ಕೊರೋನಾದಿಂದ ಸಾವನ್ನಪ್ಪಿದ ಮಹಿಳೆಯರಿಗೆ ಮಯ್ಯತ್‌ ಸ್ನಾನ ಮಾಡಿಸುವ ವುಮನ್‌ ಟೀಂ

Kannadaprabha News   | Asianet News
Published : Apr 26, 2021, 09:56 AM ISTUpdated : Apr 26, 2021, 10:04 AM IST
ಕೊರೋನಾದಿಂದ ಸಾವನ್ನಪ್ಪಿದ ಮಹಿಳೆಯರಿಗೆ ಮಯ್ಯತ್‌ ಸ್ನಾನ ಮಾಡಿಸುವ ವುಮನ್‌ ಟೀಂ

ಸಾರಾಂಶ

ಕೋವಿಡ್‌ ಶವಗಳಿಗೆ ಮಯ್ಯತ್‌ ಸ್ನಾನ ಮಾಡಿಸುವ ಮಹಿಳಾ ತಂಡ| ಮಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಪಿಪಿಇ ಕಿಟ್‌ ಧರಿಸಿಕೊಂಡು ಮಯ್ಯತ್‌ ಸ್ನಾನ ನಡೆಸುತ್ತಿರುವ ಈ ಸಂಘಟನೆಯ ಮಹಿಳಾ ತಂಡ|   

ಆತ್ಮಭೂಷಣ್‌

ಮಂಗಳೂರು(ಏ.26): ಕೋವಿಡ್‌ ಸೋಂಕಿನಲ್ಲಿ ಮೃತಪಟ್ಟವರ ಶವಸಂಸ್ಕಾರಕ್ಕೆ ಸ್ವತಃ ಮನೆಯವರೇ ಹಿಂದೇಟು ಹಾಕುವ ಇಂದಿನ ಪರಿಸ್ಥಿತಿಯಲ್ಲಿ ಮುಸ್ಲಿಂ ಮಹಿಳಾ ತಂಡವೊಂದು ರಾಜ್ಯದಲ್ಲಿ ಸದ್ದಿಲ್ಲದೆ ಶವಸಂಸ್ಕಾರದ ಪ್ರಕ್ರಿಯೆಗಳಲ್ಲಿ ನೆರವಾಗುವ ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಈಗಾಗಲೇ ಮಂಗಳೂರಲ್ಲಿ 7ಕ್ಕೂ ಅಧಿಕ ಕೋವಿಡ್‌ ಮೃತ ಮಹಿಳೆಯರ ಶವಗಳಿಗೆ ಮಯ್ಯತ್‌ ಸ್ನಾನದ ಸಂಸ್ಕಾರ ನಡೆಸಿದೆ. ಅಂದರೆ, ಅಂತ್ಯಕ್ರಿಯೆಗೆ ಮುನ್ನ ಮುಸ್ಲಿಂ ಸಮುದಾಯದಲ್ಲಿ ಮಯ್ಯತ್‌ ನಡೆಸುತ್ತಾರೆ. ಅಂದರೆ ಸಂಪ್ರದಾಯ ಪ್ರಕಾರ ಶವಕ್ಕೆ ಸ್ನಾನ ಮಾಡಿಸಿ ಬಟ್ಟೆ(ಕಫನ್‌) ಉಡಿಸುತ್ತಾರೆ. ಬಳಿಕವೇ ಶವ ದಫನ ಮಾಡುವುದು ಕ್ರಮ. ಶವ ದಫನಕ್ಕೆ ಮೊದಲಿನ ಮಯ್ಯತ್‌ ಸ್ನಾನ ಮಾಡಿಸುವುದು ಈ ತಂಡದ ಕೆಲಸ.
ನ್ಯಾಷನಲ್‌ ವುಮನ್‌ ಫ್ರಂಟ್‌ (ಎನ್‌ಡಬ್ಲ್ಯುಎಫ್‌) ಹೆಸರಿನ ಸಂಘಟನೆ ಕೋವಿಡ್‌ನಿಂದ ಸಾವಿಗೀಡಾದ ಮುಸ್ಲಿಂ ಮಹಿಳೆಯರ ಶವಕ್ಕೆ ಸ್ನಾನ ಮಾಡಿಸುವ ವಿಧಿವಿಧಾನ ನಡೆಸಿ ಅಂತ್ಯಕ್ರಿಯೆಗೆ ಸಿದ್ಧಗೊಳಿಸುವುದು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.

ತುಮಕೂರು: ಕೋವಿಡ್‌ ಶವಗಳ ಸಂಸ್ಕಾರ ನಡೆಸುವ ಅಸಮಾನ್ಯ ಕನ್ನಡತಿ

ಮಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಈ ಸಂಘಟನೆಯ ಮಹಿಳಾ ತಂಡ ಪಿಪಿಇ ಕಿಟ್‌ ಧರಿಸಿಕೊಂಡು ಮಯ್ಯತ್‌ ಸ್ನಾನ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಫಲಾಪೇಕ್ಷೆ ಬಯಸುವುದಿಲ್ಲ. ಶವದ ಕುಟುಂಬಸ್ಥರು ಬಡವರಾಗಿದ್ದರೆ, ಪಿಪಿಇ ಕಿಟ್‌ನ್ನು ಸಂಘಟನೆಯಿಂದಲೇ ತಂಡ ಭರಿಸಿಕೊಳ್ಳುತ್ತದೆ.

