ಗ್ರಾಹಕರ ಕಣ್ಣೀರಿಗೆ ಕಾರಣವಾಗಿದ್ದ ಈರುಳ್ಳಿ ದರ ದಿಢೀರ್‌ ಕುಸಿತ!

By Suvarna NewsFirst Published Dec 9, 2019, 11:16 AM IST
Highlights

ಬೀದಿ ಮಾರು​ಕ​ಟ್ಟೆ​ಯಲ್ಲಿ ಅದೇ ರೀತಿ ದರ| ಮಹಾರಾಷ್ಟ್ರ, ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗಿ ಹೆಚ್ಚು ಈರುಳ್ಳಿ ಪ್ರದೇಶ ನಾಶ| ರಾಜ್ಯ ಅಲ್ಲದೆ ದೇಶಾದ್ಯಂತ ಈರುಳ್ಳಿ ಕೊರತೆಯಿಂದ ದರ ಹೆಚ್ಚಳ| ಈ ಬಾರಿ ಮಳೆ ಸುರಿದಿದ್ದರಿಂದ ಫಸಲು ಹಾನಿಯಾಗಿ ಉತ್ಪಾದನೆ ಕಡಿಮೆ|  

ಖಾಜಾಮೈನುದ್ದೀನ್‌ ಪಟೇಲ್‌ 

ವಿಜಯಪುರ(ಡಿ.09): ಒಂದೆಡೆ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ (ಈರು​ಳ್ಳಿ) ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಹೊರೆ ಬೀಳುತ್ತಿದ್ದರೆ, ಅತ್ತ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಿಢೀರ್‌ ದರ ಕುಸಿತದ ಹಿನ್ನೆಲೆಯಲ್ಲಿ ರೈತರು ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಆದರೆ ಭಾನುವಾರ ಸಂತೆಯಲ್ಲಿ ಉಳ್ಳಾ​ಗಡ್ಡಿ ಬೆಲೆ ಕೇಳಿ ಜನರು ಬಾಯಿ, ಕಣ್ಣು ಮುಚ್ಚುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವಾರ ಪ್ರತಿ ಕ್ವಿಂಟಾಲ್‌ಗೆ 15 ಸಾವಿರ ಇದ್ದ ದರ ಇಂದು ಏಕಾಏಕಿಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 7 ಸಾವಿರಗೆ ಕುಸಿತ ಕಂಡಿದೆ. ಆದರೆ ಬೀದಿ ಬಳಿ ವ್ಯಾಪಾರದಲ್ಲಿ ಮಾತ್ರ ಈ ಬೆಲೆ ಕುಸಿತ ಯಾವುದೇ ಪರಿಣಾಮ ಬೀರಲಿಲ್ಲ. ಈರುಳ್ಳಿ ಪ್ರತಿ ಕೆಜಿ 90-170 ಮಾರಾಟವಾಗುತ್ತಿತ್ತು. ದುಬಾರಿ ಈರುಳ್ಳಿ ಕತ್ತರಿಸುವ ಮುನ್ನವೇ ಗ್ರಾಹಕರ ಕಣ್ಣಲ್ಲಿ ನೀರು ಜಿನುಗುತ್ತಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಮಧ್ಯ ನಗರದಲ್ಲಿ ಭಾನುವಾರ ರಾಮಮಂದಿರ ರಸ್ತೆ, ಲಿಂಗದ ಗುಡಿ ರಸ್ತೆ, ಸಿದ್ದೇಶ್ವರ ರಸ್ತೆ, ಇಬ್ರಾಹಿಂಪೂರ, ಗೋದಾವರಿ, ಜಲನಗರ, ತೇಕಡೆ ಗಲ್ಲಿ, ಟಕ್ಕೆ ಸೇರಿದಂತೆ ತರಕಾರಿ ಸಂತೆ ನಡೆಯಲ್ಲಿ ದುಬಾರಿಯಾಗಿದ ಈರುಳ್ಳಿ ಬೆಲೆ ಗಗನಚುಂಬಿಯಾಗಿತ್ತು.

ಈರುಳ್ಳಿ ಬೆಲೆ ಏರಿಕೆಯಿಂದಾಗಿ ಅನೇಕರು ಈರುಳ್ಳಿಯನ್ನೇ ಮರೆತಂತಿದೆ. ಹೋಟೆಲ್‌ಗಳಲ್ಲಿ, ಢಾಬಾಗಳಲ್ಲಿ ಹೇರಳವಾಗಿ ಈರುಳ್ಳಿ ಸಿಗುತ್ತಿತ್ತು. ಎರಡ್ಮೂರು ಬಾರಿ ಈರುಳ್ಳಿ ಕೇಳಿದರೂ ಹೋಟೆಲ್‌ನವರು, ಬಾದವರು ನಗುಮೊಗದಿಂದಲೇ ಈರುಳ್ಳಿ ಕೊಡುತ್ತಿದ್ದರು. ಈಗ ಎರಡು ಮೂರು ಬಾರಿ ಒಂದೆಡೆ ಇರಲಿ ಈರುಳ್ಳಿಯೇ ಇಲ್ಲ. ಅನೇಕ ಕಡೆಗಳಲ್ಲಿ ಈರಳ್ಳಿ ಬದಲಿಗೆ ಸೌತೆಕಾಯಿ, ಮೂಲಂಗಿ, ಕ್ಯಾಬೀಜ್‌ ನೀಡಲಾಗುತ್ತಿದೆ. ಬಿಹಾರ ಮೊದಲಾದ ಮೂಲಗಳಿಂದ ಬಂದಿರುವ ಛೆನ್ನಾ, ಶೇವ್‌ ಮಸಾಲಾ ವ್ಯಾಪಾರಸ್ಥರು ಸಹ ಈರುಳ್ಳಿ ಬಳಕೆಗೆ ಬ್ರೇಕ್‌ ನೀಡಿದ್ದಾರೆ. ಹೀಗಾಗಿ ಈ ಎಲ್ಲ ಖಾದ್ಯಗಳನ್ನು ಈರುಳ್ಳಿ ಇಲ್ಲದೇ ಸೇವಿಸುವಂತಾಗಿದೆ.

ಮಹಾರಾಷ್ಟ್ರ, ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗಿ ಹೆಚ್ಚು ಈರುಳ್ಳಿ ಪ್ರದೇಶ ನಾಶಗೊಂಡಿದ್ದು, ಅದರಿಂದಾಗಿ ರಾಜ್ಯ ಅಲ್ಲದೆ ದೇಶಾದ್ಯಂತ ಈರುಳ್ಳಿ ಕೊರತೆಯಿಂದ ದರ ಹೆಚ್ಚಳಗೊಂಡಿದೆ. ಈರುಳ್ಳಿ ಗುಣಮಟ್ಟಕಳಪೆಯಾಗಿದೆ. ಹೀಗಾಗಿ, ಈರುಳ್ಳಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಬಾರಿ ಮಳೆ ಸುರಿದಿದ್ದರಿಂದ ಫಸಲು ಹಾನಿಯಾಗಿ ಉತ್ಪಾದನೆ ಕಡಿಮೆಯಾಗಿದೆ. ಇದ್ದರಿಂದ ಬೆಲೆ ಗಗನಕ್ಕೆ ಏರಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಗ್ರಾಹಕರು ದುಬಾರಿ ಹಣ ಕೊಟ್ಟಾದರೂ ಸರಿ, ಈರುಳ್ಳಿ ಖರೀದಿಸಲು ಮುಂದಾದರೆ ಗುಣಮಟ್ಟದ ಈರುಳ್ಳಿ ಲಭ್ಯವಿಲ್ಲದ ಸ್ಥಿತಿ ಇದೆ, ಲಭ್ಯವಿರುವ ಅಷ್ಟೊ, ಇಷ್ಟೋ ಈರುಳ್ಳಿಗೆ ಅತೀ ಸಣ್ಣ, ಸಣ್ಣ, ಮಧ್ಯಮ ಮತ್ತು ದಪ್ಪ ಎಂದು ವಿಂಗಡಿಸಿ, ಕೆಜಿಗೆ 90 ರಿಂದ 170 ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಅಭಾವ ಹೋಟೆಲ್‌ ಉದ್ದಿಮೆಗಳ ಮೇಲೆ ಭಾರಿ ಪರಿಣಾಮ ಬೀರಿದೆ.

