NPS ಬೇಡ ಹಳೆಯ ಪಿಂಚಣಿ‌ ಕೊಡಿ, ಎನ್ ಪಿಎಸ್ ನೌಕರರ ಸಂಘಟನೆಯಿಂದ ಡಿ.19 ರಂದು ಸಾಮೂಹಿಕ ಹೋರಾಟ

By Suvarna News  |  First Published Oct 27, 2022, 7:52 PM IST

ನಿಶ್ಚಿತ ಪಿಂಚಣಿ ನಮ್ಮ ಹಕ್ಕು, ನಾವು ಅದನ್ನು ಪಡೆದೇ ತೀರುತ್ತೇವೆ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘವು ಸಂಕಲ್ಪ ಯಾತ್ರೆಯನ್ನು ಕೈಗೊಂಡಿದೆ. 


ವರದಿ: ರವಿಕುಮಾರ್ ವಿ,‌ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಬಳ್ಳಾಪುರ (ಅ.27): ನಿಶ್ಚಿತ ಪಿಂಚಣಿ ನಮ್ಮ ಹಕ್ಕು, ನಾವು ಅದನ್ನು ಪಡೆದೇ ತೀರುತ್ತೇವೆ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘವು ಸಂಕಲ್ಪ ಯಾತ್ರೆಯನ್ನು ಕೈಗೊಂಡಿದೆ. 2006 ರಿಂದ ನೇಮಕವಾದ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ವ್ಯವಸ್ಥೆಯು ನಷ್ಟದಾಯಕವಾಗಿದೆ. ನಿವೃತ್ತಿಯ ಬಳಿಕ ಅಲ್ಪ ಪ್ರಮಾಣದ ಪಿಂಚಣಿ ಪಡೆದು, ಅಭದ್ರತೆಯಲ್ಲಿ ಜೀವನ ನಡೆಸಲು ಪರದಾಡುವಂತಾಗಿದೆ. ಇದಕ್ಕೆ ಹಿಂದಿನ ಮಾದರಿಯಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆಗೆ ಒತ್ತಾಯಿಸಲಾಗುತ್ತಿದೆ. ಆದರೆ, ಇದಕ್ಕೆ ಕಿವಿಗೊಡದ ಹಿನ್ನೆಲೆಯಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ತೀವ್ರ ಸ್ವರೂಪದ ಹೋರಾಟವನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಲರಾಜ್ ತಿಳಿಸಿದ್ದಾರೆ.  ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾಮೂಹಿಕ ಹೋರಾಟವನ್ನು ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕೆ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 29 ರಂದು ಮಧ್ಯಾಹ್ನ 12.30 ಕ್ಕೆ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಯಾತ್ರೆ ನಡೆಸಲಾಗುತ್ತದೆ. ಇಲ್ಲಿನ ಡಿಡಿಪಿಐ ಕಚೇರಿ ಆವರಣದಿಂದ ಅಂಬೇಡ್ಕರ್ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಸಾಗಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಗುವುದು. ಇನ್ನು ಯಾತ್ರೆಯು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ ಎಂದರು. 

Tap to resize

Latest Videos

ನಿವೃತ್ತರಿಗೆ ಮಾರಕವಾದ ಯೋಜನೆ: ಜಿಲ್ಲೆಯಿಂದ ಸುಮಾರು 1 ಸಾವಿರಕ್ಕೂ ಅಧಿಕ ಎನ್‌ಪಿಎಸ್‌ ನೌಕರರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು, ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ್‌ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಮಂದಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಇದ್ದು, ಅವರಿಗೆ ಯಾವುದೇ ರೀತಿ ಎನ್‌ಪಿಎಸ್‌ ಯೋಜನೆ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿಲ್ಲ. ಹೊಸ ಪಿಂಚಣಿ ಯೋಜನೆಯಡಿ ನಿವೃತ್ತರಾದ ನೌಕರರಿಗೆ ತಿಂಗಳಿಗೆ ಬರೀ 2,000, 3000 ರು, ಒಳಗೆ ಪಿಂಚಣಿ ಬರುತ್ತಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿದೆಂದರು.

ತಾಲೂಕು ಕಾರ್ಯದರ್ಶಿ ಅಮರ್ ಮಾತನಾಡಿ, ಈಗಾಗಲೇ ಕೆಲ ರಾಜ್ಯಗಳಲ್ಲಿ ಎನ್‌ಪಿಎಸ್ ವ್ಯವಸ್ಥೆಯನ್ನು ರದ್ದುಪಡಿಸಿ, ನೌಕರರ ಬೇಡಿಕೆಯನ್ನು ಈಡೇರಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.  ಈ ಸಂದರ್ಭದಲ್ಲಿ ತಾಲೂಕು ಡಿ.ಎಸ್.ವಿಷ್ಣುವರ್ಧನ್, ಖಜಾಂಚಿ ಜೆ.ಎ.ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ  ಶಿವರಾಜ್, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಶಿವಣ್ಣ, ಅನಂತಸೇನಾಚಾರ್ಯ ಮತ್ತಿತರರು ಇದ್ದರು.

click me!