುರ ವಲಯ 76
ದಾಸರಹರಳ್ಳಿ ವಲಯ 69
ಒಟ್ಟು 1271
ಕೋರ್ಟ್ ಕಲಾಪ ವಿಡಿಯೋಗಳು ವೈರಲ್: ಲಕ್ಷಾಂತರ ಜನರಿಂದ ಯೂಟ್ಯೂಬ್‌ನಲ್ಲಿ ವೀಕ್ಷಣೆ
ನಗರದಲ್ಲಿ ಗಾಳಿ, ಮಳೆಗೆ ಹೆಚ್ಚು ಬೀಳುತ್ತಿರುವ ಮರಗಳಲ್ಲಿ ಬಹುತೇಕ 30-40 ವರ್ಷ ಹಳೆಯ ಮರಗಳಾಗಿವೆ. ಈಗಾಗಲೇ ಬಿಬಿಎಎಂಪಿ ವ್ಯಾಪ್ತಿಯ ವಲಯಗಳಿಂದ ಬಂದ ಸಾರ್ವಜನಿಕರ ದೂರಿನ ಅನ್ವಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
- ಪ್ರೀತಿ ಗೆಲ್ಲೋತ್ ವಿಶೇಷ ಆಯುಕ್ತರು ಬಿಬಿಎಂಪಿ ಅರಣ್ಯ ಮತ್ತು ಪರಿಸರ ವಿಭಾಗ