ಅಳುಕಿಲ್ಲದ ಸೇವೆ: 

ಇವರ ಒಂದು ತಂಡದಲ್ಲಿ ಆರು ಮಂದಿ ಸದಸ್ಯರಿರುತ್ತಾರೆ. ಇಂತಹ 55 ತಂಡವನ್ನು ರಚಿಸಲಾಗಿದೆ. ಆರೋಗ್ಯವಂತ ಮಹಿಳೆಯರ ತಂಡವನ್ನಷ್ಟೆಇದಕ್ಕೆ ಆಯ್ಕೆ ಮಾಡಲಾಗಿದೆ. ಇವರಿಗೆ ಮಯ್ಯತ್‌ ಸ್ನಾನ ಮಾಡಿಸುವ ಬಗ್ಗೆ ಧಾರ್ಮಿಕ ಪಂಡಿತರು ಸೇರಿದಂತೆ ಕೋವಿಡ್‌ ಶವಗಳ ವಿಲೇವಾರಿ ಕುರಿತು ವೈದ್ಯರಿಂದಲೂ ತರಬೇತಿ ಲಭಿಸಿದೆ.

ಈ ತಂಡದ ಮಹಿಳೆಯರು ಯಾವುದೇ ಅಳುಕು ಇಲ್ಲದೆ ಮುಸ್ಲಿಂ ಮಹಿಳಾ ಶವಗಳ ಮಯ್ಯತ್‌ ಸ್ನಾನ ನೆರವೇರಿಸುತ್ತಾರೆ. ಕೋವಿಡ್‌ನಿಂದ ಮೃತಪಟ್ಟಶವಗಳ ಮಯ್ಯತ್‌ ಸ್ನಾನವನ್ನು ಅರ್ಧ ಗಂಟೆಯೊಳಗೆ ಬೇಗನೆ ವಿಧಿವಿಧಾನ ಮುಗಿಸಿದರೆ, ಕೋವಿಡ್‌ ಅಲ್ಲದ ಮೃತ ಶವಗಳಿಗೆ ಮಯ್ಯತ್‌ ಸ್ನಾನ ವಿಧಾನಕ್ಕೆ ಒಂದು ಗಂಟೆ ಬೇಕಾಗುತ್ತದೆ ಎನ್ನುತ್ತಾರೆ ನ್ಯಾಷನಲ್‌ ವುಮನ್‌ ಫ್ರಂಟ್‌ ರಾಜ್ಯ ಅಧ್ಯಕ್ಷೆ ಝೀನತ್‌.

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಕಳೆದ ವರ್ಷ ಕೋವಿಡ್‌ ಸಂದರ್ಭ 80ಕ್ಕೂ ಅಧಿಕ ಮುಸ್ಲಿಂ ಮಹಿಳೆಯರ ಶವಗಳಿಗೆ ಮಯ್ಯತ್‌ ಸ್ನಾನ ಮಾಡಿಸಿದ್ದು, ಈ ಬಾರಿ ರಾಜ್ಯದ ಅಲ್ಲಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಮಯ್ಯತ್‌ ಸ್ನಾನ ಮುಗಿಸಿದ ಬಳಿಕ ಶವವನ್ನು ಆಯಾ ಕುಟುಂಬಗಳಿಗೆ ಹಸ್ತಾಂತರಿಸುತ್ತಾರೆ, ಇಲ್ಲವೇ ತಮ್ಮ ಸುಪರ್ದಿಯಲ್ಲಿ ಬೇರೆಯವರಿಂದ ದಫನ ಮಾಡಿಸುತ್ತಾರೆ.

ಕೋವಿಡ್‌ ಮೃತರ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವುದು ಸಂತೋಷದ ಕೆಲಸ. ಸ್ವಂತ ಮನೆಯವರೂ ಕೋವಿಡ್‌ ಶವದ ಸಮೀಪ ಬರಲು ಹಿಂದೇಟು ಹಾಕುವ ಈ ಸಂದರ್ಭದಲ್ಲಿ ನಾವು ಸಾಮಾಜಿಕ ಕಳಕಳಿಯಿಂದ ಈ ಕಾರ್ಯ ನಡೆಸುತ್ತಿದ್ದೇವೆ. ಯಾವುದೇ ಸಾಂಕ್ರಾಮಿಕ ರೋಗದಲ್ಲಿ ಸಾವಿಗೀಡಾದ ಮಹಿಳೆಯರ ಶವ ಸಂಸ್ಕಾರಕ್ಕೆ ಸಿದ್ಧಗೊಳಿಸುವುದು ನಮಗೆ ಅಭಿಮಾನದ ಕೆಲಸ ಎಂದು ಕರ್ನಾಟಕದ ನ್ಯಾಷನಲ್‌ ವುಮನ್‌ ಫ್ರಂಟ್‌ ಅಧ್ಯಕ್ಷೆ ಝೀನತ್‌ ತಿಳಿಸಿದ್ದಾರೆ. 
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು