ಕಲಬುರಗಿ: ಕೊರೋನಾ ಸೋಂಕಿತ ಮನೆಗೆ ಜನರ ದಿಗ್ಭಂಧನ, ಪಿಎಸ್‌ಐ ಸಾಂತ್ವನ

By Kannadaprabha News  |  First Published Jul 19, 2020, 12:28 PM IST

ಕಲಬುರಗಿ ಜಿಲ್ಲೆ ಫರತಾಬಾದ್‌ ಗ್ರಾಮದಲ್ಲಿ ವಿಲಕ್ಷಣ ಬೆಳವಣಿಗೆ| ಈ ಮನೆಯ ಅಜ್ಜಿಗೆ ಕೊರೋನಾ, ಕೋವಿಡ್‌ ಆಸ್ಪತ್ರೆ ಸೇರಿ 4 ದಿನವಾಯ್ತು| ಮನೆಯ ಅನ್ಯ ಸದಸ್ಯರಿಗೆ ನಲ್ಲಿ ನೀರು ಹಿಡಿಯಲು, ದಿನಸಿ ಖರೀದಿಗೂ ನಿರ್ಬಂಧ| ಸ್ಥಳೀಯರ ವರ್ತನೆಗೆ ನೋಂದ ಕುಟುಂಬ ಸದಸ್ಯರು, ಝಳಕ ಮಾಡದೆ 3 ದಿನ ವನವಾಸ| ಸುದ್ದಿ ಅರಿತು ನೆರವಿನ ಹಸ್ತ ಚಾಚಿದ ಫರತಾಬಾದ್‌ ಪಿಎಸ್‌ಐ ಯಶೋಧಾ ಕಟಕೆ|
 


ಕಲಬುರಗಿ(ಜು.19): ಕೊರೋನಾ ಸೋಂಕು ಕಂಡಿರುವ ಮನೆ ಮಂದಿಗೆ ನಲ್ಲಿ ನೀರು, ದಿನಸಿ ಖರೀದಿಗೆ ನಿರ್ಬಂಧಿಸಿರೋ ಬೆಳವಣಿಗೆ ಅರಿತ ಮಹಿಳಾ ಪಿಎಸ್‌ಐ ಯಶೋಧಾ ಕಟಕೆ ತಕ್ಷಣ ಆ ಮನೆಗೆ ಧಾವಿಸಿ ನೆರವಿನ ಹಸ್ತ ಚಾಚಿರುವ ಬೆಳವಣಿಗೆ ಜಿಲ್ಲೆಯ ಫರತಾಬಾದ್‌ ಪಟ್ಟಣದಲ್ಲಿ ನಡೆದಿದೆ.

ನಾಲ್ಕು ದಿನಗಳ ಹಿಂದೆಯೇ ಈ ಊರಿನ ಅಜ್ಜಿಗೆ ಕೊರೋನಾ ಬಂದು ಆಕೆಯನ್ನ ಆರೋಗ್ಯ ಸಿಬ್ಬಂದಿ ಕಲಬುರಗಿಯಲ್ಲಿರುವ ನಿಗದಿತ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಜ್ಜಿ ವಾಸವಿದ್ದ ಮನೆ ಮಂದಿಗೆ ಯಾರಿಗೂ ರೋಗ ಲಕ್ಷಣಗಳಿಲ್ಲ, ಅವರೆಲ್ಲರೂ ಆರೋಗ್ಯವಾಗಿ ಮನೆಯಲ್ಲೇ ಇದ್ದರೂ ಅವರಿಗೆ ನಲ್ಲಿ ನೀರು ಹಿಡಿಯಲು ಬಾರದಂತೆ, ದಿನಸಿಗೆಂದು ಮಳಿಗೆಗಳತ್ತ ನುಸುಳದಂತೆ ನೆರೆಹೊರೆ ಮಂದಿ ನಿರ್ಬಂಧ ಹೇರಿದ್ದರು.

Latest Videos

undefined

ಕೊರೋನಾ ವಿರುದ್ಧ ಹೋರಾಟ: ಕಲಬುರಗಿಗೆ ಕೆಪಿಸಿಸಿಯಿಂದ 550 ಬೆಡ್‌ ರವಾನೆ

ನೆರೆಹೊರೆ ಮಂದಿ ಹೆಣೆದ ನಿರ್ಬಂಧದ ಬೇಲಿಗೆ ಸೋಂಕಿತೆ ಅಜ್ಜಿ ವಾಸವಾಗಿದ್ದ ಮನೆಯ ಅನ್ಯ ಸದಸ್ಯರು, ಅದರಲ್ಲೂ ಮಕ್ಕಳು ತೀವ್ರ ತೊಂದರೆಗೊಳಗಾಗಿದ್ದರು. ಇದರಿಂದ ನೊಂದ ಕುಟುಂಬ, ಝಳಕ ಮಾಡದೆ, ಚಹಾ ಕುಡಿಯದೆ 3 ದಿನ ಉಪವಾಸ- ವನವಾಸ ಬಿದ್ದಿತ್ತು. ಈ ಮನೆæಯವರು 2 ದಿನದಿಂದ ಝಳಕವನ್ನೇ ಮಾಡಿಲ್ಲ, ಸರಿಯಾಗಿ ಅನ್ನ, ಬೇಳೆ ಸಹ ಕುದಿಸಿ ಊಟ ಮಾಡಿರಲಿಲ್ಲ. ಮಕ್ಕಳು ಅಳುತ್ತಿವೆ ಎಂದು ಬಿಸ್ಕತ್ತು-ಚಾಕಲೇಟ್‌, ಸಕ್ಕರೆ, ಬೆಲ್ಲ ಖರೀದಿಗೆಂದು ಕಿರಾಣಿ ಅಂಗಡಿಯತ್ತಲೂ ಸುಳಿದಿರಲಿಲ್ಲ.