ಈರುಳ್ಳಿ ಬೆಲೆ ಏರಿಕೆಯಿಂದ ರೈತರ ಮುಖದಲ್ಲಿ ಸಂತೋಷ ಉಂಟಾಗಿತ್ತು. ಆದರೆ ಇಂದು ಎರಡು ದಿನ ಹಿಂದೆ ಕ್ವಿಂಟಾಲ್‌ಗೆ 15 ಸಾವಿರ ಮಾರಾಟವಾಗಿತ್ತು. ಇಂದು ದರ ಏಕಾಏಕಿಯಾಗಿ . 7 ಸಾವಿರ ಮಾರಾಟವಾಗಿದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯ ಮಾಡುತ್ತಿದ್ದಾರೆ. ಅದಕ್ಕಾಗಿ ಮರಳಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಗೋಠೆ ಗ್ರಾಮದ ರೈತ ಸಿದ್ರಾಮಯ್ಯ ಚಪ್ಪರಕ್ಕಿ ಅವರು ಹೇಳಿದ್ದಾರೆ. 

ಶನಿವಾರ ಬೆಳಗಾವಿಯಲ್ಲಿ ಕ್ವಿಂಟಾಲ್‌ಗೆ 18 ಸಾವಿರ ಮಾರಾಟವಾಗಿದ್ದು, ಈರುಳ್ಳಿ ಇಂದು 8 ಸಾವಿರ ರು.ಗೆ  ಮಾರಾಟವಾಗಿದೆ. ಪಕ್ಕದ ಜಿಲ್ಲೆಯಲ್ಲಿ ಈರುಳ್ಳಿ ಉತ್ತಮ ಮಾರಾಟವಾಗಿದೆ. ಬೀದಿ ವ್ಯಾಪರಸ್ಥರು ಕೆಜಿಗೆ . 90-170 ಮಾರಾಟ ಮಾಡುತ್ತಿದ್ದಾರೆ. ಆದರೆ ಇಂದು ವಿಜಯಪುರದ ಎಪಿಎಂಸಿಯಲ್ಲಿ ದಿಢೀರ್‌ ಇಳಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೆಗಡಿಹಾಳ ಗ್ರಾಮದ ರೈತ ಮಂಗೇಶ ರಾಠೋಡ ಅವರು ತಿಳಿಸಿದ್ದಾರೆ. 

ಉಳ್ಳಾಗಡ್ಡಿ ತುಂಬಾ ಆಗ್ಯಾವರೀ, ತುಂಬಾ ತುಟ್ಟಿಆಗಿದಕ್ಕೆ ಪ್ರತಿಸಲ ಮೂರು ಕೆಜೆ ಖರೀದಿ ಮಾಡುತ್ತಿದ್ದೇವು. ಇಂದು ಅರ್ಧ ಕೆಜಿ ಖರೀದಿ ಮಾಡಿದ್ದಿನಿ. ಉಳ್ಳಾಗಡ್ಡಿ ಇಲ್ಲದೆ ಅಡುಗೆ ಸರಿ ಆಗೋಗಿಲ್ಲ ಎಂದು ವಿಜಯಪುರ ನಗರದ ಗ್ರಾಹಕಿ ವೀಮಲಾ ಪೂಜಾರಿ ಅವರು ಹೇಳಿದ್ದಾರೆ. 
 

click me!