ಇಳಿಯಿತು ಈರುಳ್ಳಿ ಬೆಲೆ : ಈಗೆಷ್ಟು ?

By Suvarna NewsFirst Published Dec 2, 2019, 3:25 PM IST
Highlights

ದಿನದಿನಕ್ಕೂ ಭಾರೀ ಏರಿಕೆ ಕಾಣುತ್ತಿದ್ದ ಈರುಳ್ಳಿ ಬೆಲೆಯಲ್ಲೀಗ ಕೊಂಚ ಮಟ್ಟಿನ ಇಳಿಕೆಯಾಗಿದೆ. ಹಾಗಾದ್ರೆ ಇಳಿದ ಬೆಲೆ ಎಷ್ಟು ?

ಕಾರವಾರ [ಡಿ.02]:  ಕಳೆದ ವಾರ ಭಾನುವಾರದ ಸಂತೆಯಲ್ಲಿ 80 ರಿಂದ 85 ರು. ಇದ್ದ ಈರುಳ್ಳಿ ಈ ವಾರ 60ರಿಂದ 70 ರು.ಗೆ ಇಳಿಕೆ ಕಂಡಿದೆ. ನಾಸಿಕ್, ಪುಣೆಯಿಂದ ಪೂರೈಕೆ ಆಗುತ್ತಿರುವುದರ ಕಾರಣ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ. 

ಎರಡು ವಾರದ ಹಿಂದೆ 60 ರಿಂದ 65 ರು. ಇತ್ತು. ಕಳೆದ ವಾರ ಏಕಾಏಕಿ ಏರಿಕೆ ಕಂಡಿತ್ತು. ಈ ವಾರ ಪುನಃ ಇಳಿಕೆ ಕಂಡಿದೆ. ಬೆಳಗಾವಿ, ಹುಬ್ಬಳ್ಳಿಯಿಂದ ಒಳಗೊಂಡು ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತದೆ. ಆದರೆ, ಈ ಭಾಗದಲ್ಲಿ ನೆರೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇರಲಿಲ್ಲ. ಹೀಗಾಗಿ ಏಕಾಏಕಿ ದರದಲ್ಲಿ ಏರಿಕೆ ಕಂಡಿತ್ತು. ಆದರೆ, ಈಗ ಪುಣೆ ಹಾಗೂ ನಾಸಿಕ್‌ದಿಂದ ಕರ್ನಾಟಕಕ್ಕೆ ಈರುಳ್ಳಿ ಪೂರೈಕೆ ಆಗುತ್ತಿರುವುದರಿಂದ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

ಕಳೆದ ವಾರ ಈರುಳ್ಳಿ ಖರೀದಿ ಮಾಡಲು ತೆರಳಿದ್ದ ಗ್ರಾಹಕರು ಹೌಹಾರುತ್ತಿದ್ದರು. ಸಸ್ಯಾಹಾರ ಹಾಗೂ ಮಾಂಸಾಹಾರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಳಕೆ ಇರುವುದರಿಂದ ಬೇಡಿಕೆ ಹೆಚ್ಚಿರುತ್ತದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಾಗ ದರದಲ್ಲಿ ಏರಿಕೆ ಕಾಣುತ್ತದೆ. ಉಳಿದ ಕಡೆ ಹೋಲಿಸಿದರೆ ಭಾನುವಾರದ ಸಂತೆಯಲ್ಲಿ ದರ ಬಹಳಷ್ಟು ಕಡಿಮೆಯಿತ್ತು. ಈರುಳ್ಳಿ ಖರೀದಿಗೆ ಹೋದ ಗ್ರಾಹಕ ನಿಟ್ಟುಸಿರು ಬಿಡುವಂತಾಗಿದೆ. ಉಳಿದ ದಿನಗಳಿಗೆ ಹೋಲಿಸಿದರೆ 60 ರಿಂದ 70 ರು. ಕೂಡಾ ಹೆಚ್ಚಾಗಿದ್ದು, ಮಾಮೂಲಿ ಸ್ಥಿತಿಗೆ ಬರಲು ಗ್ರಾಹಕರು ಕಾಯುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದರ ಏರಿಕೆಯಿಂದಾಗಿ ಹೋಟೆಲ್, ಮನೆಗಳಲ್ಲಿ ಈರುಳ್ಳಿ ಬಳಕೆ ಬಹುತೇಕ ಕಡಿಮೆಯಾಗಿತ್ತು. ಹೊಲ್‌ಸೆಲ್‌ನಲ್ಲಿ ಈರುಳ್ಳಿ ಖರೀದಿಸಿದರೂ ಹೋಟೆಲ್ ನವರಿಗೆ ನಷ್ಟವಾಗುತ್ತಿತ್ತು. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟೇ ಈರುಳ್ಳಿ ಬಳಕೆ ಮಾಡಲಾಗುತ್ತಿತ್ತು. ನೆರೆಯಿಂದ ಹೊರಬಂದ ಉತ್ತರ ಕರ್ನಾಟಕದಿಂದ, ಹೊರ ರಾಜ್ಯದಿಂದ ಈರುಳ್ಳಿ ಪೂರೈಕೆ ಹೆಚ್ಚಾದರೆ ಮುಂದಿನ ದಿನದಲ್ಲಿ ದರ ಇನ್ನೂ ಕಡಿಮೆ ಆಗುವ ಸಾಧ್ಯತೆಯಿದೆ.

ಇದೇ ವೇಳೆ ಈರುಳ್ಳಿ ದರ ಏರಿಕೆ ಕುರಿತು ಸಾಮಾಜಿ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮನೆಯ ಲಾಕರ್‌ನಲ್ಲಿ ಈರುಳ್ಳಿಯನ್ನಿಟ್ಟು ಅಗತ್ಯಕ್ಕೆ ತಕ್ಕಷ್ಟು ತೆಗೆದುಕೊಳ್ಳುವುದು, ಅಡುಗೆ ಮಾಡಲು ಹೋದ ಸೊಸೆ ಅತ್ತೆಯ ಬಳಿ ಲಾಕರ್‌ನಲ್ಲಿ ಇರುವ ಈರುಳ್ಳಿ ಕೊಡುವಂತೆ ಕೇಳುವುದು ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ ಎಂದು ಟ್ರೋಲ್ ಆರಂಭವಾಗಿತ್ತು.

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!