ಸಿಎಂ ಓದಿದ ಶಾಲೆಯಲ್ಲಿ ಮಕ್ಕಳೇ ಇಲ್ಲ..! ಮುಚ್ಚುವ ಹಂತದಲ್ಲಿ ವಿದ್ಯಾಮಂದಿರ

By Kannadaprabha NewsFirst Published Sep 1, 2020, 1:29 PM IST
Highlights

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ ಈಗ ಮುಚ್ಚುವ ಹಂತದಲ್ಲಿದೆ. ಕೇವಲ ಬೆರಳೆಣಿಕೆ ಮಕ್ಕಳು ಇಲ್ಲಿದ್ದು, ಅತ್ಯಂತ ದುಸ್ಥಿತಿಗೆ ತಲುಪಿದೆ.

ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಸೆ.01): ನಾಡಿನ ದೊರೆ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ದಿಗ್ಗಜರು ಓದಿದ ಶಾಲೆ ಈಗ ಮುಚ್ಚುವ ಸ್ಥಿತಿ ತಲುಪಿದೆ. ಮಂಡ್ಯದ ಹಳೇ ನಗರದಲ್ಲಿರುವ ಶತಮಾನೋತ್ಸವ ಶಾಲೆಗೆ ಈಗ ವಲಸೆ ಮಕ್ಕಳೇ ಆಧಾರವಾಗಿದ್ದಾರೆ. ಇವರು ಕಲಿಕೆಯಿಂದ ದೂರವಾದರೆ ಶಾಲೆ ಮುಚ್ಚದೇ ವಿಧಿಯೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹಳೇ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಒಟ್ಟು 9 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 4 ಗಂಡು ಹಾಗೂ 5 ಹೆಣ್ಣು ಮಕ್ಕಳಿದ್ದಾರೆ. ಇವರಾರ‍ಯರೂ ಸ್ಥಳೀಯ ಮಕ್ಕಳಲ್ಲ. ದೂರದ ಊರಿನಿಂದ ಕೂಲಿಯನ್ನು ಅರಸಿಕೊಂಡು ವಲಸೆ ಬಂದಿರುವ ಕೂಲಿಕಾರ್ಮಿಕರ ಮಕ್ಕಳು. ಕಳೆದ ವರ್ಷ ಕೇವಲ 4 ಮಕ್ಕಳು ಮಾತ್ರ ದಾಖಲಾಗಿದ್ದರು. ಈ ವರ್ಷ ಹೆಚ್ಚುವರಿಯಾಗಿ 5 ಮಕ್ಕಳಿರುವುದಷ್ಟೇ ಸಮಾಧಾನದ ಸಂಗತಿ.

130 ವರ್ಷ ಹಳೆಯ ಶಾಲೆ:

ಹಳೇ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣಗೊಂಡು 130 ವರ್ಷಗಳಾಗಿವೆ. 1889ರಲ್ಲಿ ನಿರ್ಮಾಣಗೊಂಡ ಶಾಲಾ ಕಟ್ಟಡದಲ್ಲಿ ಒಟ್ಟು 10 ಕೊಠಡಿಗಳಿವೆ. ಒಂದೇ ಕಟ್ಟಡದಲ್ಲಿ 5 ಹಾಗೂ ಹಿಂಭಾಗದ ಕಟ್ಟಡದಲ್ಲಿ 5 ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಕೊಠಡಿಗಳು ಈಗ ಶಿಥಿಲಾವಸ್ಥೆಯಲ್ಲಿವೆ.

ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬೆಂಬಲ : ಕೈ ಮುಖಂಡಗೆ ಸಿಕ್ತಿ ಪ್ರಮುಖ ಪಟ್ಟ...

ಈ ಶಾಲೆಗೆ ನಾಲ್ಕು ಬೋಧಕ ಹುದ್ದೆಗಳು ಮಂಜೂರಾಗಿದ್ದು ಎಲ್ಲ ಹುದ್ದೆಗಳಲ್ಲೂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಮಕ್ಕಳಿಗಿಲ್ಲ. ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮೂಲಸೌಲಭ್ಯಗಳಿಲ್ಲದಿದ್ದರೂ ಬಾಲಕ-ಬಾಲಕಿಯರ ಶೌಚಾಲಯಗಳು ಉತ್ತಮ ಸ್ಥಿತಿಯಲ್ಲಿವೆ.

1, 4, 6ನೇ ತರಗತಿಗೆ ಶೂನ್ಯ ದಾಖಲಾತಿ:

ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 9 ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಎರಡನೇ ತರಗತಿಯಲ್ಲಿ ಒಬ್ಬರು, ಮೂರನೇ ತರಗತಿಯಲ್ಲಿ ಇಬ್ಬರು, ಐದನೇ ತರಗತಿಯಲ್ಲಿ ಇಬ್ಬರು ಹಾಗೂ ಏಳನೇ ತರಗತಿಯಲ್ಲಿ ನಾಲ್ವರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಂದು, ನಾಲ್ಕು ಮತ್ತು ಆರನೇ ತರಗತಿಗೆ ಶೂನ್ಯ ದಾಖಲಾತಿ ಇದೆ.

