ತೀರ್ಥಹಳ್ಳಿಗೆ ಮತ್ತೊಂದು ಕೊರೋನಾ ಶಾಕ್..!

By Suvarna NewsFirst Published May 15, 2020, 1:52 PM IST
Highlights

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸದಾಗಿ ಕೊರೋನಾ ಪ್ರಕರಣ ಪತ್ತೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಶಿವಮೊಗ್ಗ(ಮೇ.15): ತಬ್ಲಿಘಿಗಳಿಂದಾಗಿ ಶಿವಮೊಗ್ಗ ಪ್ರವೇಶಿಸಿದ್ದ ಕೊರೋನಾ ಜಿಲ್ಲೆಯ ಜನರನ್ನು ತಬ್ಬಿಬ್ಬುಗೊಳಿಸಿತ್ತು. ಈ ಆಘಾತದಿಂದ ಹೊರಬರುವ ಮುನ್ನವೇ ಶಿವಮೊಗ್ಗ ಜಿಲ್ಲೆಯು ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸದಾಗಿ ಮತ್ತೊಂದು ಕೋವಿಡ್ 19 ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈಗಾಗಲೇ ತಾಲೂಕಿನ ಕೋಣದೂರಿನಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಹೌದು, ಶುಕ್ರವಾರವಾದ ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್‌ ಅನ್ವಯ ತೀರ್ಥಹಳ್ಳಿ ತಾಲೂಕಿನ 42 ವರ್ಷ ವಯಸ್ಸಿನ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ. ಈತನನ್ನು ರೋಗಿ ನಂಬರ್ 995 ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳ ಹಿಂದಷ್ಟೇ ಮುಂಬೈನಿಂದ ಈತ ತೀರ್ಥಹಳ್ಳಿ ತಾಲೂಕಿಗೆ ಬಂದಿದ್ದರು. ಈತನನ್ನು ಸರ್ಕಾರಿ ಶಾಲೆಯೊಂದರಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಗುರುವಾರಷ್ಟೇ ಆತನಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ ಆತನನ್ನು ನಗರ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೊಳಪಡಿಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

12 ಜನರೊಂದಿಗೆ ಪ್ರಾಥಮಿಕ ಸಂಪರ್ಕ: ರೋಗಿ ನಂಬರ್ 995 ಊರಿಗೆ ಬಂದ ಆರಂಭದಲ್ಲಿ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಈ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಕ್ವಾರಂಟೈನ್‌ಗೂ ಮುನ್ನ ಈ 12 ಜನರೊಂದಿಗೆ ಪ್ರಾಥಮಿಕ ಸಂಬಂಧ ಹೊಂದಿದ್ದರು. ಹೀಗಾಗಿ ಅವರೆಲ್ಲರನ್ನು ಇದೀಗ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 

ತೀರ್ಥಹಳ್ಳಿಯಲ್ಲಿ ಕೆಲವು ಗ್ರಾಮಗಳಲ್ಲಿ ಸೀಲ್ ಡೌನ್..!

ಶಿವಮೊಗ್ಗ ಜಿಲ್ಲಾಡಳಿತ ಗುರುವಾರ ರಾತ್ರೋರಾತ್ರಿ ತೀರ್ಥಹಳ್ಳಿ ತಾಲೂಕಿನ ಹಳ್ಳಿಬೈಲು, ಮುಳಬಾಗಿಲು, ರಂಜದಕಟ್ಟೆ ಗ್ರಾಮಗಳನ್ನು ಸೀಲ್ ಡೌನ್ ಮಾಡಿತ್ತು. ಇದರ ಬೆನ್ನಲ್ಲೇ ಜನರಲ್ಲಿ ಆತಂಕ ಮನೆಮಾಡಿತ್ತು. 

click me!