'ಬೆಂಗಳೂರಿನಲ್ಲಿ ಶೇ.100 ತ್ಯಾಜ್ಯ ವಿಂಗಡಣೆ ಸಾಧ್ಯವೇ ಇಲ್ಲ'

By Kannadaprabha NewsFirst Published Jan 16, 2020, 9:09 AM IST
Highlights

ಶೇ.90 ರಷ್ಟು ತ್ಯಾಜ್ಯ ವಿಂಗಡಿಸಿದರೂ ಉತ್ತಮ ಸಾಧನೆ: ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್‌| ಇಂದೋರ್‌ ಮಾದರಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಪ್ರಯತ್ನ| ಯಾವುದೇ ನಗರದಲ್ಲಿ ನೂರಕ್ಕೆ ನೂರಷ್ಟು ತ್ಯಾಜ್ಯವನ್ನು ವಿಂಗಡಿಸುವುದಕ್ಕೆ ಸಾಧ್ಯವಿಲ್ಲ|

ಬೆಂಗಳೂರು(ಜ.16): ಯಾವುದೇ ನಗರದಲ್ಲಿ ನೂರಕ್ಕೆ ನೂರಷ್ಟು ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ವಿಂಗಡಿಸುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ, ಒಂದೇ ಆಟೋದಲ್ಲಿ ಹಸಿ, ಒಣ, ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಒಟ್ಟಿಗೆ ವಿಂಗಡಿಸಿದ ಮಾದರಿಯಲ್ಲಿ ಸಂಗ್ರಹಿಸಲು ಇಂದೋರ್‌ ಮಾದರಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಪ್ರಯತ್ನ ಮಾಡಿದರೂ ನಗರದಲ್ಲಿ ಶೇ.40 ರಿಂದ 45ರಷ್ಟು ಪ್ರಮಾಣದ ತ್ಯಾಜ್ಯವನ್ನು ಮಾತ್ರ ವಿಂಗಡಿಸಲಾಗುತ್ತಿದೆ. ‘ಘನತ್ಯಾಜ್ಯ ವಿಲೇವಾರಿ ನಿಯಮ-2016’ರಲ್ಲಿ ಶೇ.100 ರಷ್ಟು ಕಸ ವಿಂಗಡಣೆ ಸಾಧ್ಯ ಎಂಬ ಪದ ಸೇರಿಸಲಾಗಿದ್ದು, ಆದರೆ, ಯಾವುದೇ ನಗರದಲ್ಲಿ ನೂರಕ್ಕೆ ನೂರಷ್ಟು ತ್ಯಾಜ್ಯವನ್ನು ವಿಂಗಡಿಸುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಶೇ.100 ರಷ್ಟು ತ್ಯಾಜ್ಯ ವಿಂಗಡಣೆ ಮಾಡಲಾಗುತ್ತಿದೆ ಎಂದು ಹೇಳುತ್ತಿರುವ ನಗರ ಸುಳ್ಳು ವದಂತಿ ಹಬ್ಬಿಸುತ್ತಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶೇ.90 ರಷ್ಟು ತ್ಯಾಜ್ಯ ವಿಂಗಡಿಸಿದರೂ ಉತ್ತಮ ಸಾಧನೆಯಾಗಿದೆ. ನಗರದಲ್ಲಿ ವಿಂಗಡಿಸಿ ನೀಡಿದ ತ್ಯಾಜ್ಯವನ್ನು ಪೌರಕಾರ್ಮಿಕರು ಮಿಶ್ರಣ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ದೂರು ಬಿಬಿಎಂಪಿಗೆ ಬರುತ್ತಿವೆ. ಆದ್ದರಿಂದ ಇಂದೋರ್‌ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುವುದು, ಇಂದೋರ್‌ ವಿಧಾನದಲ್ಲಿ ತ್ಯಾಜ್ಯ ಸಂಗ್ರಹಿಸುವ ಆಟೋಗಳ ವಿನ್ಯಾಸ ಬದಲಾವಣೆ ಮಾಡಲಾಗುತ್ತಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯದ ‘ಆಟೋ ಬಾಡಿ’ ನಿರ್ಮಿಸಲಾಗುತ್ತಿದೆ. ಒಂದೇ ಬಾರಿ ಎಲ್ಲ ಕಸ ಸಂಗ್ರಹಿಸುವುದಕ್ಕೆ ಸಾಧ್ಯವಾಗದಿದ್ದರೆ, ಮತ್ತೊಂದು ಟ್ರಿಪ್‌ ಹೋಗಿ ಸಂಗ್ರಹಿಸುವುದಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.
 

click me!