ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಚಂದ್ರಮ್ ಯೇಗಪ್ಪಗೋಳ ಮತ್ತು ಅವರ ಕುಟುಂಬ ಸಾವು ಕಂಡ ಘಟನೆ ನೆಲಮಂಗಲದಲ್ಲಿ '6'ರ ಭೂತದ ಭಯ ಹುಟ್ಟಿಸಿದೆ. ಅಪಘಾತಕ್ಕೀಡಾದ ಕಾರು ಮತ್ತು ಲಾರಿಯ ನಂಬರ್ ಪ್ಲೇಟ್‌ಗಳ ಕೊನೆಯ ಸಂಖ್ಯೆ 6 ಆಗಿದ್ದು, ಹೆದ್ದಾರಿಯಲ್ಲಿ ಕೊನೆಯ ಸಂಖ್ಯೆ 6 ಇರುವ ವಾಹನಗಳಿಗೆ ಅಪಾಯ ಎಂಬ ನಂಬಿಕೆಯನ್ನು ಬಲಪಡಿಸಿದೆ.
ಬೆಂಗಳೂರು (ಡಿ.24): ಒಂದು ಭೀಕರ ಅಪಘಾತ, ಅದಾಗದೇ ಹೋಗಿದ್ದಲ್ಲಿ ಇಂದು ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯ ಮಾಲೀಕ ಚಂದ್ರಮ್ ಯೇಗಪ್ಪಗೋಳ ತಮ್ಮ ಕುಟುಂಬದ ಜೊತೆ ಕ್ರಿಸ್‌ಮಸ್ ರಜೆಯನ್ನು ಹುಟ್ಟೂರು ವಿಜಯಪುರದಲ್ಲಿ ಕಳೆಯುತ್ತಿದ್ದರು. ಆದರೆ, ವಿಧಿಯಾಟ ಅದಕ್ಕೆ ಅವಕಾಶ ಮಾಡಿಕೊಡಲೇ ಇಲ್ಲ. ಕಳೆದ ಶನಿವಾರದಂದು ತುಮಕೂರು-ಬೆಂಗಳೂರು ನಡುವಿನ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗಲೇ ಚಂದ್ರಮ್ ಅವರ ಐಷಾರಾಮಿ ಹಾಗೂ ದುಬಾರಿ ವೋಲ್ವೋ ಕಾರ್‌ನ ಮೇಲೆ ಕಂಟೇನರ್ ಲಾರಿ ಬಿದ್ದು ಸ್ಥಳದಲ್ಲಿಯೇ ಸಾವು ಕಂಡಿದ್ದರು. ಅವರೊಂದಿಗೆ ಕುಟುಂಬದ ಇನ್ನೂ ಐವರು ಸಾವು ಕಂಡಿದ್ದರು. 6 ಮಂದಿಯ ಸಾವಿಗೆ ಇಡೀ ಕರ್ನಾಟಕ ಮರುಕಪಟ್ಟಿತ್ತು. ಇಷ್ಟೆಲ್ಲಾ ಇದ್ದರೂ, ನೆಲಮಂಗಲದ ಜನತೆಗೆ ಮಾತ್ರ ಈ ಸಾವು ವಿಶೇಷ ಅನಿಸದೇ ಇರೋದಕ್ಕೆ ಕಾರಣವಿತ್ತು. ಅದಕ್ಕೆ ಪ್ರಮುಖ ಕಾರಣ ಕಾರ್‌ನ ನಂಬರ್ ಪ್ಲೇಟ್ ಹಾಗೂ ಕಂಟೇನರ್‌ನ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆ.
