ದೇಶದಲ್ಲೀಗ ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಲಾಗುತ್ತದೆ. ಚುನಾವಣೆ ಕೆಲಸಕ್ಕೆ ಶಿಕ್ಷಕರನ್ನು ಪದೇ ಪದೇ ಬಳಸೋದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬರುತ್ತಿದೆ. ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲವೆಂಬ ದೂರುಗಳು ನಾವೇ ಹೇಳುತ್ತೇವೆ. ಚುನಾವಣೆ ಪದ್ಧತಿಯಲ್ಲಿಯೇ ಅಮೂಲಾಗ್ರ ಬದಲಾವಣೆ ಆದಲ್ಲಿ ಈ ಸಮಸ್ಯೆಯೇ ಇರೋದಿಲ್ಲವೆಂದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಕಲಬುರಗಿ(ಜ.30): ಒಂದು ದೇಶ, ಒಂದು ಚುನಾವಣೆ ಪದ್ಧತಿ ಅನುಷ್ಠಾನದಿಂದ ಭಾರತ ದೇಶದ ವಿಕಾಸಕ್ಕೆ ವೇಗ ದೊರಕಲಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ಬಳಿಯ ಬೀರನಹಳ್ಳಿಯ 240 ಎಕರೆ ವಿಶಾಲ ಭೂಪ್ರದೇಶದಲ್ಲಿ ಅದ್ಧೂರಿಯಾಗಿ ತಲೆ ಎತ್ತಿರುವ ಸುಸಜ್ಜಿತ ಪ್ರಕೃತಿ ನಗರದಲ್ಲಿ ಬುಧವಾರದಿಂದ 9 ದಿನಗಳ ಕಾಲ ನಡೆಯಲಿರುವ ಭಾರತ ಸಾಂಸ್ಕೃತಿ ಉತ್ಸವ- 7 ಹಾಗೂ ಕೊತ್ತಲ ಸ್ವರ್ಣ ಜಯಂತಿ ಸಂಭ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಚಿಂಚೋಳಿಗೆ ಅನುದಾನ ಕೊಟ್ಟು ಅಭಿವೃದ್ಧಿಪಡಿಸುತ್ತೇನೆ: ಸಂಸದ ಸಾಗರ ಖಂಡ್ರೆ
ಒನ್ ನೇಷನ್, ಒನ್ ಎಲೆಕ್ಷನ್ ಪದ್ಧತಿ ನಮ್ಮ ದೇಶಕ್ಕೆ ಅಗತ್ಯವಾಗಿದೆ. ಇಲ್ಲಿನ ಅನೇಕ ಸಂಗತಿಗಳನ್ನು ಅಧ್ಯಯನ ಮಾಡಿಯೇ ತಮ್ಮ ನೇತೃತ್ವದಲ್ಲಿ 18,524 ಪುಟಗಳ ವರದಿ ಸಲ್ಲಿಸಲಾಗಿದೆ ಎಂದ ಕೋವಿಂದ್ ಅವರು, ಲೋಕಸಭೆ ಹಾಗೂ ರಾಜ್ಯದ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು ಅನ್ನೋದೇ ಈ ಯೋಜನೆಯ ಮೂಲ ಉದ್ದೇಶ. ಇದರಿಂದ ಸಾಕಷ್ಟು ಸುಧಾರಣೆ ಸಾಧ್ಯ ಎಂದರು.
ದೇಶದಲ್ಲೀಗ ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಲಾಗುತ್ತದೆ. ಚುನಾವಣೆ ಕೆಲಸಕ್ಕೆ ಶಿಕ್ಷಕರನ್ನು ಪದೇ ಪದೇ ಬಳಸೋದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬರುತ್ತಿದೆ. ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲವೆಂಬ ದೂರುಗಳು ನಾವೇ ಹೇಳುತ್ತೇವೆ. ಚುನಾವಣೆ ಪದ್ಧತಿಯಲ್ಲಿಯೇ ಅಮೂಲಾಗ್ರ ಬದಲಾವಣೆ ಆದಲ್ಲಿ ಈ ಸಮಸ್ಯೆಯೇ ಇರೋದಿಲ್ಲವೆಂದರು.
ಲೋಕಸಭೆ ಹಾಗೂ ರಾಜ್ಯಗಳ ವಿಧಾನ ಸಭೆಗೆ ಚುನಾವಣೆಗಳು ನಡೆಸಬೇಕು. ನಂತರ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿ ಮುಗಿಸಬೇಕು. ಈಗಾಗಲೇ ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನಿವೃತ್ತ ನ್ಯಾಯಮೂರ್ತಿಗಳು ಸೇರಿ ಅನೇಕ ಕ್ಷೇತ್ರಗಳ ಪರಿಣಿತರು ಇದಕ್ಕೆ ಸಹಮತಿಸಿದ್ದಾರೆ. ದೇಶಾದ್ಯಂತ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಲಿ ಎಂದರು.
