ಹೆಣ್ಣು ಮಕ್ಕಳು ಋತುಮತಿ ಆದ ವೇಳೆ ಹಾಗೂ ಬಾಣಂತಿ, ಹುಟ್ಟಿದ ಮಕ್ಕಳನ್ನು ಚಳಿ ಮಳೆ, ಬಿಸಿಲು ಎನ್ನದೇ ಗುಡಿಸಲುಗಳಲ್ಲಿ ಮಲಗಿಸುವುದು, ಪೌಷ್ಠಿಕಾಂಶಯುಕ್ತ ಆಹಾರ ನೀಡದೇ ಆಹಾರದಲ್ಲಿ ಮಿತಿ ಮಾಡುವ ಮೌಢ್ಯ ಪದ್ಧತಿಗಳಿಗೆ ತಿಲಾಂಜಲಿ ಇಡಬೇಕೆಂದು ಸಿಡಿಪಿಒ ಅಣ್ಣಯ್ಯ ಕರೆ ನೀಡಿದರು.
ತುರುವೇಕೆರೆ : ಹೆಣ್ಣು ಮಕ್ಕಳು ಋತುಮತಿ ಆದ ವೇಳೆ ಹಾಗೂ ಬಾಣಂತಿ, ಹುಟ್ಟಿದ ಮಕ್ಕಳನ್ನು ಚಳಿ ಮಳೆ, ಬಿಸಿಲು ಎನ್ನದೇ ಗುಡಿಸಲುಗಳಲ್ಲಿ ಮಲಗಿಸುವುದು, ಪೌಷ್ಠಿಕಾಂಶಯುಕ್ತ ಆಹಾರ ನೀಡದೇ ಆಹಾರದಲ್ಲಿ ಮಿತಿ ಮಾಡುವ ಮೌಢ್ಯ ಪದ್ಧತಿಗಳಿಗೆ ತಿಲಾಂಜಲಿ ಇಡಬೇಕೆಂದು ಸಿಡಿಪಿಒ ಅಣ್ಣಯ್ಯ ಕರೆ ನೀಡಿದರು.
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ತಾಲೂಕಿನ ಕೆ.ಬೇವಿನಹಳ್ಳಿಯಲ್ಲಿ ಕಣತೂರು ವೃತ್ತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಗರ್ಭಿಣಿಯರಿಗೆ ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡಿದರೆ ಮಕ್ಕಳೂ ಸಹ ಸಮೃದ್ಧವಾಗಿ ಬೆಳೆಯುತ್ತವೆ. ಮಗು ಹುಟ್ಟಿದ ಕೂಡಲೇ ತಾಯಿಯ ಎದೆ ಹಾಲನ್ನು ನೀಡಬೇಕು. ಆರು ತಿಂಗಳವರೆಗೂ ತಪ್ಪದೇ ಮಕ್ಕಳಿಗೆ ಎದೆ ಹಾಲು ನೀಡಿದರೆ ಮಕ್ಕಳು ಜೀವನ ಪರ್ಯಂತ ಬಹಳ ಆರೋಗ್ಯವಾಗಿ ಇರುತ್ತವೆ. ತಾಯಿಯ ಎದೆ ಹಾಲಿಗಿಂತ ಮತ್ತೊಂದು ಶ್ರೇಷ್ಠ ಆಹಾರವಿಲ್ಲ. ಅದು ಅಮೃತಕ್ಕೆ ಸಮಾನ ಎಂದು ಸಿಡಿಪಿಒ ಅಣ್ಣಯ್ಯ ಹೇಳಿದರು.
ಕೆಲವು ಮಹಿಳೆಯರು ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಮಕ್ಕಳಿಗೆ ಕೆಲವೇ ತಿಂಗಳ ಕಾಲ ಎದೆ ಹಾಲು ಕುಡಿಸಿ ತದನಂತರ ತಪ್ಪಿಸುತ್ತಾರೆ. ಮಗು ಎಷ್ಟು ದಿನಗಳವರೆಗೆ ತನ್ನ ತಾಯಿಯ ಎದೆ ಹಾಲನ್ನು ಕುಡಿಯುತ್ತದೋ ಅದುವರೆಗೂ ಸಹ ತಾಯಿ ಹಾಲು ಕುಡಿಸಬೇಕು. ಇದರಿಂದ ತಾಯಿಯ ಆರೋಗ್ಯವೂ ಸಹ ಸುಧಾರಿಸುತ್ತದೆ. ಯಾವುದೇ ಅಡ್ಡ ಪರಿಣಾಮಗಳು ಬೀರದು. ಸೌಂದರ್ಯ ಕೆಡುತ್ತದೆ ಎಂಬುದು ಶುದ್ಧ ಸುಳ್ಳು ಎಂದು ಅಣ್ಣಯ್ಯ ಪ್ರತಿಪಾದಿಸಿದರು.
ಹಿರಿಯ ಮೇಲ್ವಿಚಾರಕರಾದ ಭಾಗ್ಯಜ್ಯೋತಿಯವರು ಮಾತನಾಡಿ, ಬಾಲ್ಯ ವಿವಾಹ ಕಾನೂನು ಬಾಹಿರ, ಹೆಣ್ಣಿಗೆ ೧೮, ಗಂಡಿಗೆ ೨೧ ವರ್ಷ ತುಂಬುವವರೆಗೂ ಮದುವೆ ಮಾಡುವುದು ನಿಷಿದ್ಧ. ಈ ಕಾನೂನನ್ನು ಮೀರಿ ಮದುವೆ ಮಾಡಿದಲ್ಲಿ ಹುಡುಗ, ಹುಡುಗಿಯ ಪೋಷಕರು, ಮದುವೆ ಮಾಡಿಸಲು ಬಂದಿದ್ದ ಪುರೋಹಿತರು, ಮದುವೆಗೆ ಆಗಮಿಸಿದ್ದ ಬಂಧು ಬಳಗ, ಅಂತಿಮವಾಗಿ ಮಂಗಳವಾದ್ಯದವರನ್ನೂ ಸಹ ಶಿಕ್ಷೆಗೆ ಗುರಿಪಡಿಸಲಾಗುವುದು. ಹಾಗಾಗಿ, ಯಾರೂ ಸಹ ಬಾಲ್ಯವಿವಾಹ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಆಕಸ್ಮಿಕವಾಗಿ ಯಾರಾದರೂ ಬಾಲ್ಯ ವಿವಾಹವನ್ನು ಮಾಡುತ್ತಿರುವ ಪ್ರಕರಣ ಕಂಡು ಬಂದಲ್ಲಿ ಸಾರ್ವಜನಿಕರು ತಮ್ಮ ಇಲಾಖೆಗೆ ಮಾಹಿತಿ ನೀಡಿದಲ್ಲಿ ಬಾಲ್ಯ ವಿವಾಹ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮಾಹಿತಿ ನೀಡಿದವರ ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಭಾಗ್ಯಜ್ಯೋತಿ ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಜಿತ್, ಡಾ.ಬನಶಂಕರಿ, ಪ್ರತಿಭಾ, ಹರಿಣಿ, ಆರೋಗ್ಯ ಇಲಾಖಾ ಮೇಲ್ವಿಚಾರಕರಾದ ರಾಮಲಿಂಗಯ್ಯ, ಅಂಗನವಾಡಿಯ ಹಿರಿಯ ಮೇಲ್ವಿಚಾರಕರಾದ ಹೇಮಾವತಿ, ಶಿಲ್ಪಾ, ಗುಡಿಗೌಡರಾದ ಮರಿಗೌಡ, ಗ್ರಾಮದ ಮುಖಂಡರಾದ ರಾಮೇಗೌಡ, ವೇಣುಗೋಪಾಲ್, ಅಂಗನವಾಡಿ ಕಾರ್ಯಕರ್ತರಾದ ವಾಣಿ, ಆಶಾರಾಣಿ, ಇಂದ್ರಾಣಿ, ವರಲಕ್ಷ್ಮಿ, ಗೌರಮ್ಮ, ಪಿಡಿಓ ಭೈರಪ್ಪ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.