ಕಳೆದ ಕೆಲವು ವರ್ಷಗಳಿಂದ ಸರಿಯಾದ ಆರೈಕೆ ಕಾಣದೇ ಕತ್ತಲೆ ಕೋಣೆಯಲ್ಲಿ ಸರಿಯಾಗಿ ನೀರು, ಆಹಾರವಿಲ್ಲದೇ ನರಳಾಡುತ್ತಿದ್ದ ವೃದ್ಧೆ ಮಹಿಳೆ ಓರ್ವಳನ್ನು ರಕ್ಷಣೆ ಮಾಡುವ ಮೂಲಕ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ಉತ್ತರಕನ್ನಡ ಕಾರವಾರ ನಗರದಲ್ಲಿ ನಡೆದಿದೆ.
ಕಾರವಾರ (ನ.18): ಕಳೆದ ಕೆಲವು ವರ್ಷಗಳಿಂದ ಸರಿಯಾದ ಆರೈಕೆ ಕಾಣದೇ ಕತ್ತಲೆ ಕೋಣೆಯಲ್ಲಿ ಸರಿಯಾಗಿ ನೀರು, ಆಹಾರವಿಲ್ಲದೇ ನರಳಾಡುತ್ತಿದ್ದ ವೃದ್ಧೆ ಮಹಿಳೆ ಓರ್ವಳನ್ನು ರಕ್ಷಣೆ ಮಾಡುವ ಮೂಲಕ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ಉತ್ತರಕನ್ನಡ ಕಾರವಾರ ನಗರದಲ್ಲಿ ನಡೆದಿದೆ. ಕಾರವಾರ ನಗರದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾಗಿರುವ ರೇಣುಕಾ ರಾಯ್ಕರ್ ಅವರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಾರವಾರ ನಗರದ ಕೋಡಿಭಾಗದ ಮನೆಯೊಂದರಲ್ಲಿ ಕಮಲಾ ಎಂಬ ವೃದ್ಧ ಮಹಿಳೆ ಓರ್ವಳು ವಾಸವಾಗಿದ್ದು, ಅನಾರೋಗ್ಯದ ಕಾರಣದಿಂದ ಆಕೆ ವಾಸವಿದ್ದ ಸ್ಥಳದಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಳು. ಆದರೆ, ಮನೆ ಮಕ್ಕಳು, ಸೊಸೆಯಂದಿರುವ ಯಾರೂ ಕೂಡಾ ಆ ವೃದ್ಧೆಯ ಆರೈಕೆಗೆ ಮುಂದಾಗಿರಲಿಲ್ಲ. ವೃದ್ದೆ ಮಹಿಳೆ ಕಮಲಾ ನರಳಾಡುತ್ತಿದ್ದಾಳೆ ಎನ್ನುವ ಸುದ್ದಿ ತಿಳಿದ ನಾಯಾಧೀಶೆ ರೇಣುಕಾ ರಾಯ್ಕರ್ ಅವರು ತಕ್ಷಣ ಸ್ಥಳಕ್ಕೆ ತೆರಳಿ ಆ್ಯಂಬುಲೆನ್ಸ್ ಮೂಲಕ ಆ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ವೇಳೆ ವೃದ್ಧ ಮಹಿಳೆಯ ಸಂಬಂಧಿಕರನ್ನು ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮ ಬಳಿ ವೃದ್ಧೆಯ ಆರೈಕೆ ಮಾಡಲು ಸಾಧ್ಯವಾಗದಿದ್ದರೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬಹುದಿತ್ತು. ಈ ರೀತಿ ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡಿಕೊಂಡಿರುವುದು ಸರಿಯಲ್ಲ. ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚಿನ್ನದ ಮೇಲಿನ ವ್ಯಾಮೋಹಕ್ಕೆ ವೃದ್ಧೆ ಬಲಿ: ಪಕ್ಕದ ಮನೆಯ ತಾಯಿ-ಮಗನಿಂದ ಕೃತ್ಯ
ಮಾಧ್ಯಮಗಳ ಜತೆಗೆ ಮಾತನಾಡಿದ ನ್ಯಾಯಾಧೀಶರು, ಕಮಲಾ ಸ್ಥಿತಿಯ ಬಗ್ಗೆ ತಮಗೆ ಖಚಿತ ಮಾಹಿತಿ ಬಂದಿತ್ತು. ಹೀಗಾಗಿ ಅವರ ಮನೆಗೆ ಭೇಟಿ ನೀಡಿದೆ. ಬಾಗಿಲು ಇಲ್ಲದ ಗುಡಿಸಲಿನಲ್ಲಿ ವೃದ್ಧೆ ಇದ್ದಳು. ಒಬ್ಬ ಮಗನಿದ್ದಾನಂತೆ. ಆದರೆ ನಾವು ಭೇಟಿ ನೀಡಿದ ವೇಳೆ ಅಲ್ಲಿ ಆತ ಇರಲಿಲ್ಲ. ಸ್ಥಳೀಯರು ಕೂಡ ವೃದ್ಧೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ತಯಾರಿರಲಿಲ್ಲ. ಬಳಿಕ ಅವರ ಸಹೋದರನೊಬ್ಬನನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿದಾಗ ನಮಗೆ ಏರುಧ್ವನಿಯಲ್ಲಿ ಮಾತನಾಡಿದರು ಎಂದರು.
Mysuru : ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ ವೃದ್ಧೆ
ವೃದ್ಧೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರ ಸಂಬಂಧಿಗಳು ವೃದ್ಧೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾಳೆ ಎನ್ನುತ್ತಿದ್ದರು. ಆದರೆ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಆಕೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದವಳಂತೆ ಕಂಡು ಬಂದಿಲ್ಲ. ನಗರಸಭೆ ಮೂಲಕ ವೃದ್ಧೆಯ ಮನೆ ದುರಸ್ತಿ ಮಾಡಿಸಿ ಆಕೆಗೆ ವಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಜತೆಗೆ ವೃದ್ಧೆಗೆ ಅವಶ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ನ್ಯಾಯಾಧೀಶೆ ರೇಣುಕಾ ರಾಯ್ಕರ ಅವರ ಕೆಲಸಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.