ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಮರ್ಯಾದ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂಬಮಧಿಗಳನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು (ಫೆ.19): ಎರಡು ದಿನಗಳ ಹಿಂದೆ ಪ್ರೇಮ ವಿವಾಹ ಕಾರಣಕ್ಕೆ ಲಗ್ಗೆರೆಯಲ್ಲಿ ನಡೆದಿದ್ದ ಎಲೆಕ್ಟ್ರಿಷಿಯನ್ ಚೇತನ್ (25) ಕೊಲೆ ಪ್ರಕರಣ ಸಂಬಂಧ ಮೃತನ ಭಾಮೈದ ಹಾಗೂ ಆತನ ದಾಯಾದಿಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹತ್ತಿರದ ಕೊಡುವತ್ತಿ ಗ್ರಾಮದ ಆಕಾಶ್, ಆತನ ಚಿಕ್ಕಪ್ಪ ನಂಜೇಶ್ ಅಲಿಯಾಸ್ ನಂಜೇಗೌಡ ಹಾಗೂ ದೀಪಕ್ ಬಂಧಿತರು. ಕುಣಿಗಲ್ ತಾಲೂಕಿನ ಹುಲಿಯೂದುರ್ಗ ಹತ್ತಿರದ ಕೊಡುವತ್ತಿ ಗ್ರಾಮದ ಭೂಮಿಕಾ ಹಾಗೂ ಆಕೆಯ ನೆರೆಗ್ರಾಮದ ಚೇತನ್ ಪ್ರೀತಿಸುತ್ತಿದ್ದರು.
ಬರ್ತ್ ಡೇ ವಿಶ್ ನೆಪ ಹೇಳಿಕೊಂಡು ಸಹೋದರಿಯ ಪತಿಯನ್ನೇ ಹತ್ಯೆಗೈದ ಕಿರಾತಕರು ...
ಈ ಪ್ರೇಮವನ್ನು ವಿರೋಧಿಸಿದ್ದ ಭೂಮಿಕಾ ಕುಟುಂಬದವರು, 2 ತಿಂಗಳ ಹಿಂದೆ ಮಗಳಿಗೆ ಬೆಸ್ಕಾಂ ಉದ್ಯೋಗಿ ಜತೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದರು. ಆದರೆ ವಿವಾಹವಾದ ಹದಿನೈದು ದಿನಕ್ಕೆ ಪತಿ ಮನೆಯಿಂದ ಓಡಿ ಬಂದ ಆಕೆ, ಕುಣಿಗಲ್ ಸಮೀಪದ ದೇವಾಲಯದಲ್ಲಿ ಪ್ರಿಯಕರ ಚೇತನ್‌ನೊಂದಿಗೆ ಎರಡನೇ ಮದುವೆಯಾದಳು.
ವಿವಾಹವಾದ ಬಳಿಕ ಲಗ್ಗೆರೆ ಹತ್ತಿರದ ಎಲ್.ಜಿ.ರಾಮಣ್ಣ ಲೇಔಟ್‌ನಲ್ಲಿ ದಂಪತಿ ವಾಸವಾಗಿದ್ದರು. ಸೋದರಿ ಮನೆ ಪತ್ತೆ ಹಚ್ಚಿದ ಆಕಾಶ್, ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಮಂಗಳವಾರ ಮಧ್ಯಾಹ್ನ ಸೋದರಿ ಮನೆಗೆ ಹೋಗಿದ್ದ. ಆಗ ಟಿವಿ ನೋಡುವ ನೆಪದಲ್ಲಿ ಸೋದರಿಯನ್ನು ಮನೆಯಿಂದ ಹೊರ ಕಳುಹಿಸಿದ ಆರೋಪಿಗಳು, ನಂತರ ಚೇತನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.