ಪಿಎಸ್‌ಐ ಯಶೋಧಾ ನೆರವು:

ಮನೆಯಲ್ಲಿನ ಸೋಂಕಿತೆ ಅಜ್ಜಿ ಆಸ್ಪತ್ರೆ ಸೇರಿ ನಾಲ್ಕು ದಿನ ಕಳೆದರೂ ‘ಸೋಂಕಿನ ಮನೆ’ ಎಂದು ಊರವರು ವಿಚಿತ್ರವಾಗಿ ನೋಡುತ್ತ ವಿಧಿಸಿರುವ ನಿರ್ಬಂಧದ ಮಾಹಿತಿ ಅರಿತ ಫರತಾಬಾದ್‌ ಠಾಣೆ ಪಿಎಸ್‌ಐ ಯಶೋಧಾ ಕಟಕೆ ಸದರಿ ಮನೆಗೆ ಹೋಗಿ ಅಲ್ಲಿರುವವರನ್ನೆಲ್ಲ ಆತ್ಮೀಯತೆಯಿಂದ ಮಾತನಾಡಿಸಿ, ನೆರೆಹೊರೆಯವರು ನಲ್ಲಿ ನೀರಿಗೆ ನಿರ್ಬಂಧಿಸಿದರೇನಂತೆ, ಠಾಣೆಗೆ ಬನ್ನಿ, ಅಲ್ಲಿರುವ ಮೂಲದಿಂದ ನೀರು ತುಂಬಿಕೊಂಡು ಹೋಗಿ ಎಂದು ತಕ್ಷಣವೇ ಠಾಣೆಯ ಇತರೆ ಸಿಬ್ಬಂದಿ ನೆರವಿನಿಂದ ಆ ಮನೆಯವರಿಗೆ ಕರೆದು ತಕ್ಷಣಕ್ಕೆ ಹತ್ತು ಕೊಡ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಇತ್ತ ಪಾಸಿಟಿವ್‌ ಮನೆಮಂದಿ ಕೊಡದಲ್ಲಿ ನೀರು ತುಂಬಿಕೊಂಡು ಮನೆಗೆ ಹೋಗುವುದರೊಳಗೇ ತಾವೇ ಸಕ್ಕರೆ, ಚಹಾ ಪುಡಿ, ಬಿಸ್ಕತ್ತು, ಚಾಕಲೇಟ್‌ ಖರೀದಿಸಿ ಆ ಮನೆಯವರಿಗೆ ನೀಡುವ ಮೂಲಕ ಕೊರೋನಾಕ್ಕೆ ಹೆದರದೆ ಮಾಸ್ಕ್‌ ಧರಿಸಿರಿ, ಬಿಸಿ ನೀರು, ಕಷಾಯ ಕುಡಿದು ಆರೋಗ್ಯವಾಗಿರಿ, ವೈಯಕ್ತಿಕ ಆರೋಗ್ಯ ಮುಖ್ಯ, ಝಳಕ ಮಾಡದೆ ಇರಬೇಡಿರೆಂದು ಕಿವಿಮಾತು ಸಹ ಹೇಳಿದ್ದಾರೆ.

ಅಜ್ಜಿ ಸೋಂಕು ಕಂಡಿದ್ದರಿಂದ ಆಸ್ಪತ್ರೆ ಸೇರಿದ್ದಾರೆ. ಈ ಮನೆಯ ಅನ್ಯ ಸದಸ್ಯರಿಗೆ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ. ಆದಾಗ್ಯೂ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿರುವೆ. ಅವರ ಗಮನಕ್ಕೆ ಈ ಸಂಗತಿ ತರಲಾಗಿದ್ದು ಅವರ ಗಂಟಲು ದ್ರವ ಪರೀಕ್ಷೆಗೂ ಏರ್ಪಾಡು ಮಾಡಿರುವೆ. ಸೋಂಕು ಮನೆಯಿಂದ ಮನೆಗೆ ಹರಡೋದಿಲ್ಲ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿದರೆ ಸಾಕು. ಸೋಂಕು ಸೋಕದಂತೆ ಇರಬಹುದು. ಸೋಂಕಿನ ಮನೆಯವರೆಂದು ನೀರು ಸಿಗದಂತೆ, ದಿನಸಿ ದೊರಕದಂತೆ ಮಾಡೋದು ಸರಿಯಾದ ಧೋರಣೆಯಲ್ಲ. ಕೊರೋನಾ ಹೆಮ್ಮಾರಿ ಬಗೆಗಿನ ಮಾಹಿತಿ ಕೊರತೆ ಸಮಾಜದಲ್ಲಿ ಹೊಸ ಅವಾಂತರ ಸೃಷ್ಟಿಸುತ್ತಿದೆ ಎಂದು ಕಲಬುರಗಿ ಜಿಲ್ಲೆಯ ಫರತಾಬಾದ್‌ ಠಾಣೆಯ ಪಿಎಸ್‌ಐ ಯಶೋಧಾ ಕಟಕೆ ಅವರು ಹೇಳಿದ್ದಾರೆ. 
 

click me!