ಗಣಿ ಧಣಿಗಳಿಗೆ ಮಾತ್ರವಲ್ಲ- ಸಾಮಾನ್ಯರಿಗೂ ಹೆಲಿಕಾಪ್ಟರ್‌ ಹತ್ತುವ ಭಾಗ್ಯ: ಬಳ್ಳಾರಿಯ ಬೈ-ಸ್ಕೈ ಸೇವೆ

By Sathish Kumar KHFirst Published Jan 19, 2023, 9:36 PM IST
Highlights

ಬಳ್ಳಾರಿ ಉತ್ಸವದ ವೇಳೆ ಆಗಸದಲ್ಲಿ ಹಾರಾಟ ಬಳ್ಳಾರಿ ಬೈ ಸ್ಕೈಗೆ ಚಾಲನೆ
ಬಳ್ಳಾರಿ ರಮಣೀಯ ಸ್ಥಳ ವೀಕ್ಷಿಸಲು ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣ
3,500 ರೂ. ಪಾವತಿಸಿ 15 ನಿಮಿಷ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಬಳ್ಳಾರಿ (ಜ.19): ಕಣ್ಣಿದ್ದರೆ ಕನಕಗಿರಿ ನೋಡು, ಕಾಲಿದ್ದರೆ ಹಂಪಿ ನೋಡು ಎನ್ನುವ ಮಾತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇಳಿಬರುತ್ತದೆ. ಆದರೆ ಇದೀಗ ಇದೇ ಮಾತನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವುದಾರೆ ಕಾಸಿದ್ದರೆ ಬಳ್ಳಾರಿ ಉತ್ಸವದಲ್ಲಿ ಹಕ್ಕಿಗಳಂತೆ ಹೆಲಿಕಾಪ್ಟರ್ ನಲ್ಲಿ ಹಾರಾಡಿ ನೋಡು ಎನ್ನಬಹುದಾಗಿದೆ. ಬಳ್ಳಾರಿ ಉತ್ಸವದಲ್ಲಿ ಮೊದಲ ಬಾರಿಗೆ ಬಳ್ಳಾರಿ ಬೈ-ಸ್ಕೈ ಆಯೋಜನೆ ಮಾಡಲಾಗಿದ್ದು, ಹಣ ಪಾವತಿಸಿ ಒಂದಷ್ಟು ಕಾಲ ಹೆಲಿಕಾಪ್ಟರ್‌ ಮೂಲಕ ಆಗಸದಿಂದ ಬಳ್ಳಾರಿಯನ್ನು ವೀಕ್ಷಿಸಬಹುದಾಗಿದೆ.

ಸಾಮಾನ್ಯ ಜನರಿಗೆ ಹೆಲಿಕಾಪ್ಟರ್ ಹತ್ತುವ ಭಾಗ್ಯ: ಬಳ್ಳಾರಿಯಲ್ಲಿ ಹೆಲಿಕಾಪ್ಟರ್ ಗಳಿಗೇನು ಕಮ್ಮಿ ಇಲ್ಲ.  ಜನಾರ್ದನ ರೆಡ್ಡಿ, ಎಸ್.ಕೆ. ಮೋದಿ ಸೇರಿದಂತೆ ಹಲವು ಗಣ್ಯರ ಬಳಿ ಹೆಲಿಕಾಪ್ಟರ್ ಇತ್ತು. ಗಣಿಗಾರಿಕೆ ವೇಳೆ ಇಲ್ಲಿ ಗಣಿ ಧಣಿಗಳು ಹೆಲಿಕಾಪ್ಟರ್ ನಲ್ಲಿ ಹಾರಾಡೋದು ಸಾಮಾನ್ಯವಾಗಿತ್ತು. ಆದರೆ ಸಾಮಾನ್ಯ ಜನರು ಕೂಡ ಇದೇ ಮೊದಲ ಬಾರಿಗೆ ಬಳ್ಳಾರಿಯ ಐತಿಹಾಸಿಕ ಸ್ಥಳಗಳು ಹಾಗೂ ಮನೋರಮಣೀಯ ಬೆಟ್ಟ, ಗುಡ್ಡಗಳ ದೃಶ್ಯಗಳನ್ನು ಅಗಸದಿಂದ ವೀಕ್ಷಿಸಲು ಬಳ್ಳಾರಿ ಉತ್ಸವದ ವೇಳೆ ವ್ಯವಸ್ಥೆ ಮಾಡಲಾಗಿದೆ. ಅದು ಬಳ್ಳಾರಿ ಬೈ-ಸ್ಕೈ ಹೆಸರಲ್ಲಿ ಪ್ರತಿಯೊಬ್ಬರೂ ಹೆಲಿಕಾಪ್ಟರ್ ನಲ್ಲಿ ಹಾರಾಟ ಮಾಡಿ ಆನಂದಿಸಿ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದ್ದಾರೆ.

ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಕೊಳಗಲ್ ವಿಮಾನ ನಿಲ್ದಾಣದಿಂದ ಬೈಸ್ಕೈ ಚಾಲನೆ : ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಆಗಸದಿಂದ ಬಳ್ಳಾರಿಯನ್ನು ವೀಕ್ಷಿಸಲು ನಗರದ ಕೊಳಗಲ್ ವಿಮಾನ ನಿಲ್ದಾಣದಿಂದ ಬಳ್ಳಾರಿ ಬೈಸ್ಕೈಗೆ  ಚಾಲನೆ ನೀಡಲಾಗಿದೆ.   ಈ ಹಿಂದೆ ಹಂಪಿ ಉತ್ಸವದಲ್ಲಿ ಬೈಸ್ಕೈ ಇರುತ್ತಿತ್ತು. ಈಗ ಇದೇ  ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ತುಂಬೆ ಏವಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಉತ್ಸವದ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದೆ. ಈ  ಉತ್ಸವಕ್ಕೆ ನಗರದ ಜನತೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ತಿಳಿಸಿದ್ದಾರೆ.

ಹದಿನೈದು ನಿಮಿಷಗಳ ಕಾಲ ಹಾರಾಟ: ಬಳ್ಳಾರಿ ಬೈಸ್ಕೈನಲ್ಲಿ ಹೆಲಿಕಾಪ್ಟರ್ ಮೂಲಕ 15 ನಿಮಿಷಗಳ ಕಾಲ ಆಗಸದಿಂದ ಬಳ್ಳಾರಿಯ ಪ್ರಸಿದ್ಧ ಸ್ಥಳಗಳಾದ ತುಮಟಿಯ ಐತಿಹಾಸಿಕ ಬ್ರಿಟಿಷ್ ಬಂಗಲೆ ಹಾಗೂ ಸಾಲು ಬೆಟ್ಟ, ಬಳ್ಳಾರಿ ಕೋಟೆ, ಸಂಗನಕಲ್ಲು ಗುಡ್ಡ ಸೇರಿದಂತೆ ನಗರವನ್ನು ವೀಕ್ಷಿಸಿಸಬಹುದಾಗಿದೆ. ಹೆಲಿಕಾಪ್ಟರ್‌ನಲ್ಲಿ ಒಂದು ಬಾರಿಗೆ 6 ಪ್ರಯಾಣಿಕರು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ಒಬ್ಬರಿಗೆ ರೂ.3,500 ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ ನಗರ ಸೇರಿದಂತೆ ಐತಿಹಾಸಿಕ ಮನೋರಮಣಿಯ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ. ಜನವರಿ 19 ರಿಂದ 23 ರವರೆಗೆ ಬೆಳಗ್ಗೆ 7ರಿಂದ ಸಂಜೆ 4 ರವರೆಗೆ ನಡೆಯಲಿದೆ. ಹವಮಾನ ನೋಡಿಕೊಂಡು ಕಾಲಾವಧಿಯನ್ನು ವಿಸ್ತರಿಸಲಾಗುವುದು ಜಿಲ್ಲಾಡಳಿತ ಸ್ಪಷ್ಟ ಪಡಿಸಿದೆ. 

ಚಿಕ್ಕಮಗಳೂರಲ್ಲಿ ವಿಜ್ಞಾನದ ಜ್ಞಾನ ಬಂಡಾರವೇ ಸೃಷ್ಠಿ..!

