ಮಗಳ ಮನೆಗೆ ಬಂದಿದ್ದ ವೃದ್ಧೆ ಕೊರೋನಾಕ್ಕೆ ಬಲಿ | ಜಿಲ್ಲೆಯಲ್ಲಿ ವೈರಸ್‌ಗೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆ | ಒಂದೇ ದಿನ 24 ಪಾಜಿಟಿವ್ ಪತ್ತೆ
ಚಿಕ್ಕಮಗಳೂರು (ಜು. 19): ಕಳೆದೆರಡು ತಿಂಗಳ ಹಿಂದೆ ಭದ್ರಾವತಿಯಿಂದ ಕೊಪ್ಪದ ಬಾಳಗಡಿಯ ಮಗಳ ಮನೆಗೆ ಬಂದಿದ್ದ ವೃದ್ಧೆ (70) ಕೊರೋನಾ ವೈರಸ್ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ.
ಶ್ವಾಸಕೋಶದ ತೊಂದರೆ, ರಕ್ತದೊತ್ತಡ ಹಾಗೂ ಶುಗರ್ ಪ್ರಮಾಣದಲ್ಲಿ ಏರುಪೇರು ಕಂಡುಬಂದಿತ್ತು. ಇದರಿಂದಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇದರಿಂದ, ಜಿಲ್ಲೆಯಲ್ಲಿ ಕೋವಿಡ್-19 ದಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಶನಿವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಒಂದೇ ದಿನ 24 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 9, ತರೀಕೆರೆ 3, ಕಡೂರು 1, ಎನ್.ಆರ್.ಪುರ 3, ಕೊಪ್ಪ 7 ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 250 ಕೋರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 8 ಮಂದಿ ಮೃತಪಟ್ಟಿದ್ದು, 128 ಮಂದಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. 113 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿವೆ.
ಶಿವಮೊಗ್ಗದಲ್ಲಿ 49 ಮಂದಿಗೆ ಕೊರೊನಾ ಸೋಂಕು ದೃಢ; 800 ರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಕಂಟೈನ್ಮೆಂಟ್ ಝೋನ್:
ಜಿಲ್ಲಾ ಕೇಂದ್ರದಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ನಗರದ ಬಾರ್ ಲೈನ್ ರೋಡ್, ಉಪ್ಪಳ್ಳಿ, ಮಾರ್ಕೆಟ್ ರೋಡ್, ರಾಮನಹಳ್ಳಿ, ಕೆಂಪನಹಳ್ಳಿ, ಗವನಹಳ್ಳಿ, ಮೂರುಮನೆಹಳ್ಳಿ, ಹಿರೇಮಗಳೂರು, ದೋಣಿಖಣ, ವಿಜಯಪುರ, ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ, ಗೌರಿ ಕಾಲುವೆ ಹೀಗೆ ಪ್ರಮುಖ ಬಡಾವಣೆಗಳಲ್ಲಿ ಸೋಂಕಿತರು ಕಂಡುಬಂದಿದ್ದರಿಂದ ಈ ಪ್ರದೇಶದಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಅರಸಿನಗುಪ್ಪೆ, ಆಲ್ದೂರು, ದುಬೈನಗರ, ಹುಲುವಳ್ಳಿ. ಕೊಪ್ಪ ತಾಲೂಕಿನ ಜಯಪುರ, ಬಾಳಗಡಿ, ಸುಭಾಷ್ ರೋಡ್, ತರೀಕೆರೆ ತಾಲೂಕಿನ ಗುಡ್ಡೆ ಬೀರನಹಳ್ಳಿ, ತ್ಯಾಗರಾಜನಗರ, ಮುಂಡ್ರೆ ತಾಂಡ್ಯ, ಅಜ್ಜಂಪುರದ ಜಕ್ಕನಹಳ್ಳಿ, ಎನ್.ಆರ್.ಪುರ ಪಟ್ಟಣದ ಟಿ.ಬಿ. ರೋಡ್ ಪ್ರದೇಶದಲ್ಲಿನ ನಿವಾಸಿಗರಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಭೀತಿ ಜೋರಾಗಿದೆ. ಕೆಲವು ಮಂದಿ ಮನೆಯಿಂದ ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ನಗರ ಪ್ರದೇಶದಲ್ಲಿ ಜನಜಂಗುಳಿ ಯಥಾಪ್ರಕಾರ ಮುಂದುವರಿದಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.