ಶೂನ್ಯದತ್ತ ವಾಲುತ್ತಿದೆ ಕೊರೋನಾ ವೈರಸ್‌ ಪ್ರಕರಣ..!

By Kannadaprabha NewsFirst Published Feb 19, 2021, 1:26 PM IST
Highlights

ಸಾವಿನ ಪ್ರಮಾಣ ಸಂಪೂರ್ಣ ಇಳಿಮುಖ| ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ ಬರೀ 25 ಸಕ್ರೀಯ ಪ್ರಕರಣಗಳು| ಮಾಸ್ಕ್‌ ಇಲ್ಲ- ಅಂತರವಿಲ್ಲ| ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ 39,198 ಕೊರೋನಾ ಪಾಸಿಟಿವ್‌ ಪ್ರಕರಣಗಳು| ಈ ಪೈಕಿ 38,576 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ| 

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಫೆ.19): ರಾಜ್ಯದಲ್ಲಿಯೇ ಅತಿ ಹೆಚ್ಚು ಕೋವಿಡ್‌ ವೈರಸ್‌ ಪ್ರಕರಣಗಳು ಕಂಡು ಬಂದಿದ್ದ ಜಿಲ್ಲೆಗಳಲ್ಲೊಂದಾದ ಗಣಿ ಜಿಲ್ಲೆ ಬಳ್ಳಾರಿ (ವಿಜಯನಗರವೂ ಸೇರಿ)ಯಲ್ಲೀಗ ವೈರಸ್‌ ಹಾವಳಿ ಬೆರಳೆಣಿಕೆಗೆ ಇಳಿಮುಖವಾಗಿದೆ. ಕೊರೋನಾ ದಾಳಿಯ ಸಾವಿನ ಸಂಖ್ಯೆ ಸಂಪೂರ್ಣ ನಿಲುಗಡೆಯಾಗಿದೆ. ಎರಡು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ವೈರಸ್‌ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ತಲುಪಿದ್ದು, ಶೀಘ್ರದಲ್ಲಿಯೇ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಪ್ರಕರಣಗಳು ಸಹ ಶೂನ್ಯವಾಗಲಿವೆ ಎಂದು ವೈದ್ಯಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ 7-8 ತಿಂಗಳ ಹಿಂದೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಕೋರೋನಾ ವೈರಸ್‌ ಪ್ರಕರಣಗಳು ಕಂಡು ಬಂದಿದ್ದವು. ವೈರಸ್‌ ದಾಳಿಗೆ ಸಾವಿನ ಕದ ತಟ್ಟುವವರ ಸಂಖ್ಯೆಯೂ ಏರಿಕೆ ಕಂಡಿತ್ತು. ಇದರಿಂದ ಸಣ್ಣ ಕೆಮ್ಮು, ನೆಗಡಿ, ಜ್ವರಕ್ಕೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವೈರಸ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟುಕ್ರಮಗಳನ್ನು ಕೈಗೊಂಡ ನಡುವೆಯೂ ಸಾವಿನ ಸಂಖ್ಯೆ ಇಳಿಕೆ ಕಂಡಿರಲಿಲ್ಲ. ವೈರಸ್‌ ಹಾವಳಿ ಸಹ ತಹಬದಿಗೆ ಬಂದಿರಲಿಲ್ಲ. ಆದರೆ, ಕಳೆದ ಮೂರು ತಿಂಗಳಿನಿಂದ ವೈರಸ್‌ನ ದಾಳಿ ತೀವ್ರ ಇಳಿಕೆ ಕಂಡು ಬಂದಿದ್ದು ಸಾವಿನ ಸಂಖ್ಯೆಯಲ್ಲೂ ಭಾಗಶಃ ನಿಲುಗಡೆ ಕಂಡಿದೆ. ಈವರೆಗೆ 5.12 ಲಕ್ಷ ಜನರಿಗೆ ಕೊರೋನಾ ಸಂಬಂಧ ಆರೋಗ್ಯ ತಪಾಸಣೆ ಮಾಡಲಾಗಿದೆ.

ಈವರೆಗೆ ಎಷ್ಟು ಪ್ರಕರಣಗಳು?:

ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ 39,198 ಕೊರೋನಾ ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿವೆ. ಈ ಪೈಕಿ 38,576 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಿತ್ಯ 1 ಸಾವಿರದಿಂದ 1500 ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಕಳೆದ ಹದಿನೈದು ದಿನಗಳಿಂದ ವೈರಸ್‌ ಪತ್ತೆಯಾಗಿಲ್ಲ. ಸದ್ಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ 25 ಪ್ರಕರಣಗಳು ಮಾತ್ರ ಸಕ್ರಿಯವಾಗಿದ್ದು, 597 ಜನರು ಸೋಂಕಿತರು ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಪೈಕಿ ಬಳ್ಳಾರಿ 10, ಸಂಡೂರು 1, ಸಿರುಗುಪ್ಪ 1, ಕೂಡ್ಲಿಗಿ 4, ಹೊಸಪೇಟೆ 7, ಹಗರಿಬೊಮ್ಮನಹಳ್ಳಿ 1 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ಓರ್ವರಿಗೆ ವೈರಸ್‌ ಸಕ್ರೀಯವಾಗಿದೆ. ಹಡಗಲಿ, ಕುರುಗೋಡು, ಕಂಪ್ಲಿ, ಕೊಟ್ಟೂರು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಬಂದಿದೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಮೇಲೆ ರಾಮುಲು ಕಣ್ಣು..?

ಮಾಸ್ಕ್‌ ಇಲ್ಲ- ಅಂತರವಿಲ್ಲ:

ಕೊರೋನಾ ವೈರಸ್‌ ಬಗ್ಗೆ ನಿರ್ಲಕ್ಷ್ಯ ಸಲ್ಲ. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಬಹುತೇಕ ಕಡೆ ಮಾಸ್ಕ್‌ ಕಂಡು ಬರುವುದಿಲ್ಲ. ಸಾಮಾಜಿಕ ಅಂತರದತ್ತ ಜನರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಇಡೀ ದೇಶದಲ್ಲಿ ಕೊರೋನಾ ವೈರಸ್‌ ತೀವ್ರ ಇಳಿಮುಖ ಕಂಡು ಬರುತ್ತಿರುವುದರಿಂದ ಸಾರ್ವಜನಿಕರಲ್ಲೂ ಕೊರೋನಾತಂಕ ದೂರವಾಗಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣ ಇಳಿಮುಖವಾಗುತ್ತಿದೆ. ಇದು ಹೆಚ್ಚು ನೆಮ್ಮದಿ ತರುವ ಸಂಗತಿ. ವೈರಸ್‌ ನಿಯಂತ್ರಣಕ್ಕೆ ಜಿಲ್ಲೆಯ ಜನರು ಸಹಕರಿಸಿದರು ಎಂದು ಬಳ್ಳಾರಿ ಡಿಎಚ್‌ಒ ಡಾ. ಜನಾರ್ದನ ತಿಳಿಸಿದ್ದಾರೆ. 
 

click me!