ನೂರಾರು ಎತ್ತಿನ ಬಂಡಿಗಳ ಮೆರವಣಿಗೆ: ಒಂದು ಕಡೆ ಹೆಲಿಕಾಪ್ಟರ್ ರೌಂಡ್ಸ್ ಅದ್ರೇ ಮತ್ತೊಂದು ಕಡೆ ಬಳ್ಳಾರಿ ಉತ್ಸವದಲ್ಲಿ  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ  ಎತ್ತಿನ ಬಂಡಿ ಮೆರವಣಿಗೆ ನಡೆಸಲಾಯಿತು.     ಅಲಂಕೃತ ಎತ್ತಿನ ಬಂಡಿಗಳ ಮೆರವಣಿಗೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಚಾಲನೆ ನೀಡಿದರು. ಎತ್ತಿನ ಬಂಡಿ ಉತ್ಸವದಲ್ಲಿ ಶ್ರೀಧರಗಡ್ಡೆ, ಲಕ್ಷ್ಮೀನಗರ ಕ್ಯಾಂಪ್, ಕೊಳಗಲ್, ಸಂಜೀವರಾಯನ ಕೋಟೆ, ಚೆರಕುಂಟೆ ಹಾಗೂ ನೆರೆಯ ಆಂಧ್ರಪ್ರದೇಶದ ವಿವಿಧ ಗ್ರಾಮಗಳಿಂದ ಬಂದ ಎತ್ತಿನ ಬಂಡಿಗಳು   ತೋರಣಗಳಿಂದ ಸಿಂಗಾರಗೊಂಡಿದ್ದವು.  100 ಕ್ಕೂ ಅಧಿಕ ಎತ್ತಿನ ಬಂಡಿಗಳು ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದವು.

ಗಮನಸೆಳೆದ ಮಾಹಿತಿ ಬ್ಯಾನರ್ ಗಳು: ಎತ್ತಿನ ಬಂಡಿ ಉತ್ಸವದಲ್ಲಿ ಎತ್ತಿನ ಬಂಡಿಗಳಲ್ಲಿ ಸಾವಯವ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಬ್ಯಾನರ್, ಸಿರಿಧಾನ್ಯ ಬಳಕೆಯ ಮಹತ್ವ ಕುರಿತ ಬ್ಯಾನರ್‍ಗಳು, ಮತದಾನದ ಜಾಗೃತಿ ಮೂಡಿಸುವ ಬ್ಯಾನರ್‍ಗಳು ಮತ್ತು ಸಿರಿಧಾನ್ಯ ಬಳಕೆಯ ಸ್ಲೋಗನ್‍ಗಳ ಬ್ಯಾನರ್‍ಗಳು ಆಳವಡಿಸಿದ್ದು ನೋಡುಗರನ್ನು ಗಮನ ಸೆಳೆದವು.

​​​​​​​

ಮೆರಗು ತಂದ ಕಲಾ ತಂಡಗಳು: ಎತ್ತಿನ ಬಂಡಿ ಉತ್ಸವದಲ್ಲಿ ಕಲಾ ತಂಡಗಳಾದ ಡೊಳ್ಳು ಬಾರಿಸುವಿಕೆ, ಕಹಳೆ ಉದುವಿಕೆ, ಹುಲಿಕುಣಿತ, ಎತ್ತರದ ಮಾನವನ ನಡಿಗೆ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿ ಕಲೆ ಪ್ರದರ್ಶಿಸಿದರು. ಮೆರವಣಿಗೆಯ ರಸ್ತೆಯ ಉದ್ದಕ್ಕೂ ಸಾರ್ವಜನಿಕರು ಹಾಗೂ ವಾಹನ ಸವಾರರು ಮೊಬೈಲ್ ಹಿಡಿದು ವಿಡಿಯೋ ಮಾಡುವ ಮೂಲಕ ಸಂಭ್ರಮಿಸಿದರು.  ಉತ್ಸವದ ಚಾಲನೆಗೆ ಮುನ್ನ ಎಲ್ಲ ಅಧಿಕಾರಿಗಳು ರೈತರ ಹಸಿರು ಶಾಲಿನ ಪೇಟತೊಟ್ಟು ಮೆರವಣಿಗೆಯಲ್ಲಿ ಗಮನಸೆಳೆದರು.

click me!