ಭಾರತ ವಿಕಾಸ ಸಂಗಮದ ರೂವಾರಿ ಕೆ.ಎನ್ ಗೋವಿಂದಾಚಾರ್ಯ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯ ರೂವಾರಿ ಬಸವರಾಜ ಪಾಟೀಲ್ ಸೇಡಂ, ವಿಜಯಪೂರ ಜ್ಞಾನ ಯೋಗಾಶ್ರಮದ ಬಸವಲಿಂಗ ಶ್ರೀಗಳು, ಬೀದರ್‌ನ ಗುರುನಾನಕ ಸಂಸ್ಥೆಯ ಸರ್ದಾರ್ ಬಲಬೀರ್ ಸಿಂಗ್, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್, ಕಲಬುರಗಿ ದಾಹೋಸ ಪೀಠದ ಡಾ. ದಾಕ್ಷಾಯಿಣಿ ಅವ್ವಾಜಿ ಇದ್ದರು.
ವೇದ- ಉಪನಿಷತ್ತುಗಳಿಂದ ಭಾರತದ ಸಂಸ್ಕತಿ ಬೇರುಗಳು ಗಟ್ಟಿ:
ಭಾರತದ ಸಂಸ್ಕೃತಿ ಋಷಿ, ಮುನಿಗಳು, ಸಾಧು ಸಂತರ ಪರಂಪರೆ ಹೊಂದಿದೆ. ಯಾವ ದೇಶದ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿರುತ್ತವೆಯೋ ಅಂತಹ ದೇಶ ವಿಕಾಸವಾಗುತ್ತದೆ, ಈ ಮಾತಿಗೆ ಭಾರತದ ವಿಕಾಸವೇ ಕನ್ನಡಿ ಎಂದ ರಾಮ್ ನಾಥ್ ಕೋವಿಂದ್ ಪ್ರಕೃತಿ ಕೇಂದ್ರಿಯ ವಿಕಾಸದ ಪರಿಕಲ್ಪನೆಗಳನ್ನು ವಿವರಿಸುತ್ತ ಸೇಡಂನಲ್ಲಿ ಸಂಘಸಿರುವ ಪ್ರಕೃತಿಯಿಂದ ವಿಕಾಸದ ಕಡೆಗೆ ಸಾಗುವ ಪರಿಕಲ್ಪನೆಯ ಭಾರತ ಸಂಸ್ಕೃತಿ ಸಂಗಮ ದೇಶದ ಸಾಂಸ್ಕೃತಿಕ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದರು.
ವೇದ, ಉಪನಿಷತ್ತುಗಳಲ್ಲಿ ಪ್ರಕೃತಿ ಕೇಂದ್ರಿತ ಪೂಜಾದಿಗಳಿಗ ಮಹತ್ವವಿದೆ. ಪಂಚಭೂತಗಳಾದ ಪೃಥ್ವಿ, ನೀರು, ವಾಯು, ಆಕಾಶ ಇವುಗಳಿಗೆಲ್ಲ ವೇದೋಪನಿಷತ್ತುಗಳಲ್ಲಿ ಪೂಜನೀಯ ಸ್ಥಾನ ನೀಡಲಾಗಿದೆ. ಪ್ರಕೃತಿ ಪೂಜಿಸುತ್ತಲೇ ನಾವು ಬದುಕಬೇಕೆಂಬುದೆ ಇದರ ಸಂದೇಶ, ಪ್ರಕೃತಿ ಬಲಿಕೊಟ್ಟು ಏನನ್ನೂ ಸಾಧಿಸಲಾಗದು ಎಂದರು.
ದಲಿತ ನಾಯಕರ ಡಿನ್ನರ್ ಪಾರ್ಟಿ ವಿವಾದ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಮಹಾಕುಂಭವೂ ಪ್ರಕೃತಿ ಆರಾಧನೆ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತಾವು ಪವಿತ್ರ ಸ್ನಾನಾದಿಗಳನ್ನು ಮಾಡಿ ಬಂದಿದ್ದಾಗಿ ಹೇಳಿದ ರಾಮ್ ನಾಥ್ ಕೋವಿಂದ್, ಗಂಗಾ, ಯುಮುನಾ ಸರಸ್ವತಿ ನದಿಗಳ ಸಂಗಮದ ಪವಿತ್ರ ತಾಣ ಪ್ರಕೃತಿಯ ಸಂಕೇತ. ಇಲ್ಲಿ ನದಿಗಳನ್ನು ನಾವು ಪೂಜಿಸುತ್ತೇವೆ. ಗಿಡ, ಮರ, ನದಿ, ಬಾವಿ, ಸರೋವರಗಳನ್ನು ಪೂಜಿಸುವುದು ಭಾರತೀಯರ ಪರಂಪರೆ, ಇದೆಲ್ಲವೂ ಪ್ರಕೃತಿ ಕೇಂದ್ರಿತ ಆರಾಧನೆಯ ಸಂಕೇತವೆಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದರು.
ಸೇಡಂನ ಪ್ರಕೃತಿ ನಗರದಲ್ಲಿ ಭಾರತ ವಿಕಾಸ ಸಂಗಮದ ಜೊತೆಗೇ ಕವಿಕಾಸ ಅಕಾಡೆಮಿ ಹಾಗೂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಳು ಸಹೋಯಗೊಂದಿಗೆ ಬೃಹತ್ ಭಾರತ ವಿಕಾಸ ಸಂಗಮ ಕಾರ್ಯಕ್ರಮ 9 ದಿನಗಳ ಕಾಲ ನಡೆಯಲಿದ್ದು, ಮಕ್ಕಳು, ಯುವಕರು ಸೇರಿದಂತೆ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ.