ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಇದ್ದೂ ಇಲ್ಲದಂತಾದ ವೆಂಟಿಲೇಟರ್‌..!

By Kannadaprabha News  |  First Published May 17, 2021, 11:39 AM IST

* ಜಿಲ್ಲಾಸ್ಪತ್ರೆಯಲ್ಲಿ ನಿರ್ವಹಣೆಗೆ ಸಿಬ್ಬಂದಿ, ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್‌ ಇಲ್ಲ
* ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ಮರಣ ಪ್ರಮಾಣ
* ಪಿಎಂ ಕೇರ್ಸ್‌ ಅಡಿಯಲ್ಲಿ ಜಿಲ್ಲಾಸ್ಪತ್ರೆಗೆ ಬಂದ 20 ವೆಂಟಿಲೇಟರ್‌


ಹಾವೇರಿ(ಮೇ.17): ಕೊರೋನಾ ಸೋಂಕಿತರಿಗೆ ವೆಂಟಿಲೇಟರ್‌ ಕೊರತೆ ಎಲ್ಲೆಡೆ ಸಾಮಾನ್ಯವಾಗಿದೆ. ಆದರೆ, ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ 23 ವೆಂಟಿಲೇಟರ್‌ಗಳು ಇದ್ದೂ ಇಲ್ಲದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸದ್ಯ 23 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 6 ವೆಂಟಿಲೇಟರ್‌ಗಳಿವೆ. ಒಟ್ಟಾರೆ ಜಿಲ್ಲೆಯಲ್ಲಿ 59 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ.

Tap to resize

Latest Videos

ಜಿಲ್ಲಾಸ್ಪತ್ರೆಯಲ್ಲಿ ಇನ್ನೂ 23 ವೆಂಟಿಲೇಟರ್‌ಗಳಿದ್ದರೂ ಅವುಗಳನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ನಿರ್ವಹಣೆಗೆ ಸಿಬ್ಬಂದಿ ಕೊರತೆಯಿದೆ. ಜತೆಗೆ ಈಗಿರುವ ವೆಂಟಿಲೇಟರ್‌ಗಳಿಗೇ ಸಾಲುವಷ್ಟು ಆಕ್ಸಿಜನ್‌ ಮಾತ್ರ ಪೂರೈಕೆಯಾಗುತ್ತಿದೆ. ಆದ್ದರಿಂದ 23 ವೆಂಟಿಲೇಟರ್‌ಗಳು ಇದ್ದೂ ಇಲ್ಲದಂತಾಗಿವೆ.

"

ಜಿಲ್ಲಾದ್ಯಂತ ಕೊರೋನಾ ಸೋಂಕಿತರಲ್ಲಿ ಅನೇಕರಿಗೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ ಎಷ್ಟೇ ವೆಂಟಿಲೇಟರ್‌ಗಳಿದ್ದರೂ ಸೋಂಕಿತರನ್ನು ಬದುಕುಳಿಸಲು ನೆರವಾಗುತ್ತದೆ. ಸರ್ಕಾರ ಸಾರ್ವಜನಿಕರ ಜೀವ ಉಳಿಸಲೆಂದು ವೆಂಟಿಲೇಟರ್‌ಗಳನ್ನು ಕೊಟ್ಟಿದೆ. ಆದರೆ, ಅವುಗಳನ್ನು ಬಳಸಲು ಸಾಧ್ಯವಾಗದೇ ಮೂಲೆ ಸೇರುವಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಈ ರೀತಿ 23 ವೆಂಟಿಲೇಟರ್‌ಗಳು ಬಳಸದೇ ಖಾಲಿ ಇವೆ. ಅವುಗಳನ್ನು ನಿರ್ವಹಿಸುವ ತಂತ್ರಜ್ಞರಿಲ್ಲದೇ ಇಂತಹ ಸಮಯದಲ್ಲಿಯೂ ಧೂಳು ತಿನ್ನುತ್ತಿವೆ.

ಕೊರೋನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ವೈಯಕ್ತಿಕ 50 ಸಾವಿರ ನೆರವು: ಬಿ.ಸಿ. ಪಾಟೀಲ

ಆಕ್ಸಿಜನ್‌ ಸಮಸ್ಯೆ:

ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್‌ ಸಾಮರ್ಥ್ಯದ ಆಕ್ಸಿಜನ್‌ ಪ್ಲಾಂಟ್‌ ಇದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 194 ಆಕ್ಸಿಜನ್‌ ಹಾಸಿಗೆಗಳಿದ್ದು, ಎಲ್ಲವೂ ಭರ್ತಿಯಾಗಿವೆ. ದಿನಕ್ಕೆ 3 ಟನ್‌ ಆಕ್ಸಿಜನ್‌ ಅಗತ್ಯವಿದೆ. ಹೊರ ಜಿಲ್ಲೆಗಳ ಏಜೆನ್ಸಿಗಳಿಂದಲೇ ಜಿಲ್ಲೆಗೆ ಆಮ್ಲಜನಕ ಪೂರೈಕೆಯಾಗುತ್ತಿದೆ. ಸ್ವಲ್ಪ ವಿಳಂಬವಾದರೂ ಆಕ್ಸಿಜನ್‌ ಕೊರತೆಯಾಗಿ ಸಾವು​- ನೋವು ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ನಿತ್ಯವೂ ಎಷ್ಟುಬೇಕೋ ಅಷ್ಟುಮಾತ್ರ ಆಕ್ಸಿಜನ್‌ ಪೂರೈಕೆಯಾಗುತ್ತಿದೆ. ಸದ್ಯ 23 ವೆಂಟಿಲೇಟರ್‌ಗಳು ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಉಳಿದ 23 ವೆಂಟಿಲೇಟರ್‌ ಆರಂಭಿಸಿದರೆ ಇರುವ ಬೆಡ್‌ಗಳಿಗೆ ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಲಕ್ಷಾಂತರ ರು. ಮೌಲ್ಯದ ಜೀವರಕ್ಷಕ ಸಾಧನ ಇದ್ದೂ ಇಲ್ಲದಂತಾಗಿದ್ದು, ಇಂಥ ಎರ್ಮಜೆನ್ಸಿ ಸಂದರ್ಭದಲ್ಲೂ ಮೂಲೆ ಸೇರಿವೆ.