ಶಾಲೆಯಲ್ಲಿರುವ 10 ಕೊಠಡಿಗಳ ಪೈಕಿ ಒಂದು ಕೊಠಡಿಯಲ್ಲಷ್ಟೇ ಪಾಠ ನಡೆಯತ್ತಿದೆ. ಆ ಕೊಠಡಿಯ ಗೋಡೆಯೂ ಬಿರುಕು ಬಿಟ್ಟಿದ್ದು ಮಕ್ಕಳು ಜೀವ ಕೈಯ್ಯಲ್ಲಿ ಹಿಡಿದು ಕಲಿಯುವ ಸ್ಥಿತಿ ಇದೆ. ಮಳೆ ಗಾಳಿಯಿಂದ ಮುಖ್ಯ ಕಟ್ಟಡದ ಹೆಂಚುಗಳು ಹಾರಿಹೋಗಿವೆ. ಅಲ್ಲಿಯೇ ಮುಖ್ಯ ಶಿಕ್ಷಕರ ಕಚೇರಿ ಇದೆ. ಕಟ್ಟಡದ ಹಿಂಭಾಗದಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಗೆ ದಾರಿ ಮಾಡಿಕೊಟ್ಟಿದೆ.

ಮದ್ದೂರಲ್ಲಿ ಕಮಲ ಅರಳಿಸಲು ಸಜ್ಜಾದ ಬಿಜೆಪಿ

ಜನವಸತಿ ಪ್ರದೇಶದಿಂದ ದೂರವಿರುವ ಹಾಗೂ ಪಾಳು ಬಂಗಲೆಯಂತೆ ಕಾಣುವ ಶಾಲೆಗೆ ಸ್ಥಳೀಯರು ಯಾರೂ ಮಕ್ಕಳನ್ನು ಸೇರಿಸುತ್ತಿಲ್ಲ. ಕಟ್ಟಡದ ಮೇಲ್ಭಾಗವನ್ನು ಜೇಡರಬಲೆ ಆವರಿಸಿಕೊಂಡಿದೆ. ನೆಲಹಾಸು ಹಾಳಾಗಿದೆ. ಮಕ್ಕಳು ಕುಳಿತುಕೊಳ್ಳುವುದಕ್ಕೆ ಪೀಠೋಪಕರಣಗಳಿಲ್ಲದಂತಹ ದುಸ್ಥಿತಿ ತಲುಪಿದೆ.

ವಲಸೆ ಮಕ್ಕಳಷ್ಟೇ ದಾಖಲು:

ನಗರ ಪ್ರದೇಶದ ಮಕ್ಕಳನ್ನು ಸೆಳೆಯುವ ಶಕ್ತಿಯನ್ನೇ ಕಳೆದುಕೊಂಡಿರುವ ಈ ಶಾಲೆಗೆ ಕೂಲಿಯನ್ನರಸಿಕೊಂಡು ಬರುವ ಮಕ್ಕಳಷ್ಟೇ ಆಧಾರವಾಗಿದ್ದಾರೆ. ಐದು ವರ್ಷಗಳಿಂದಲೂ ಈ ಶಾಲೆಯ ಸ್ಥಿತಿ ಹೀಗೆಯೇ ಇದ್ದು ಮಕ್ಕಳ ದಾಖಲಾತಿ 10ರ ಗಡಿಯನ್ನು ತಲುಪಿಲ್ಲ.

2016-17ರಲ್ಲಿ 08 ವಿದ್ಯಾರ್ಥಿಗಳು, 2017-18ರಲ್ಲಿ 08, 2018-19ರಲ್ಲಿ 09, 2019-20ರಲ್ಲಿ 04 ಹಾಗೂ 2020-21ನೇ ಸಾಲಿನಲ್ಲಿ 9 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಒಂದು ಕಾಲದಲ್ಲಿ ಮಂಡ್ಯ ನಗರ ಸುತ್ತಮುತ್ತಲಿನ ಗ್ರಾಮಗಳಿಂದ 800ಕ್ಕೂ ಹೆಚ್ಚು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ನಿತ್ಯ ಸಚಿವ ಕೆ.ವಿ. ಶಂಕರಗೌಡ, ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಶಾಸಕ ಎಚ್‌.ಡಿ. ಚೌಡಯ್ಯ ಅವರಂತಹ ಘಟಾನುಘಟಿಗಳು ಓದಿದ ಶಾಲೆ ಈಗ ಮುಚ್ಚುವ ಸ್ಥಿತಿ ತಲುಪಿರುವುದು ವಿಪರ್ಯಾಸದ ಸಂಗತಿ.

ಶಾಲಾ ಜಾಗ ಅತಿಕ್ರಮಣ:

ತರಕಾರಿ ಮಾರುಕಟ್ಟೆಸ್ಥಳಾಂತರಕ್ಕಾಗಿ ನಗರಸಭೆ ಸರ್ಕಾರಿ ಶಾಲೆಯ ಕಾಂಪೌಂಡ್‌ ಬಳಿ 160 ಮಳಿಗೆಗಳನ್ನು ನಿರ್ಮಿಸಿತು. ಮೂಲಸೌಲಭ್ಯದ ಕೊರತೆ ನೆಪವೊಡ್ಡಿ ವ್ಯಾಪಾರಿಗಳು ಹೊಸ ಮಳಿಗೆಗಳಿಗೆ ತೆರಳದ ಕಾರಣ ಮಳಿಗೆಗಳು ಈಗ ಅನೈತಿಕ ಚಟುವಟಿಕೆ ತಾಣವಾಗಿ ರೂಪುಗೊಂಡಿದೆ. ಎರಡು ಎಕರೆ ವಿಶಾಲವಾದ ಜಾಗದಲ್ಲಿ ಮೇಲೆದ್ದಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಶಾಲೆ ಜಾಗವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿಯೂ ಶಿಕ್ಷಣ ಇಲಾಖೆ ವಿಫಲವಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗುತ್ತಿರುವ ಶಾಲೆಯನ್ನು ಪುನಶ್ಚೇತನಗೊಳಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ.

click me!