ಬೆಲೆ ಕುಸಿತ: 5 ಎಕರೆ ಸಮೃದ್ಧವಾಗಿ ಬೆಳೆದು ನಿಂತ ಈರುಳ್ಳಿ ಬೆಳೆ ನಾಶ ಮಾಡಿದ ರೈತ!
- ಕುಸಿದ ಬೆಲೆ, ಐದು ಎಕರೆ ಈರುಳ್ಳಿ ಬೆಳೆ ಹರಗಿದ ರೈತ
- ಸಮೃದ್ಧವಾಗಿ ಬಂದಿದ್ದರೂ ಕಟಾವು ಮಾಡಲಿಲ್ಲ
- ಮಾಡಿದ ಖರ್ಚು ಬರಲ್ವಂತೆ
- ಟ್ರ್ಯಾಕ್ಟರ್ ಮೂಲಕ ಕಟಾವಿಗೆ ಬಂದಿದ್ದ ಬೆಳೆ ಹರಗಿದ ರೈತ
ಸೋಮರಡ್ಡಿ ಅಳವಂಡಿ
ಕೊಪ್ಪಳ (ಸೆ.25) : ಮೈತುಂಬಿಕೊಂಡು ಬೆಳೆದಿರುವ ಈರುಳ್ಳಿ ಬೆಳೆ, ಕಟಾವು ಮಾಡಿದ್ದರೆ 600-800 ಚೀಲ ಆಗುತ್ತಿತ್ತು. ಸರಿಯಾದ ದರ (ಕ್ವಿಂಟಲ್‌ಗೆ .2 ಸಾವಿರ) ಸಿಕ್ಕಿದ್ದರೆ ಬರೋಬ್ಬರಿ .8 ಲಕ್ಷ ಆದಾಯ ಬರುತ್ತಿತ್ತು. ಆದರೆ ದರ ಕುಸಿದಿದೆ ಎನ್ನುವ ಕಾರಣಕ್ಕಾಗಿಯೇ ಆ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಹರಗಲಾಗಿದೆ. ತಾಲೂಕಿನ ಹ್ಯಾಟಿ ಗ್ರಾಮದ ನಿವಾಸಿ ಸಿದ್ದಪ್ಪ ಯಡ್ರಮನಳ್ಳಿ ಅವರ ಕಷ್ಟದ ನಿರ್ಧಾರ ಇದು. ಇದು, ಕೇವಲ ಒಬ್ಬ ರೈತನ ಕತೆಯಲ್ಲ. ಜಿಲ್ಲಾದ್ಯಂತ ರೈತರು ಕಟಾವಿಗೆ ಬಂದಿರುವ ಈರುಳ್ಳಿಯನ್ನು ಕಟಾವು ಮಾಡುವ ಬದಲಿಗೆ ಹರಗುತ್ತಿದ್ದಾರೆ. ಮನೆಗೊಂದಿಷ್ಟುಈರುಳ್ಳಿಯನ್ನು ತೆಗೆದುಕೊಂಡು ಹರಗುತ್ತಿದ್ದಾರೆ. ಇದರಿಂದ ಮಾರುಕಟ್ಟೆಸೇರಬೇಕಾದ ಲಕ್ಷಾಂತರ ಚೀಲ ಈರುಳ್ಳಿ ಈಗ ಮಣ್ಣಾಗುತ್ತಿದೆ. ಈರುಳ್ಳಿ ದರ ಪಾತಳಕ್ಕೆ ಕುಸಿದಿದೆ. ಹೀಗಾಗಿ ಕಟಾವು ಮಾಡುವ ವೆಚ್ಚವೂ ಬರುವುದಿಲ್ಲ. ಆದ್ದರಿಂದ ರೈತರು ಅನಿವಾರ್ಯವಾಗಿ ಕಟಾವು ಮಾಡುವ ಬದಲು ಹರಗುತ್ತಿದ್ದಾರೆ.
