ಬಂಗಾರಪೇಟೆ: 5 ವರ್ಷದಿಂದ ಕುಂಟುತ್ತಿರುವ ಗುಂಪು ಮನೆ ನಿರ್ಮಾಣ

By Kannadaprabha NewsFirst Published Aug 28, 2022, 11:00 PM IST
Highlights

ಪರಿಶಿಷ್ಟರಿಗೆ, ಬಡವರಿಗೆ ವಸತಿ ಕಲ್ಪಿಸುವ 110 ಮನೆಗಳ ನಿರ್ಮಾಣ ಯೋಜನೆ ಅಪೂರ್ಣ

ರಮೇಶ್‌ ಕೆ.

ಬಂಗಾರಪೇಟೆ(ಆ.28):  ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ತೀರ ಹಿಂದುಳಿದಿರುವ ಹಾಗೂ ಮನೆ ಇಲ್ಲದ ಪರಿಶಿಷ್ಟಜಾತಿ ಮತ್ತು ಪಂಗಡದ ಜನರಿಗೆ ವಸತಿ ಕಲ್ಪಿಸಲು ಗುಂಪು ಮನೆಗಳ ನಿರ್ಮಾಣ ಮಾಡುವ ಸಲುವಾಗಿ ಕಳೆದ 5 ವರ್ಷಗಳ ಹಿಂದೆ ಆರಂಭಿಸಿದ ವಸತಿಗೃಹಗಳ ನಿರ್ಮಾಣ ಕಾಮಗಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಆಮೆ ನಡಿಗೆಯಲ್ಲಿ ಸಾಗಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸ್ವಂತ ಮನೆಯಿಲ್ಲದೆ ಗುಡಿಸಲುಗಳಲ್ಲಿ ವಾಸಮಾಡುತ್ತಿರುವ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆಲ್ಲಾ ಪುರಸಭೆಯಿಂದ ಉಚಿತ ನಿವೇಶನ ನೀಡಿ ಕೊಳಚೆ ನಿರ್ಮೂಲನೆ ಮಂಡಳಿವತಿಯಿಂದ ಗುಂಪು ಮನೆಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕಳೆದ 5ವರ್ಷಗಳ ಹಿಂದೆ ಭರವಸೆ ನೀಡಿದ್ದರು. ಅದರಂತೆ ಮನೆಗಳ ನಿರ್ಮಾಣಕ್ಕೂ ಸಹ ಹಸಿರು ನಿಶಾನೆ ನೀಡಿ ಐದು ವರ್ಷಗಳಾದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

MANN KI BAAT; ಕೋಲಾರದ ಬೃಹತ್ ತ್ರಿವರ್ಣ ಧ್ವಜ ಬಗ್ಗೆ ಮೋದಿ ಶ್ಲಾಘನೆ

110 ಮನೆಗಳ ನಿರ್ಮಾಣದ ಯೋಜನೆ

ಪಟ್ಟಣದ ಕೆಂಪೇಗೌಡ ವೃತ್ತದ ಬಳಿಯಿರುವ ಕಾರಹಳ್ಳಿ ರಸ್ತೆಯಲ್ಲಿ ಗುಂಪು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಗುಡಿಸಲುಗಳಲ್ಲಿ ವಾಸವಾಗಿರುವ ಪರಿಶಿಷ್ಟಜಾತಿ ಮತ್ತು ಪಂಗಡದವರು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಬಡವರಿಗೂ ಗುಂಪು ಮನೆಗಳನ್ನು ನಿರ್ಮಾಣ ಮಾಡಿ ಒಂದೇ ಕಡೆ ಅವರೆಲ್ಲರೂ ವಾಸಿಸುವಂತೆ ಮಾಡವ ಉದ್ದೇಶದಿಂದ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಯಲ್ಲಿ ಒಟ್ಟು 110 ಮನೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ಫಲಾನುಭವಿಗಳನ್ನೂ ಈಗಾಗಲೇ ಆಯ್ಕೆ ಮಾಡಲಾಗಿದೆ.

ಯೋಜನೆಗೆ ಕೊಳಚೆ ನಿರ್ಮೂಲನೆ ಮಂಡಳಿಯಿಂದ ಪ್ರತಿ ಮನೆಗೆ 4.25 ಲಕ್ಷ ರು.ಗಳನ್ನು ವೆಚ್ಚ ಮಾಡಲಿದ್ದು, ಫಲಾನುಭವಿ 60 ಸಾವಿರ ಪಾವತಿಸಬೇಕು. ಈಗಾಗಲೇ ಫಲಾನುಭವಿಗಳು 60 ಸಾವಿರ ರೂಗಳ ಪೈಕಿ ಕೇವಲ 5 ಸಾವಿರ ರು.ಗಳನ್ನು ಮಾತ್ರ ಕೊಳಚೆ ಮಂಡಳಿಗೆ ಪಾವತಿಸಿದ್ದಾರೆ. ಉಳಿದ 55 ಸಾವಿರ ಹಣವನ್ನು ಪಾವತಿಸದ ಕಾರಣ ಗುಂಪು ಮನೆಗಳ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.
ಫಲಾನುಭವಿಗಳು ಹಣ ಪಾವತಿಸಿಲ್ಲ

ಕೊಳಚೆ ನಿರ್ಮೂಲನೆ ಮಂಡಳಿ ಕಟ್ಟಡಗಳ ನಿರ್ಮಾಣವನ್ನು ಒಂದು ಹಂತಕ್ಕೆ ಪೂರ್ಣಗೊಳಿಸಿದ್ದು ಫಲಾನುಭವಿ ವಂತಿಕೆ ಹಣ ವಿಳಂಬದಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಈ ಗುಂಪು ಮನೆಗಳಿಗೆ ಹೋಗಲು ನೆಟ್ಟಿಗೆ ರಸ್ತೆಯೂ ಇಲ್ಲ, ಬೀದಿ ದೀಪಗಳೂ ಇಲ್ಲ. ಗುಂಪು ಮನೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕೊಳಚೆ ನಿರ್ಮೂಲನೆ ಮಂಡಳಿ ಸಹ ಫಲಾನುಬವಿಗಳ ನಿರಾಸಕ್ತಿ ತೋರಿರುವುದರಿಂದ ಮಂಡಳಿ ಸಹÜ ಆಸಕ್ತಿ ತೋರುತ್ತಿಲ್ಲ. ಇದರಿಂದ ಕೋಟ್ಯಂತರ ರು.ಗಳನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ನಿರ್ಮಾಣ ಹಂತದಲ್ಲಿರುವ ಗುಂಪು ಮನೆಗಳು ಈಗ ರಾತ್ರಿಯ ವೇಳೆ ಪುಂಡು ಪೋಕರಿಗಳ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಪರಿವರ್ತನೆಯಾಗಿದೆ. ನಿತ್ಯ ರಾತ್ರಿ ವೇಳೆ ಕುಡುಕರು ಪಾರ್ಟಿ ಮಾಡಿ ಅಲ್ಲೆ ಬಾಟಲಿಗಳನ್ನು ಎಸೆದು ಅಲ್ಲಿನ ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ. ಇಲಾಖೆ ಮನೆಗಳ ಸುತ್ತಲೂ ಬೇಲಿ ನಿರ್ಮಾಣ ಮಾಡದೆ ಕಡೆಗಣಿಸಿರುವುದರಿಂದ ಕಟ್ಟಡಗಳು ಪಾಳು ಬಿದ್ದಿವೆ. ಜನರು ವಾಸ ಮಾಡಲು ಯೋಗ್ಯವಲ್ಲದ ಸ್ಥಳದಲ್ಲಿ ಗುಂಪು ಮನೆಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಫಲಾನುಭವಿಗಳು ವಂತಿಕೆ ಹಣ ಪಾವತಿ ಮಾಡಲು ಹಿಂದೇಟು ಹಾಕುತಿದ್ದರೆ ಎನ್ನಲಾಗಿದೆ.

