ಧಾರವಾಡ (ಅ.15) : ಸತತ ಮಳೆಯಿಂದಾಗಿ ತಾಲೂಕಿನಾದ್ಯಂತ ಸೋಯಾಬಿನ್, ಹೆಸರು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಅಧಿಕಾರಿಗಳು ಕೂಡಲೇ ಬೆಳೆಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಶಾಸಕ ಅಮೃತ ದೇಸಾಯಿ ತಿಳಿಸಿದರು.
ಶಾಸಕ ಅಮೃತ ದೇಸಾಯಿಗೆ ಇನ್ನೂ ವಯಸ್ಸಿದೆ; ನನಗೆ ಸಪೋರ್ಟ್ ಮಾಡಲಿ - ತವನಪ್ಪ ಅಷ್ಟಗಿ
undefined
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಮಳೆಯಿಂದ ಧಾರವಾಡ ತಾಲೂಕಿನಲ್ಲಿ ಉಂಟಾದ ಬೆಳೆಹಾನಿ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು. ಮಳೆಯಿಂದಾಗಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ತಾಲೂಕಿನ ರೈತರ ಹೊಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಹ ಬಹಳಷ್ಟುಹಾಳಾಗಿವೆ. ಮಳೆಯಿಂದ ಹಾನಿಯಾದ ಮನೆಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಬೆಳೆ ಮತ್ತು ಮನೆ ಹಾನಿಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಲಾಗಿದೆ. ಪರಿಹಾರ ಹಣ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗುವಂತೆ ಕ್ರಮವಹಿಸಲಾಗುತ್ತಿದೆ. ಮನೆ ಮತ್ತು ಬೆಳೆ ಹಾನಿಯ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಕ್ರಮಕೈಗೊಳ್ಳುವುದಾಗಿ ಎಂದು ಎಚ್ಚರಿಸಿದರು.
ಮಳೆಯಿಂದಾಗಿರುವ ಹಾನಿಗಳ ಕುರಿತು ಬೆಳೆ, ಮನೆ ಹಾಗೂ ರಸ್ತೆ ಸಮೀಕ್ಷೆ ಕುರಿತು ಅಧಿಕಾರಿಗಳ ತಂಡ ರಚಿಸಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಕ್ರಮ ವಹಿಸಲಾಗಿದೆ. ತಹಸೀಲ್ದಾರ್‌ರು ಮನೆ ಅಥವಾ ಬೆಳೆ ಹಾನಿ ಕುರಿತು ದೂರು ಬಂದಲ್ಲಿ ತಕ್ಷಣ ಖುದ್ದು ಭೇಟಿ ನೀಡಿ ಪರಿಹರಿಸಲು ಸೂಚಿಸಲಾಗಿದೆ. ಪರಿಹಾರ ಜಮೆ ಮಾಡುವಲ್ಲಿ ಅತ್ಯಂತ ಕರಾರುವಕ್ಕಾಗಿ ಕೆಲಸ ಮಾಡುವಂತೆ ಎಲ್ಲ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ಇಷ್ಟಾಗಿಯೂ ಯಾವುದೇ ಲೋಪ ಕಂಡು ಬಂದಲ್ಲಿ ಅಥವಾ ಸಾರ್ವಜನಿಕ ದೂರುಗಳು ತನಿಖೆಯಲ್ಲಿ ಸತ್ಯಾಸತ್ಯತೆ ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು.
ಧಾರವಾಡದಲ್ಲಿ ಹೆಸರು ಹಾಗೂ ಉದ್ದಿನ ಕಾಳು ಖರೀದಿ ಕೇಂದ್ರ ಆರಂಭ
ಚರ್ಮಗಂಟಿಗೆ ಚಿಕಿತ್ಸೆ:
ತಾಲೂಕಿನ ವಿವಿಧೆಡೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ವರದಿಯಾಗಿದೆ. ಮಾರಡಗಿ, ಹೆಬ್ಬಳ್ಳಿ, ಚಂದನಮಟ್ಟಿಗ್ರಾಮದಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ತುರ್ತು ಕ್ರಮವಹಿಸಿ ಅವುಗಳನ್ನು ರಕ್ಷಿಸಬೇಕಿದೆ. ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು ಎಂದು ಶಾಸಕ ಅಮೃತ ದೇಸಾಯಿ ಸೂಚಿಸಿದರು. ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಎಸ್.ಎನ್. ಗೌಡರ್, ಪಿಡಬ್ಲ್ಯೂಡಿ ಎಂಜಿನಿಯರ್ ಡಾ. ಮುರಳೀಧರರಾವ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಉಮೇಶ ಕೊಂಡಿ, ತಹಸೀಲ್ದಾರ್ ಸಂತೋಷ ಹಿರೇಮಠ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.