ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕೋದೇ ತಪ್ಪಾ?

By Suvarna News  |  First Published Jun 9, 2022, 8:58 PM IST
  • ಧಾಮನೆಯಲ್ಲಿ ಮದುವೆ ಮೆರವಣಿಗೆ ವೇಳೆ ಕನ್ನಡ ಹಾಡು ಹಚ್ಚಿದ್ದಕ್ಕೆ ಹಲ್ಲೆ ಆರೋಪ ಕೇಸ್
  • ಧಾಮನೆಯಲ್ಲಿ ಕನ್ನಡ, ಮರಾಠಿ ಎರಡೂ ನಾಮಫಲಕ ತೆಗೆಯುವಂತೆ ಗ್ರಾ.ಪಂ.ಅಧ್ಯಕ್ಷರ ನೋಟಿಸ್
  • ಗ್ರಾ‌.ಪಂ. ಅಧ್ಯಕ್ಷರ ನಡೆಗೆ ಕನ್ನಡಪರ ಸಂಘಟನೆಗಳು ಗರಂ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಳಗಾವಿ (ಜೂ.9): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ವಿವಾದ, ನಾಮಫಲಕ ಸ್ಥಾಪಿಸುವ ವಿವಾದ ಮುಂದುವರಿದಿದೆ. ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಹಾಕೋದೇ ತಪ್ಪಾ.? ಕನ್ನಡ ನಾಮಫಲಕ ಹಾಕಿದ್ರೆ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಾ? ಇಂಥದೊಂದು ಪ್ರಶ್ನೆಯನ್ನು ಬೆಳಗಾವಿಯ ಕನ್ನಡಪರ ಹೋರಾಟಗಾರು ಮಾಡುತ್ತಿದ್ದಾರೆ.

Tap to resize

Latest Videos

ಬೆಳಗಾವಿ ತಾಲೂಕಿನ ಧಾಮನೆ  ಗ್ರಾ.ಪಂ.ಅಧ್ಯಕ್ಷರು ಕನ್ನಡ ನಾಮಫಲಕ ತೆರವುಗೊಳಿಸುವಂತೆ ಅದೇ ಗ್ರಾಮದ ಕನಕದಾಸ ಯುವಕ ಮಂಡಳದ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ಧಾಮನೆ ಗ್ರಾಮದಲ್ಲಿ ಇತ್ತೀಚೆಗೆ ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಹಲ್ಲೆ ವಧು ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಗೂಂಡಾಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಘಟನೆ ನಡೆಯಲು ಧಾಮನೆ ಗ್ರಾಮದಲ್ಲಿ ಕನ್ನಡ ನಾಮಫಲಕ ಹಚ್ಚಿದ್ದು, ಅದರ ಎದುರು ಮರಾಠಿ ನಾಮಫಲಕ ಹಚ್ಚಿದ್ದು ಕಾರಣ ಆಗಿತ್ತು ಎಂಬ ಅನುಮಾನಗಳು ಸಹ ವ್ಯಕ್ತವಾಗಿತ್ತು. 

ಇದೇ ಅರ್ಥದಲ್ಲಿ  ಗ್ರಾ.ಪಂ.ಅಧ್ಯಕ್ಷರು ಧಾಮನೆ ಗ್ರಾಮದ ಕನಕದಾಸ ಯುವಕ ಮಂಡಳ ಹಾಗೂ ಬ್ರಹ್ಮಲಿಂಗ ಯುವಕ ಮಂಡಳದವರಿಗೆ ಪತ್ರ ಬರೆದಿದ್ದಾರೆ. ಧಾಮನೆ ಗ್ರಾಮದ ಕುರುಬರಹಟ್ಟಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ನಗರ ಎಂದು ಕನಕದಾಸ ಯುವಕ ಮಂಡಳದವರು ಕಳೆದ ಎರಡು ತಿಂಗಳ ಹಿಂದೆ ಸ್ಥಾಪಿಸಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಇದೇ ಬೋರ್ಡ್ ಎದುರು ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ನಗರ ಅಂತಾ ಮರಾಠಿ ಭಾಷೆಯಲ್ಲಿ ಬೋರ್ಡ್ ಹಾಕಿದ್ದರು. 

ಕಾಫಿನಾಡಲ್ಲಿ ಮುಗಿಯದ PSI ವರ್ಸಸ್ MLA ಕೋಲ್ಡ್ ವಾರ್

ಇದಾದ ಬಳಿಕ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಎಂಇಎಸ್ ಗೂಂಡಾಗಳು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ವೇಳೆ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದರು‌. ಈ ಘಟನೆ ಬಳಿಕ ಗಡಿಭಾಗದ ಗ್ರಾಮಗಳಲ್ಲಿ ಅನುಮತಿ ಇಲ್ಲದೇ ಅಳವಡಿಸಿರುವ ಬೋರ್ಡ್ ಪ್ರತಿಮೆಗಳ ತೆರವು ಮಾಡಿಸಬೇಕು ಅಂತಾ ಹಿರಿಯ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದರು‌. ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೇ ಹಾಕಿದ ಬೋರ್ಡ್‌ಗಳ ತೆರವಿಗೆ ಗ್ರಾ.ಪಂ.ಅಧ್ಯಕ್ಷರು ಕನ್ನಡ ಹಾಗೂ ಮರಾಠಿ ಎರಡು ಬೋರ್ಡ್‌ಗಳ ತೆರವಿಗೆ ನೋಟಿಸ್ ನೀಡಿದ್ದಾರೆ ಎಂಬುದು ಪೊಲೀಸ್ ಮೂಲಗಳ ಮಾಹಿತಿ.