ಅಪಘಾತಕ್ಕೆ ಈಡಾದ ಚಂದ್ರಮ್ ಯೇಗಪ್ಪಗೋಳ ಅವರ ವೋಲ್ವೋ ಕಾರ್‌ನ ನಂಬರ್ ಪ್ಲೇಟ್ KA 02 ND 1536 ಆಗಿದ್ದರೆ, ಇವರ ಕಾರ್‌ನ ಮೇಲೆ ಬಿದ್ದ ಕಂಟೇನರ್ ಲಾರಿಯ ನಂಬರ್ ಪ್ಲೇಟ್ KA 52 B 3076. ಎರಡೂ ವಾಹನಗಳ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆ 6. ಇದೇ ನಂಬರ್ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕ್ಕೆ ಕಾರಣ ಅನ್ನೋದು ಸ್ಥಳೀಯರ ಮಾತು. ಇದರ ಬಗ್ಗೆ 6 ವರ್ಷಗಳ ಹಿಂದೆ ಮಾಧ್ಯಮ ವರದಿ ಕೂಡ ಪ್ರಸಾರವಾಗಿತ್ತು. ನೆಲಮಂಗಲದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆ 6 ಆಗಿದ್ದಲ್ಲಿ ಅವರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಓಡಾಡಬೇಕು ಅನ್ನೋದು ಸ್ಥಳೀಯರ ಮಾತು. ಇದನ್ನು ನಂಬಲು ಅಸಾಧ್ಯವಾದರೂ, ಸ್ಥಳೀಯ ಜನರು ತೋರಿಸೋದು ಈಗಾಗಲೇ ಅಪಘಾತವಾಗಿರುವ ಗಾಡಿಗಳ ನಂಬರ್‌ಗಳನ್ನು.
undefined
ಯೆಸ್, ನೆಲಮಂಗಲ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನಲ್ಲಿ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿರುವ ವಾಹನಗಳನ್ನು ಇರಿಸಲಾಗಿದೆ. ಅಚ್ಚರಿ ಎನ್ನುವಂತೆ ಬಹುತೇಕ ವಾಹನಗಳ ನಂಬರ್ ಪ್ಲೇಟ್‌ನ ಕೊನೆ ಸಂಖ್ಯೆ 6 ಆಗಿದೆ. ಕೊನೇ ನಂಬರ್ 6 ಆಗಿದ್ದರೆ ಈ ಭಾಗದಲ್ಲಿ ಆಕ್ಸಿಡೆಂಟ್ ಆಗೋದು ಖಚಿತ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎನ್ನುತ್ತಾರೆ. KA 51 Q 5156, KA 42 H 6326, KA 44 J 5086, KA 04 C 9626, KA 51 D 1786, KA 18 A 9426, KA 54 1676, KA 02 D 3406 ಹಾಗೂ KA 44 K 1706 ನಂಬರ್‌ನ ಗಾಡಿಗಳು ಈಗಾಗಲೇ ನೆಲಮಂಗಲದ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿವೆ. ಈಗ ಈ ಸಾಲಿಗೆ ಮತ್ತೆರಡು ವಾಹನಗಳು ಸೇರ್ಪಡೆಯಾಗಿರುವ ಬೆನ್ನಲ್ಲಿಯೇ ಮತ್ತೆ ನಂಬರ್ ಪ್ಲೇಟ್ 6 ಭೂತ ಸ್ಥಳೀಯರನ್ನು ಆವರಿಸಿದೆ. ಅದಲ್ಲದೆ, ಈ ಬಾರಿಯ ಅಪಘಾತದಲ್ಲಿ ಸಾವು ಕಂಡವರ ಸಂಖ್ಯೆಯೂ ಕೂಡ 6 ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೊಸದಾಗಿ ಖರೀದಿ ಮಾಡಿದ ವಾಹನದ ಕೊನೆಯಲ್ಲಿ ಹಾಗೇನಾದರೂ 6 ನಂಬರ್ ಬಂದಲ್ಲಿ ಅದನ್ನು ಸಾಧ್ಯವಾದಷ್ಟು ಬೇಗ ಸೇಲ್ ಮಾಡುವ ಪ್ರವೃತ್ತಿಯೂ ಈ ಭಾಗದ ಜನರಲ್ಲಿದೆ.
Photos: ನೆಲಮಂಗಲ ಭೀಕರ ಆಕ್ಸಿಡೆಂಟ್, IAST ಕಂಪನಿ ಮಾಲೀಕ ಚಂದ್ರಮ್ ಇಡೀ ಕುಟುಂಬ ಸಾವು