ಬೆಲೆ ಪಾತಳಕ್ಕೆ: ಈರುಳ್ಳಿ ಬೆಲೆ ಕಳೆದೊಂದು ವರ್ಷದಿಂದ ಏರಿಕೆಯಾಗುತ್ತಲೇ ಇಲ್ಲ. ಕ್ವಿಂಟಲ್‌ಗೆ .500 -1500 ರುಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಬಿಡಿ ಮಾರಾಟಗಾರರು ಈಗಲೂ ದುಬಾರಿ ದರಕ್ಕೆ ಮಾರುತ್ತಿದ್ದಾರೆ. ಆದರೆ ಸಗಟು ದರ ಮಾತ್ರ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಬೆಳೆಗೆ ಮಾಡಿದ ಖರ್ಚಲ್ಲ, ಕಟಾವು ಮಾಡಿದ ಖರ್ಚು ಕೂಡ ಬರುವುದಿಲ್ಲ. ಇದರಿಂದ ರೈತರು ತತ್ತರಿಸಿ ಹೋಗಿದ್ದಾರೆ. ಮೈತುಂಬಿಕೊಂಡು ಬಂದಿರುವ ಈರುಳ್ಳಿಯನ್ನು ಒಲ್ಲದ ಮನಸ್ಸಿನಿಂದಲೇ ಹರಗಿ ಮಣ್ಣುಪಾಲು ಮಾಡುತ್ತಿದ್ದಾರೆ. ಮಾಡಿದ ಸಾಲ ಶೂಲವಾಗುತ್ತಿದೆ.
3000 ಹೆಕ್ಟೇರ್ ಈರುಳ್ಳಿ ಬೆಳೆ: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸುಮಾರು 8 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಸಕಾಲಕ್ಕೆ ಮಳೆಯಾಗದಿರುವುದರಿಂದ ಮತ್ತು ಆಗಿರುವ ಮಳೆ ಅತಿಯಾಗಿದ್ದರಿಂದ ಕೇವಲ 3 ಸಾವಿರ ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ. ಅದರಲ್ಲೂ ಬಹುತೇಕ ಅತಿಯಾದ ಮಳೆಯಿಂದ ಕೊಳೆತು ಹೋಗಿದೆ. ಅಳಿದುಳಿದಿರುವುದು ಸೂಕ್ತ ಬೆಲೆ ಇಲ್ಲದೆ ರೈತರು ಕಟಾವು ಮಾಡುವ ಬದಲು ಹರಗುತ್ತಿದ್ದಾರೆ.
ರಫ್ತು ನಿಷೇಧದಿಂದ ದರ ಕುಸಿತ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಭಾರಿ ಬೇಡಿಕೆ ಇದೆ. ಆದರೂ ಸ್ಥಳೀಯ ಮಾರುಕಟ್ಟೆಯಲ್ಲಿ ವಿಪರೀತ ದರ ಹೆಚ್ಚಳವಾಗುತ್ತದೆ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಫ್ತು ನಿಷೇಧ ಮಾಡಿದೆ. ಇದರಿಂದ ಕಳೆದೊಂದು ವರ್ಷದಿಂದ ಈರುಳ್ಳಿ ದರ ಏರಿಕೆಯಾಗುತ್ತಲೇ ಇಲ್ಲ. ಈಗಲಾದರೂ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಈರುಳ್ಳಿ ದರ ಕುಸಿದಿರುವುದರಿಂದ ರೈತರು ಕಟಾವು ಮಾಡುತ್ತಿಲ್ಲ. ಸ್ಥಳೀಯ ಸಂಗ್ರಹಕ್ಕೂ ಅವಕಾಶ ಇಲ್ಲದಿರುವುದರಿಂದ ಹರಗುತ್ತಿದ್ದಾರೆ. ಅಷ್ಟಕ್ಕೂ ಈ ವರ್ಷ ಈರುಳ್ಳಿ ಏರಿಯಾ ತೀರಾ ಕಡಿಮೆ ಇದೆಯಾದರೂ ದರ ಬರುತ್ತಿಲ್ಲ.
ಕೃಷ್ಣ ಉಕ್ಕುಂದ, ಡಿಡಿ ತೋಟಗಾರಿಕೆ ಇಲಾಖೆ, ಕೊಪ್ಪಳ
ಐದು ಎಕರೆ ಈರುಳ್ಳಿಯನ್ನು ಬೆಳೆಯಲು ಬರೋಬ್ಬರಿ .1 ಲಕ್ಷ ಖರ್ಚು ಮಾಡಿದ್ದೇನೆ. ಈಗ ಬೆಳೆಯೂ ಉತ್ತಮವಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ದರ ಇಲ್ಲದಿರುವುದರಿಂದ ಕಟಾವು ಮಾಡಿದ ಖರ್ಚು ಬರುವುದಿಲ್ಲ. ಹೀಗಾಗಿ ಹರಗುತ್ತಿದ್ದೇನೆ.
ಸಿದ್ದಪ್ಪ ಯಡ್ರಮನಳ್ಳಿ