ತಂತ್ರಜ್ಞರ ಕೊರತೆ:

ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಹಾಗೂ ಟೆಕ್ನಿಶಿಯನ್‌ಗಳ ಕೊರತೆ ಸಾಕಷ್ಟಿದೆ. ಎರಡರಿಂದ ಮೂರು ವೆಂಟಿಲೇಟರ್‌ ನಿರ್ವಹಣೆಗೆ ಒಬ್ಬ ಸಿಬ್ಬಂದಿ ಬೇಕು. ಆದರೆ, ಇಲ್ಲಿ 20 ಜನರ ಒಂದು ವಾರ್ಡ್‌ಗೆ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಇರುವ ಸಲಕರಣೆಗಳನ್ನೂ ಬಳಸಲು ಸಾಧ್ಯವಾಗುತ್ತಿಲ್ಲ. ಆಕ್ಸಿಜನ್‌ ಕೊರತೆ ಜತೆಗೆ ಸಿಬ್ಬಂದಿ ಕೊರತೆಯೂ ಇರುವುದರಿಂದ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಸಿಗದಂತಾಗಿದೆ.

ಕಳೆದ ವರ್ಷ ಕೊರೋನಾ ಒಂದನೇ ಅಲೆ ವೇಳೆ ಪಿಎಂ ಕೇರ್ಸ್‌ ಅಡಿಯಲ್ಲಿ 20 ವೆಂಟಿಲೇಟರ್‌ಗಳು ಜಿಲ್ಲಾಸ್ಪತ್ರೆಗೆ ಬಂದಿವೆ. ಇವೂ ಸೇರಿದಂತೆ 23 ವೆಂಟಿಲೇಟರ್‌ಗಳನ್ನು ಬಳಸಲು ಸಾಧ್ಯವಾಗದೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೈಕಟ್ಟಿಕೂತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಬ್ಬಂದಿಗೇ ಸೋಂಕು:

ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿತ್ಯವೂ ಪಾಸಿಟಿವ್‌ ವ್ಯಕ್ತಿಗಳೊಂದಿಗೆ ಕಾರ್ಯನಿರ್ವಹಿಸುವಂತಾಗಿದೆ. ಒಬ್ಬರು ತಜ್ಞ ವೈದ್ಯರು, 14 ನರ್ಸ್‌ ಕೊರೋನಾ ಸೋಂಕಿತರಾಗಿದ್ದಾರೆ. ಕೋವಿಡ್‌ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಸಿಬ್ಬಂದಿ ಕೊರತೆ ಇನ್ನಷ್ಟು ಹೆಚ್ಚಿದೆ. ಇದರಿಂದ ಸೋಂಕಿತರ ಆರೈಕೆಗೆ ಸಮಸ್ಯೆಯಾಗುತ್ತಿದೆ.

ಹೆಚ್ಚಿದ ಮರಣ ಪ್ರಮಾಣ

ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು, ಮರಣ ಪ್ರಮಾಣವೂ ಹೆಚ್ಚಿದೆ. ಆಕ್ಸಿಜನ್‌ ಬೆಡ್‌ಗಳು ಎಲ್ಲಿಯೂ ಸಿಗದಂತಾಗಿದೆ. ದಾವಣಗೆರೆ, ಹುಬ್ಬಳ್ಳಿ ಆಸ್ಪತ್ರೆಗಳಲ್ಲೂ ಬೆಡ್‌ ಖಾಲಿಯಿಲ್ಲ ಎಂಬ ಉತ್ತರ ಬರುತ್ತಿದೆ. ಆದ್ದರಿಂದ ಜಿಲ್ಲೆಯ ಕೊರೋನಾ ಸೋಂಕಿತರು ಎಲ್ಲಿಯೂ ಹೋಗಲಾಗದೇ, ಇಲ್ಲಿಯೂ ಬೆಡ್‌ ಸಿಗದೇ ಸಾವೇ ಗತಿ ಎಂಬಂತಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಸದ್ಯ 23 ವೆಂಟಿಲೇಟರ್‌ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 23 ಖಾಲಿ ಇವೆ. ಈಗಿರುವ ಬೆಡ್‌ಗಳಿಗೆ ಮಾತ್ರ ಆಕ್ಸಿಜನ್‌ ಪೂರೈಸಲು ಸಾಧ್ಯವಾಗುತ್ತಿದೆ. ಹೆಚ್ಚುವರಿ ವೆಂಟಿಲೇಟರ್‌ ಅಳವಡಿಸಿದರೆ ಈಗಿರುವ ಬೆಡ್‌ಗಳಿಗೂ ಆಕ್ಸಿಜನ್‌ ಕೊರತೆ ಎದುರಾಗಲಿದೆ. ಆದ್ದರಿಂದ ಸದ್ಯಕ್ಕೆ 23 ವೆಂಟಿಲೇಟರ್‌ಗಳನ್ನು ಬಳಸುತ್ತಿಲ್ಲ ಎಂದು ಹಾವೇರಿ ಜಿಲ್ಲಾ ಸರ್ಜನ್‌ ಡಾ. ಪಿ.ಆರ್‌. ಹಾವನೂರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!