ಕಾಸರಕೋಡ ಟೊಂಕದ ಕಡಲತೀರದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಟ್ಟಿರುವುದು ಪತ್ತೆಯಾಗಿದೆ. ಅವುಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಹೊನ್ನಾವರ (ಜ.12) : ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಸರ್ಕಾರ ಎಚ್‌ಪಿಪಿಎಲ್ ಕಂಪನಿಗೆ ಹಸ್ತಾಂತರ ಮಾಡಿರುವ ಕಾಸರಕೋಡ ಟೊಂಕದ ಕಡಲತೀರದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಟ್ಟಿರುವುದು ಪತ್ತೆಯಾಗಿದೆ.
ಅವುಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದಲ್ಲಿನ ಕಡಲತೀರದಲ್ಲಿ ಸೊಗಸಾಗಿ ಮೂಡಿರುವ ಕಡಲಾಮೆಗಳ ಹೆಜ್ಜೆ ಗುರುತುಗಳನ್ನು ಜೈನಜಟಗೇಶ್ವರ ಸಂಘದ ರಮೇಶ್ ಎಂ. ತಾಂಡೇಲ್ ಮತ್ತು ಸದಸ್ಯರು ವಿಡಿಯೋ ಚಿತ್ರೀಕರಣ ಮಾಡಿ ಕಡಲತೀರದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಗಮನಕ್ಕೆ ತಂದಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಹೆಜ್ಜೆ ಗುರುತುಗಳನ್ನು ಆಧರಿಸಿ ನಾಲ್ಕು ಕಡೆಗಳಲ್ಲಿ ಕಡಲಾಮೆಗಳು ಮೊಟ್ಟೆಹಾಕಿರುವ ಗೂಡುಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಅದೇ ಸ್ಥಳದಲ್ಲಿ ಮರಿಗಳನ್ನು ಹಾಕುವವರೆಗೆ ಸಂರಕ್ಷಣೆ ಮಾಡುವ ರಕ್ಷಣಾತ್ಮಕ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಉಪವಲಯಾಧಿಕಾರಿ ಗೌಸ್, ಸಹಾಯಕ ಸಿಬ್ಬಂದಿ ವಿನಾಯಕ ಭಟ್ಟ, ಸೋಮಯ್ಯ, ಜೈನಜಟಗೇಶ್ವರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಬಯೋ ಅಡ್ವೈಜರಿ ಬೋರ್ಡ್ ಸದಸ್ಯ, ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪರೂಪದ hawksbill ಪ್ರಭೇದದ ಕಡಲಾಮೆ ಪತ್ತೆ