ರಾಣಿಬೆನ್ನೂರಲ್ಲಿ ದಲ್ಲಾಳಿ, ಎಪಿಎಂಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ರೈತರು| ಗದಗ ಮಾರುಕಟ್ಟೆಯಲ್ಲೂ ಇಳಿದ ಈರುಳ್ಳಿ ದರ ಹುಬ್ಬಳ್ಳಿಯಲ್ಲಿ ಮಾತ್ರ ಸ್ಥಿರ| ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏಕಾಏಕಿ ಕ್ವಿಂಟಲ್‌ಗೆ 1000 ದವರೆಗೆ ಕುಸಿತ ಕಂದಿದೆ| ಹೀಗಾಗಿ ರೈತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಕಳೆದ ವಾರವಷ್ಟೇ ಎಪಿಎಂಸಿಯಲ್ಲಿ ಗುಣಮಟ್ಟದ ಈರುಳ್ಳಿಗೆ ಒಂದು ಕ್ವಿಂಟಲ್‌ಗೆ 3700 ದರ ಇತ್ತು| ಗುರುವಾರ ಏಕಾಏಕಿ ದರ ಕ್ವಿಂಟಲ್‌ಗೆ 2700ಕ್ಕೆ ಕುಸಿತ ಕಂಡಿದ್ದರಿಂದ ರೈತರಿಗೆ ಆಘಾತವುಂಟಾಗಿತ್ತು|
ರಾಣಿಬೆನ್ನೂರು[ಅ.4]: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏಕಾಏಕಿ ಕ್ವಿಂಟಲ್‌ಗೆ 1000 ದವರೆಗೆ ಕುಸಿತ ಕಂಡ ಪರಿಣಾಮ ಆಕ್ರೋಶಗೊಂಡ ರೈತರು ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಗುರುವಾರ ನಡೆದಿದೆ. ಕಳೆದ ವಾರವಷ್ಟೇ ಎಪಿಎಂಸಿಯಲ್ಲಿ ಗುಣಮಟ್ಟದ ಈರುಳ್ಳಿಗೆ ಒಂದು ಕ್ವಿಂಟಲ್‌ಗೆ 3700 ದರ ಇತ್ತು. ಗುರುವಾರ ಏಕಾಏಕಿ ದರ ಕ್ವಿಂಟಲ್‌ಗೆ 2700ಕ್ಕೆ ಕುಸಿತ ಕಂಡಿದ್ದರಿಂದ ರೈತರಿಗೆ ಆಘಾತವುಂಟಾಗಿತ್ತು.
ವಿವಿಧೆಡೆಯಿಂದ ಆಗಮಿಸಿದ್ದ ರೈತರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ ದಲ್ಲಾಳಿಗಳು, ಎಪಿಎಂಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ದಲ್ಲಾಳಿಗಳ ಕುತಂತ್ರವೇ ಇದಕ್ಕೆ ಕಾರಣವಾಗಿದ್ದು ಉತ್ತಮ ದರವಿದೆ ಎಂದು ಮಾರಾಟಕ್ಕೆ ತಂದರೆ ಈ ರೀತಿ ದರ ಇಳಿಕೆ ಮಾಡಿ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಬದುಕಿನ ಜೊತೆ ಚೆಲ್ಲಾಟ ವಾಡುತ್ತಿರುವ ದಲ್ಲಾಳಿಗಳು
ಸಾಕಷ್ಟು ಖರ್ಚು ಮಾಡಿ ಈರುಳ್ಳಿ ಬೆಳೆದ ರೈತನಿಗೆ ದರ ಕುಸಿತವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದಾವಣಗೆರೆಯಲ್ಲಿ ಚೀಲಕ್ಕೆ 5 ಕಮೀಷನ್ ಪಡೆಯುತ್ತಿದ್ದರೆ ಇಲ್ಲಿನ ಮಾರುಕಟ್ಟೆಯಲ್ಲಿ ಚೀಲಕ್ಕೆ 18 ಕಮೀಷನ್ ವಸೂಲಿ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದರೂ ನಮಗೆ ಮಾತ್ರ ಕಡಿಮೆ ದರಕ್ಕೆ ಖರೀದಿ ಮಾಡುತ್ತಿದ್ದಾರೆ. ಮೊದಲೇ ಪ್ರವಾಹದಿಂದ ಈರುಳ್ಳಿ ಬೆಳೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲೂ ನಿಷ್ಕರುಣಿ ದಲ್ಲಾಳಿಗಳು ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ವರ್ತಕರೊಂದಿಗೆ ಸಂಧಾನ ನಡೆಸಿ ಹರಾಜು ಆದ ಈರುಳ್ಳಿಗೆ ಹೆಚ್ಚುವರಿ ಎರಡರಿಂದ ಮೂರು ನೂರು ನೀಡಿ ಖರೀದಿಸುವಂತೆ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಹಾವೇರಿ, ರಾಣಿಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನುಳಿದಂತೆ ಗದಗ ಎಪಿಎಂಸಿ ಮಾರುಕಟ್ಟೆಯಲ್ಲೂ ಗುರುವಾರ ಈರುಳ್ಳಿಯ ದರದಲ್ಲಿ ಸ್ವಲ್ಪ ಇಳಿಕೆ ಆಗಿತ್ತು. ಬುಧವಾರ ಕ್ವಿಂಟಲ್‌ಗೆ 1500- 3500 ಇದ್ದ ದರ ಇಂದು 1000-2800 ಕ್ಕೆ ಕುಸಿದಿತ್ತು. ಆದರೆ ಯಾವುದೇ ಪ್ರತಿಭಟನೆ ಅಥವಾ ಆಕ್ರೋಶ ಇಲ್ಲದೇ ವ್ಯವಹಾರ ನಡೆಯಿತು. ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಬುಧವಾರ 3550 ಇದ್ದ ದರ ಗುರುವಾರ ಕೇವಲ 150 ರು. ಮಾತ್ರ ಇಳಿಕೆ ಕಂಡಿದ್ದು 3400ಕ್ಕೆ ಮಾರಾಟವಾಯಿತು.