
ಚಿತ್ರದುರ್ಗ: ವಿಪಕ್ಷ ನಾಯಕ ಆರ್. ಅಶೋಕ್ ಅವರು ಧರ್ಮಸ್ಥಳದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡುತ್ತಾ, ಸಿಎಂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆದಿರುವ ಆರೋಪಗಳು ಕೇವಲ ಷಡ್ಯಂತ್ರದ ಭಾಗವಾಗಿದ್ದು, ಇದರಲ್ಲಿ “ಟಿಪ್ಪು ಗ್ಯಾಂಗ್” ನ ಪ್ರಭಾವ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು. ಸಿಎಂ ಸಿದ್ಧರಾಮಯ್ಯ ಅವರು ಹಿಂದೆಯೇ ಟಿಪ್ಪು ಜಯಂತಿಯನ್ನು ಆಚರಿಸಿದ್ದರಿಂದ, ಅವರ ಸುತ್ತಮುತ್ತ ಇರುವ ಟಿಪ್ಪು ಗ್ಯಾಂಗ್ ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. “ಒಬ್ಬ ಅನಾಮಿಕನ ದೂರಿನಿಂದ ದೊಡ್ಡ ಮಟ್ಟದ ವಿಚಾರವನ್ನಾಗಿ ಬಿಂಬಿಸಿದ್ದಾರೆ. ನೂರಾರು ಕೊಲೆ, ಅತ್ಯಾಚಾರಗಳು ನಡೆದಂತೆಯೇ ಚಿತ್ರಣ ಮೂಡಿಸಿದ್ದಾರೆ. ಇದು ನಿಜಕ್ಕೂ ಧರ್ಮಸ್ಥಳದ ವಿರುದ್ದ ರೂಪಿಸಿದ ದುಷ್ಟ ಯೋಜನೆ,” ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ದಿನ ಸಾವಿರಾರು ದೂರುಗಳು ಬರುತ್ತವೆ. “ಆ ಎಲ್ಲಕ್ಕೂ ಸರ್ಕಾರ ಎಸ್‌ಐಟಿ ರಚಿಸುತ್ತದೆಯೇ?” ಎಂದು ಪ್ರಶ್ನಿಸಿದ ಅಶೋಕ್, ಈ ಪ್ರಕರಣದಲ್ಲಿ ಮಾತ್ರ ವಿಶೇಷ ತನಿಖಾ ತಂಡವನ್ನು ರಚಿಸಿರುವುದು ಸಂಶಯ ಹುಟ್ಟಿಸುತ್ತದೆ ಎಂದು ಹೇಳಿದರು. ಅವರ ಪ್ರಕಾರ, ವಿದೇಶಗಳಿಂದ ಹಣ ಬರುತ್ತಿರುವುದು, ಮುಸುಕುದಾರಿಗಳ ಮೂಲಕ ಸರ್ಕಾರವನ್ನು ತಪ್ಪುದಾರಿಯಲ್ಲಿ ನಡೆಸುತ್ತಿರುವುದು ಗಂಭೀರ ವಿಚಾರ. ಧರ್ಮಸ್ಥಳದ ಮಂಜುನಾಥ ದೇವರಿಗೆ ಅವಹೇಳನ ಮಾಡುವ ಉದ್ದೇಶದೊಂದಿಗೆ ಈ ಪ್ರಕರಣ ರೂಪಿಸಲಾಗಿದೆ ಎಂದು ಆರೋಪಿಸಿದರು. “ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಮೂಲಕ ಸುಳ್ಳು ಪ್ರಚಾರ ನಡೆಯುತ್ತಿದೆ. ಯೂಟ್ಯೂಬರ್ ಸಮೀರ್ ಸಹ ಟಿಪ್ಪು ಗ್ಯಾಂಗ್‌ನ ಭಾಗವಾಗಿದ್ದಾನೆ,” ಎಂದು ಅವರು ಆರೋಪಿಸಿದರು. ಈ ತನಿಖೆ ಕೇವಲ ಎಸ್‌ಐಟಿ ಮಟ್ಟದಲ್ಲಿ ನಿಲ್ಲಬಾರದು. ಸರ್ಕಾರಕ್ಕೆ ನಿಜವಾದ ಧರ್ಮದ ಬಗ್ಗೆ ಕಾಳಜಿ ಇದ್ದರೆ, ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕು. ಯಾರು ಈ ಷಡ್ಯಂತ್ರಕ್ಕೆ ಪ್ರೇರಣೆ ನೀಡಿದರು? ಯಾರು ಸಿಎಂಗೆ ಸುಳ್ಳು ಮಾಹಿತಿ ಒದಗಿಸಿದರು? ಇವುಗಳೆಲ್ಲ ಬಯಲಾಗಬೇಕು,” ಎಂದು ಅಶೋಕ್ ಆಗ್ರಹಿಸಿದರು.