ಗ್ರಾ.ಪಂ.ಅಧ್ಯಕ್ಷರು ನೀಡಿದ ನೋಟಿಸ್‌ನಲ್ಲಿ ಏನಿದೆ?
ಈಗ ಗ್ರಾ.ಪಂ. ಅಧ್ಯಕ್ಷೆ ಧಾಮನೆಯ ಕನಕದಾಸ ಯುವಕ ಮಂಡಳಿ ಪತ್ರ ಬರೆದು 'ವೀರ ರಾಣಿ ಕಿತ್ತೂರು ಚನ್ನಮ್ಮ ಎಂದು ನಾಮಫಲಕ ಹಾಕಿದ್ದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗುತ್ತಿದೆ. ನೋಟಿಸ್ ಮುಟ್ಟಿದ ತಕ್ಷಣ ಕನ್ನಡ ನಾಮಫಲಕ ತೆರವುಗೊಳಿಸಿ' ಎಂದು ಉಲ್ಲೇಖಿಸಲಾಗಿದೆ. ಇನ್ನು ಬ್ರಹ್ಮಲಿಂಗ ಯುವಕ ಮಂಡಳದವರಿಗೆ ನೀಡಿದ ನೋಟಿಸ್‌ನಲ್ಲೂ ಸಹ 'ಧರ್ಮವೀರ ಛತ್ರಪತಿ ಸಂಭಾಜಿ ನಗರ' ಅಂತಾ ಬರೆದಿದ್ದನ್ನು ತೆರವು ಮಾಡಿ ಅಂತಾ ಉಲ್ಲೇಖಿಸಲಾಗಿದೆ.

Ramanagara; ಅಧಿಕಾರಿಗಳಿಂದಲೇ ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಮೀನು ಗುಳುಂ!

ಕನ್ನಡ ಬೋರ್ಡ್ ತೆರವಿಗೆ ನೋಟಿಸ್ ನೀಡುತ್ತಿದ್ದಂತೆ ಕನ್ನಡಪರ ಸಂಘಟನೆಗಳ ಕೆಂಡಾಮಂಡಲ
ಇನ್ನು ಧಾಮನೆ ಗ್ರಾ.ಪಂ. ಅಧ್ಯಕ್ಷರು ಬೋರ್ಡ್ ತೆರವಿಗೆ ನೋಟಿಸ್ ನೀಡುತ್ತಿದ್ದಂತೆ ಕನ್ನಡಪರ ಸಂಘಟ‌‌ನೆಗಳ ಮುಖಂಡರು ಕೆಂಡಾಮಂಡಲಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ,  'ಕನ್ನಡ ನಾಡಿನಲ್ಲಿ ಕನ್ನಡ ನಾಮಫಲಕ ಹಾಕಿದ್ರೆ ಅಶಾಂತಿ ಗಲಾಟೆ ಸೃಷ್ಟಿಯಾಗುತ್ತಾ? ಕಾಣದ ಕೈಗಳು ಹಿಂದೆ ನಿಂತು ಜನರ ಮಧ್ಯೆ ವಿಷಬೀಜ ಬಿತ್ತುವ ಯತ್ನ ನಡೆಯುತ್ತಿದೆ. ತಕ್ಷಣ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು' ಅಂತಾ ಆಗ್ರಹಿಸಿದ್ದಾರೆ.

 ಇನ್ನು ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಯುವಘಟಕದ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ ಧಾಮನೆ ಗ್ರಾ.ಪಂ. ಅಧ್ಯಕ್ಷರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಎಂಇಎಸ್ ಗೂಂಡಾಗಳು ಗೂಂಡಾಗಿರಿ ಮಾಡಿದ್ದರು‌.10 ಆರೋಪಿಗಳ ಪೈಕಿ ಇನ್ನೂ ಇಬ್ಬರನ್ನೂ ಬಂಧಿಸಿಲ್ಲ. ಯಾವುದೇ ಕಾರಣಕ್ಕೂ ನಾವು ಕನ್ನಡ ನಾಮಫಲಕ ತೆರವು ಮಾಡಲ್ಲ. ಒಂದು ವೇಳೆ ಕನ್ನಡ ನಾಮಫಲಕ ಯಾರಾದರೂ ತೆರವು ಮಾಡಿದ್ರೆ ಕನ್ನಡಿಗರೆಲ್ಲರೂ ಸೇರಿ 'ಧಾಮನೆ ಚಲೋ' ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!