ಹುಣಸೂರು ಪ್ರತ್ಯೇಕ ಜಿಲ್ಲೆ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹ

By Kannadaprabha NewsFirst Published Jan 30, 2024, 12:53 PM IST
Highlights

ಮೈಸೂರು ಜಿಲ್ಲೆಯಿಂದ ಹುಣಸೂರು ಉಪವಿಭಾಗವನ್ನು ಬೇರ್ಪಡಿಸಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ನೂತನ ಜಿಲ್ಲೆ ರಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ನಾಯಕತ್ವ ಮತ್ತು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

  ಕೆ.ಆರ್.ನಗರ : ಮೈಸೂರು ಜಿಲ್ಲೆಯಿಂದ ಹುಣಸೂರು ಉಪವಿಭಾಗವನ್ನು ಬೇರ್ಪಡಿಸಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ನೂತನ ಜಿಲ್ಲೆ ರಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ನಾಯಕತ್ವ ಮತ್ತು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಪಟ್ಟಣದ ಹೊರ ವಲಯದ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವ್ಯಾಪ್ತಿಗೆ ಸೇರ್ಪಡೆ ಆಗಲಿರುವ ಎಚ್.ಡಿ. ಕೋಟೆ, ಸರಗೂರು, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕು ಕೇಂದ್ರಗಳಲ್ಲಿರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದರ ಜತೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದರು.

ಹುಣಸೂರು ನೂತನ ಜಿಲ್ಲೆಯಾದರೆ ರಾಜ್ಯದಲ್ಲಿಯೇ ಮಾದರಿಯಾಗಲಿದ್ದು ಇಲ್ಲಿ ಬೆಳೆಯುವ ವರ್ಜೀನಿಯ ತಂಬಾಕು, ಭತ್ತ, ಅಡಿಕೆ, ಅರಿಶಿನ, ಹತ್ತಿ, ಶುಂಠಿ, ಕಬ್ಬು ಮತ್ತು ಇತರ ವಾಣಿಜ್ಯ ಬೆಳೆಗಳು ವಿಶ್ವ ಪ್ರಸಿದ್ಧಿಯಾಗಿದ್ದು ಆ ಮೂಲಕ ರೈತರು ಸರ್ಕಾರಕ್ಕೆ ನೂರಾರು ಕೋಟಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹಾಗಾಗಿ ಹೊಸ ಜಿಲ್ಲೆ ರಚನೆಯಾದರೆ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆತು ರೈತರು ಮತ್ತು ಜನರ ಜೀವನ ಹಸನಾಗಲಿದೆ ಎಂದು ನುಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಜಿಲ್ಲೆ ಮತ್ತು ತಾಲೂಕುಗಳ ಸಂಖ್ಯೆ ಹೆಚ್ಚಾದರೆ ಅಭಿವೃದ್ಧಿ ಹೊಂದುವುದರ ಜತೆಗೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು ಈ ಸದುದ್ದೇಶದಿಂದ ನಾವು ಒತ್ತಾಯ ಮಾಡುತ್ತಿದ್ದು ಸಭೆಗಳು ನಡೆದ ನಂತರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಗುತ್ತದೆ ಎಂದು ಪ್ರಕಟಿಸಿದರು.

ಮೈಸೂರು ಜಿಲ್ಲೆ ವಿಶ್ವ ಪಾರಂಪರಿಕ ಸ್ಥಳವಾಗಿದ್ದು ಅಲ್ಲಿನ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಹುಣಸೂರು ಮತ್ತು ಎಚ್.ಡಿ. ಕೋಟೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಿಗೆ ಸರ್ಕಾರದ ಸವಲತ್ತು ಮರೀಚಿಕೆಯಾಗಿದ್ದು ಈ ಎಲ್ಲಾ ಸಮಸ್ಯೆ ಮತ್ತು ಸಂಕಷ್ಟಗಳ ನಿವಾರಣೆಗೆ ಹೊಸ ಜಿಲ್ಲೆ ರಚನೆಯೊಂದೆ ಉತ್ತಮ ಮಾರ್ಗ ಎಂದು ತಮ್ಮ ಅಭಿಪ್ರಾಯಪಟ್ಟರು.

ಈ ಎಲ್ಲ ಸವಲತ್ತು ಜತೆಗೆ ಕಾವೇರಿ, ಲಕ್ಷ್ಮಣತೀರ್ಥ, ಕಬಿನಿ ನದಿಗಳು ಹೊಸ ಜಿಲ್ಲೆಯ ವ್ಯಾಪ್ತಿಗೆ ಬರಲಿದ್ದು ಇವುಗಳೊಂದಿಗೆ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯು ಸಂಪೂರ್ಣ ಅಭಿವೃದ್ಧಿಯಾಗಬೇಕಿದ್ದು ಈ ವಿಚಾರಗಳನ್ನು ನಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದು ಸರ್ವರೂ ಸಹಕಾರ ನೀಡಬೇಕು ಎಂದು ಕೋರಿದರು.

ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಕೆ.ಆರ್. ನಗರ ತಾಲೂಕು ಕೇಂದ್ರದಲ್ಲಿ ಹೊಸ ಜಿಲ್ಲೆ ರಚನೆ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಿ ಸಲಹೆ ಸೂಚನೆ ಪಡೆಯಲು ಫೆಬ್ರವರಿ ಮೊದಲ ವಾರದಲ್ಲಿ ಸಭೆ ನಡೆಸಲಾಗುತ್ತದೆ ಎಂದು ಅವರು ಪ್ರಕಟಿಸಿದರು.

ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್ ಇದ್ದರು.

click me!