ನೌಕರರಿಗೆ ಮನೆ ಸಿಗುವುದು ಅನುಮಾನ

ಮೊದಲು ಡಿ ಗ್ರೂಪ್‌ ನೌಕರರಿಗೆ ಗುಂಪು ಮನೆಗಳನ್ನು ನಿರ್ಮಾಣ ಮಾಡಿಕೊಡುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ನಂತರ ಪಟ್ಟಣದ ದೊಡ್ಡಕೆರೆ ಕಟ್ಟೆಬಳಿಯಿರುವ ಪಂಪ್‌ ಹೌಸ್‌ ಬಳಿ 24 ನೌಕರರಿಗೆ ಪುಟ್ಟಮನೆಗಳ ನಿರ್ಮಾಣ ಮಾಡಿ ಹಂಚಲಾಯಿತು. ಕೊಳಚೆ ನಿರ್ಮೂಲನೆ ಮಂಡಳಿ ನಿರ್ಮಾಣ ಮಾಡುತ್ತಿರುವ ಗುಂಪು ಮನೆಗಳಲ್ಲಿ ನೌಕರರಿಗೆ ಸಿಗುವುದು ಅನುಮಾನ ಈಗಾಗಲೇ ಎಲ್ಲಾ ಫಲಾನುಬವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪುರಸಭೆ ಡಿ ಗ್ರೂಪ್‌ ನೌಕರರ ಸಂಘದ ಅಧ್ಯಕ್ಷ ಜಯರಾಂ ತಿಳಿಸಿದರು.

ಕೋಲಾರ: ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಆಗ್ರಹ, ಶಾಸಕಿ ರೂಪಕಲಾ ಪಾದಯಾತ್ರೆ

ಒಂದು ಮೂಲದ ಪ್ರಕಾರ ಈ ಗುಂಪು ಮನೆಗಳ ಫಲಾನುಭವಗಳ ಆಯ್ಕೆಯಲ್ಲೇ ಅಕ್ರಮ ನಡೆದಿದ್ದು ಅರ್ಹರಿಗೆ ಮನೆ ನೀಡದೆ ಉಳ್ಳವರಿಗೆ ಹಂಚಿಕೆ ಮಾಡಲಾಗಿದೆ. ಆದ್ದರಿಂದಲೇ ಯೋಜನೆ ವಿಳಂಬಕ್ಕೆ ಕಾರಣವೆಂಬ ಆರೋಪಗಳೂ ಸಾಮಾನ್ಯವಾಗಿ ಕೇಳಿ ಬರುತ್ತಿವೆ.

ಬಂಗಾರಪೇಟೆ ಪಟ್ಟಣದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಿರ್ಮಾಣ ಹಂತದಲ್ಲಿರುÊ ಗುಂಪು ಮನೆಗಳಿಗೆ ಪ್ರತಿ ಫಲಾನುಭವಿ 60 ಸಾವಿರ ಹಣ ಪಾವತಿಸಬೇಕು. ಉಳಿದ 4.25ಲಕ್ಷ ರು.ಗಳನ್ನು ಸರ್ಕಾರ ಪಾವತಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಿದೆ. ಆದರೆ ಫಲಾನುಭವಿಗಳ ವಂತಿಕೆ ವಿಳಂಬದಿಂದ ಯೋಜನೆ ಸ್ಥಗಿತವಾಗಿದೆ ಅಂತ ಕೊಳಚೆ ನಿರ್ಮೂಲ ಮಂಡಳಿ ಎಇಇ ಚರಣ್‌ ರಾಜ್‌ ತಿಳಿಸಿದ್ದಾರೆ.  
 

click me!