ಅಧಿಕಾರಿಗಳಿಗೆ ತೆಂಗಿನಕಾಯಿ ಪ್ರಮಾಣ ಮಾಡಿಸಿದ ಗ್ರಾಮಸ್ಥರು..!

By Kannadaprabha NewsFirst Published Sep 24, 2021, 10:35 AM IST
Highlights

*   ಹೊಳೆಯಲ್ಲಿ ಮೀನುಗಳು ಸತ್ತ ಪ್ರಕರಣ
*   ಪ್ರಾಮಾಣಿಕ ವರದಿ ನೀಡುವುದಾಗಿ ಆಣೆ ಹಾಕಿಸಿದರು ಗ್ರಾಮಸ್ಥರು
*   ಮುಜುಗರಕ್ಕೊಳಗಾದರೂ ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಿದ ಅಧಿಕಾರಿಗಳು
 

ಉಡುಪಿ(ಸೆ.24): ಇಲ್ಲಿನ ಉದ್ಯಾವರ ಗ್ರಾಮದ ಪಿತ್ರೋಡಿ ಹೊಳೆಯಲ್ಲಿ ಮೀನುಗಳು ಸತ್ತು ತೇಲುತಿದ್ದು, ಅವುಗಳ ಪರಿಶೀಲನೆನಗೆ ಬಂದಿದ್ದ ಪರಿಸರ ಇಲಾಖೆಯ ಅಧಿಕಾರಿಗಳು, ಘಟನೆಯ ಬಗ್ಗೆ ಪ್ರಾಮಾಣಿಕ ವರದಿ ನೀಡುವುದಾಗಿ ಗ್ರಾಮಸ್ಥರು ತೆಂಗಿನ ಕಾಯಿ(Coconut) ಮುಟ್ಟಿಸಿ ಪ್ರಮಾಣ ಮಾಡಿದ ಘಟನೆ ಗುರುವಾರ ನಡೆದಿದೆ.

ಪಿತ್ರೋಡಿ ಹೊಳೆಯಲ್ಲಿ ರಾಶಿರಾಶಿ ಪ್ರಮಾಣದಲ್ಲಿ ಮೀನುಗಳು ಸತ್ತು ಬಿದ್ದಿವೆ. ಇದಕ್ಕೆ ಸ್ಥಳೀಯ ಫಿಶ್‌ ಮೀಲ್‌ ಫ್ಯಾಕ್ಟರಿಯಿಂದ ಹೊರಗೆ ಬರುವ ತ್ಯಾಜ್ಯವೇ ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈ ಫ್ಯಾಕ್ಟರಿ ಮತ್ತು ಸ್ಥಳೀಯರ ನಡುವೆ ಕಳೆದ ಅನೇಕ ವರ್ಷಗಳಿಂದ ವಾದ ವಿವಾದ ನಡೆಯುತ್ತಿವೆ.

ಪ್ರತಿ ಬಾರಿ ಹೊಳೆಯಲ್ಲಿ ಮೀನುಗಳು ಸತ್ತಾಗ, ಹೊಳೆ ನೀರು ಕಲುಷಿತವಾಗಿ ಬಳಕೆಗೆ ಅಯೋಗ್ಯವಾದಾಗ, ಸೊಳ್ಳೆ ಇತ್ಯಾದಿಗಳು ಹುಟ್ಟಿಕೊಂಡಾಗ ಗ್ರಾಮಸ್ಥರು ಜಿಲ್ಲಾ ಪರಿಸರ ಅಧಿಕಾರಿಗಳಿಗೆ ದೂರು ನೀಡುತ್ತಾರೆ. ಅಧಿಕಾರಿಗಳು ಬಂದು ಪರಿಶೀಲಿಸಿ, ಮೀನು - ನೀರಿನ ಮಾದರಿಗಳನ್ನು ಪರೀಕ್ಷಿಸಿ ಎಲ್ಲವೂ ಸರಿ ಇದೆ ಎಂದು ಫ್ಯಾಕ್ಟರಿಯ ಪರವಾಗಿ ಸುಳ್ಳು ವರದಿ ಕೊಡುತ್ತಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತಿದ್ದಾರೆ.

ಮಲ್ಪೆ ಬೀಚಲ್ಲಿ ಮುಳುಗುತ್ತಿದ್ದ 3 ವಿದ್ಯಾರ್ಥಿಗಳ ರಕ್ಷಣೆ

ಅದಕ್ಕೆ ಗುರುವಾರ ಪರಿಸರ ಅಧಿಕಾರಿಗಳಾದ ವಿಜಯ ಹೆಗ್ಡೆ ಮತ್ತು ಪ್ರಮೀಳಾ, ಮೀನುಗಾರಿಕಾ ಇಲಾಖೆಯ ಅಧಿಕಾರಿ ದಿವಾಕರ ಖಾರ್ವಿ ಸ್ಥಳಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ನಿಷ್ಪಕ್ಷವಾಗಿ ವರದಿ ನೀಡಿ, ಮೀನುಗಳ ಮಾರಣಹೋಮಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡುವಂತೆ ಆಗ್ರಹಿಸಿದರು. ಅಧಿಕಾರಿಗಳು ಮುಜುಗರಕ್ಕೊಳಗಾದರೂ ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಿದ್ದಾರೆ.

ನಂತರ ಸತ್ತ ಮೀನಿನ(Fish) ಮಾದರಿಗಳನ್ನು ಪರೀಕ್ಷೆಗೆ ಪಡೆದುಕೊಂಡ ಪರಿಸರ ಅಧಿಕಾರಿ ವಿಜಯ ಹೆಗ್ಡೆ ಅವರು, ಹೊಳೆಯ ನೀರು ಕಲುಷಿತವಾಗಿ ಅದರಲ್ಲಿ ಆಮ್ಲಜನಕದ ಕೊರತೆಯಾಗಿ ಮೀನುಗಳು ಸತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಹೊಳೆಯಲ್ಲಿ ಅಳವಡಿಸಲಾಗಿರುವ ಫಿಶ್‌ ಮೀಲ್‌ ಫ್ಯಾಕ್ಟರಿಯ ಪೈಪ್‌ ಲೈನ್‌ ತೆರವುಗೊಳಿಸುವಂತೆ ಗ್ರಾ.ಪಂ. ಮೂಲಕ ನೊಟೀಸು ನೀಡಲಾಗಿದೆ ಎಂದಿದ್ದಾರೆ. ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್‌, ಸದಸ್ಯರಾದ ಗಿರೀಶ್‌ ಸುವರ್ಣ, ಸಚಿನ್‌ ಸುವರ್ಣ ಪಿತ್ರೋಡಿ, ಲಾರೆನ್ಸ್‌ ಡೇಸಾ, ದಿವಾಕರ ಬೊಳ್ಜೆ ಮತ್ತಿತರರಿದ್ದರು.
 

click me!