ಮತ್ತಷ್ಟು ಮುಂದುವರಿದು ಮಾತನಾಡಿದ ಅವರು ಈ ಪ್ರಕರಣದ ಹಿಂದೆ ಇರುವವರು ತಿರುಪತಿ, ಶಬರಿಮಲೆ, ಶನಿ ಶಿಂಗಣಾಪುರ ಮುಂತಾದ ದೇವಸ್ಥಾನಗಳ ವಿರುದ್ಧವೂ ಸಂಚು ರೂಪಿಸಿದ್ದಾರೆ. ಈ ಎಲ್ಲಾ ಕಾರ್ಯಾಚರಣೆಗಳ ಹಿಂದೆ ನಗರ ನಕ್ಸಲರ ಕೈವಾಡ ಇದೆ. ಅವರು ಸಿಎಂ ಸಿದ್ಧರಾಮಯ್ಯ ಸುತ್ತುವರೆದು ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಗಂಭೀರ ಆರೋಪಿಸಿದರು. ಆ ಮುಸುಕುದಾರಿ ಸರ್ಕಾರಕ್ಕೆ ಮುಸುಕು ಹಾಕಿದ್ದಾನೆ ಈಗೇನು ಬಂತು, ಬೆಟ್ಟ ಅಗೆದು ಇಲಿನೂ ಸಿಗಲಿಲ್ಲ. ಇನ್ನೂ ನೂರು ಕಡೆ ತೋರಿಸಲು ಹೊರಟಿದ್ದಾನೆ. ಕೊನೆಗೆ ಮಂಜುನಾಥನ ಕೆಳಗೆ ಹೂತಿಟ್ಟಿದ್ದೆನೆ ಎನ್ನುವಂತದು ನಡೀತಿದೆ. ಹಿಂದೂಗಳನ್ನು ಇಷ್ಟೊಂದು ಕಡೆಗಣಿಸುವುದಾ? ಅದೇ ರೀತಿ ಮಸೀದಿ ಆದರೆ ನೀವು ಹೋಗುತ್ತೀರಾ? ಮಸೀದಿ ಬಗ್ಗೆ ಆಪಾದನೆ ಬಂದರೆ ಈ ಸರ್ಕಾರ ಮುಟ್ಟುತ್ತಾ? ಹಿಂದೂ ದೇವಸ್ಥಾನಕ್ಕೆ ಸಲಿಕೆ, ಗುದ್ದಲಿ ಜತೆ ಹೋಗುತ್ತೀರಿ ಏಕೆ? ಎಂದು ಪ್ರಶ್ನಿಸಿದರು.
ಇಷ್ಟೊಂದು ತನಿಖೆಗಳ ಬಳಿಕವೂ ಯಾವುದೇ ಸಾಕ್ಷಿ ದೊರೆತಿಲ್ಲ. ಇದು ಬೆಟ್ಟ ಅಗೆದು ಇಲಿಯೂ ಸಿಗದ ಪರಿಸ್ಥಿತಿಯಾಗಿದೆ. ಕೊನೆಗೆ ಸರ್ಕಾರವು ಹೂತಿಟ್ಟಿದ್ದ ಮೃತದೇಹವನ್ನು ತೋರಿಸುವಂತೆ ಪ್ರಕರಣವನ್ನು ಎಳೆಯುತ್ತಿದೆ. ಹಿಂದೂಗಳ ಭಾವನೆಗಳ ಕಡೆಗಣನೆ ನಡೆಯುತ್ತಿದೆ. ಆದರೆ ಮಸೀದಿಗಳ ಬಗ್ಗೆ ಇದೇ ರೀತಿಯ ದೂರಾದರೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುತ್ತದೆಯೇ? ಎಂದು ಸರ್ಕಾರದ ನಿಲುವನ್ನು ಪ್ರಶ್ನಿಸಿದರು. ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ನಿಜವಾಗಿ ಪಾರದರ್ಶಕವಾಗಿರಬೇಕು. ಇಲ್ಲದಿದ್ದರೆ ಹಿಂದೂ ಸಮಾಜದ ಭಾವನೆಗಳ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ. ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರೆ, ನಾವು ಯಾವುದೇ ಸಂದರ್ಭದಲ್ಲೂ ಹಿಂದೆ ಸರಿಯುವುದಿಲ್ಲ,” ಎಂದು ಅಶೋಕ್ ಎಚ್ಚರಿಕೆ ನೀಡಿದರು.