
ಉಡುಪಿ (ಫೆ.25): ಉಡುಪಿಯ ಬಳಿ ಇರುವ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ಓಮನ್ ದೇಶದ ಹಾರ್ಬರ್‌ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್‌ನಲ್ಲಿದ್ದ ಮೀನುಗಾರರನ್ನು ವಶಪಡಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಗಲ್ಫ್ ರಾಷ್ಟ್ರವಾಗಿರುವ ಓಮನ್ ದೇಶದಿಂದ ಬಂದಿರುವ ಬೋಟ್‌ನಲ್ಲಿ ತಮಿಳುನಾಡು ಮೂಲದ ಮೂವರು ಮೀನುಗಾರರು ಪತ್ತೆಯಾಗಿದ್ದಾರೆ. ತಮಿಳುನಾಡಿನ ಜೇಮ್ಸ್ ಫ್ರಾಂಕ್ಲಿನ್ (50), ರಾಬಿನ್ ಸ್ಟನ್ (50) ಹಾಗೂ ಡಿರೋಸ್ ಅಲ್ಪೋನ್ಸ್ (38) ಅವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರೂ ತಮಿಳುನಾಡಿನಿಂದ ವಲಸೆ ಹೋಗಿ ಓಮನ್ ಮೂಲದ ಬೋಟ್‌ನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದರು. ಆದರೆ, ವೇತನ ಹಾಗೂ ಆಹಾರ ನೀಡದೆ ಓಮನ್ ಬೋಟ್ ಮಾಲೀಕ ಸತಾಯಿಸುತ್ತಿದ್ದನು. ಜೊತೆಗೆ, ಇವರ ಪಾಸ್ ಪೋರ್ಟ್ ಕಿತ್ತುಕೊಂಡು ಚಿತ್ರಹಿಂಸೆ ನೀಡುತ್ತಿದ್ದನು ಎಂದು ಹೇಳಿದ್ದಾರೆ.
ಇದಾದ ನಂತರ ಮೂವರೂ ಪ್ರಾಣಭಯದಿಂದ ಓಮನ್ ಹಾರ್ಬಾರ್‌ನಿಂದ ತಪ್ಪಿಸಿಕೊಂಡು ಭಾರತೀಯ ಮೀನುಗಾರಿಕಾ ವ್ಯಾಪ್ತಿಗೆ ಬಂದಿದ್ದಾರೆ. ಸಮುದ್ರ ಮಾರ್ಗದಲ್ಲಿ 4,000 ಕಿಲೋ ಮೀಟರ್ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಆಗಮಿಸಿದ್ದಾರೆ. ಆದರೆ, ಈ ವೇಳೆ ಡೀಸೆಲ್ ಖಾಲಿಯಾಗಿ, ಹಣ ಆಹಾರವಿಲ್ಲದೆ ಮೀನುಗಾರರು ಪರದಾಡುತ್ತಿದ್ದರು. ಆಗ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ವಿದೇಶಿ ಬೋಟ್ ಪತ್ತೆ ಹಚ್ಚಿದ ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾಯಿಯನ್ನು ಚೀಲದಲ್ಲಿ ತುಂಬಿಸಿ ರೈಲಿನಲ್ಲಿ ಬಿಟ್ಟು ಹೋದ ಪಾಪಿಗಳು
ಕಾರವಾರ ದಾಟಿ ಮಲ್ಪೆಯತ್ತ ಬರುತ್ತಿದ್ದ ವಿದೇಶಿ ಬೋಟ್ ಹಾಗೂ ಮೀನುಗಾರರನ್ನು ಕೋಸ್ಟ್ ಗಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಸ್ ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿ ಬಂದಿರುವ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದೀಗ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.