ಅವರವರ ದೇಹ ಪರಿಸ್ಥಿತಿ ನೋಡಿಕೊಂಡು ವೈದ್ಯರ ನಿರ್ಧಾರ| ಕೊರೋನಾ ಬಾಧೆಯ ಲಕ್ಷಣ ಕಂಡಾಕ್ಷಣ ಮೊದ್ಲು ವೈದ್ಯರನ್ನ ಕಾಣಿ| ಪಲ್ಸ್ ಆಕ್ಸೀಮೀಟರ್ ಜೊತೆಗಿಟ್ಟುಕೊಂಡು ದೇಹದಲ್ಲಿನ ಆಕ್ಸಿಜನ್ ವಿಚಾರ ಅರಿಯಬಹುದೇ ವಿನಹಃ ಅದನ್ನೇ ಆಧರಿಸಿ ನೀವೇ ಔಷಧೋಪಚಾರಕ್ಕೆ ಮುಂದಾಗೋದು ಸರಿಯಲ್ಲ: ತಜ್ಞ ವೈದ್ಯರು|
ಕಲಬುರಗಿ(ಏ.28): ಕೊರೋನಾ ಸ್ಫೋಟದಿಂದಾಗಿ ಭೀತಿಯಲ್ಲಿರುವ ಕಲಬುರಗಿಯ ಜನತೆ ತುಸು ಲಕ್ಷಕೊಟ್ಟು ಈ ಮಾಹಿತಿ ಓದಿರಿ, ಕೊರೋನಾ ಪಾಸಿಟಿವ್ ಬಂದಾಕ್ಷಣ ಆಕ್ಸಿಜನ್, ರೆಮ್‌ಡಿಸಿವೀರ್ ಇಂಜೆಕ್ಷನ್ ಬೇಕಿಲ್ಲ, ಕ್ವಾರಂಟೈನ್ ಆಗಿದ್ದು ವೈದ್ಯರ ಸಲಹೆ- ಸೂಚನೆ ಪಾಲಿಸಿಯೂ ಈ ವೈರಾಣು ತೊಂದರೆಗೆ ಮದ್ದರೆಯಬಹುದು ಎಂದು ಕಲಬುರಗಿಯಲ್ಲಿರುವ ತಜ್ಞ ವೈದ್ಯರು ಹೇಳಿದ್ದಾರೆ.
ಕೊರೋನಾ ವೈರಾಣು ರೋಗ, ಮೊದಲಿಗಿಂತ ಶಕ್ತಿಶಾಲಿಯಾಗಿ ಸದರಿ ವೈರಾಣು ಹರಡುತ್ತ ತನ್ನ ಪರಿಣಾಮ ತೋರಿಸುತ್ತಿದೆ. ಇದಕ್ಕೆಲ್ಲ ಭಯ ಬೇಡ, ಜಾಗೃತಿ ಇರಲಿ, ಕೊರೋನಾ ತನ್ನ ಲಕ್ಷಣ ನಿಮ್ಮ ದೇಹದಲ್ಲಿ ತೋರಿಸಿದರೆ ವಿಳಂಬ ಮಾಡದೆ ತಕ್ಷಣ ವೈದ್ಯರನ್ನು ಕಂಡರೆ ಸಾಕು, ಮುಂದಾಗುವ ತೊಂದರೆಗಳಿಂದ ಬಚಾವ್ ಆಗಲು ಸಾಧ್ಯ. ಪಾಸಿಟಿವ್ ಆದವರೆಲ್ಲರಿಗೂ ಆಕ್ಸಿಜನ್, ರೆಮ್‌ಡಿಸಿವೀರ್ ಬೇಕಿಲ್ಲ ಎಂದು ಕಲಬುರಗಿಯ ಪರಿಣಿತ ತಜ್ಞ ವೈದ್ಯ ಡಾ. ಸಂಗ್ರಾಮ ಬಿರಾದಾರ್, ಅರಿವಳಿಕೆ ತಜ್ಞೆ ಡಾ. ಪ್ರತಿಮಾ ಕಾಮರೆಡ್ಡಿ ಹೇಳಿದ್ದಾರೆ.
ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಸ್ಥಳೀಯವಾಗಿ ಪತ್ರಕರ್ತರ ಸಂಘದ ಜೊತೆಗೂಡಿ ಆಯೋಜಿಸಿದ್ದ ಕೊರೋನಾ 2 ನೇ ಅಲೆಯ ಸಾಧಕ- ಬಾಧಕಗಳ ಸಂವಾದದಲ್ಲಿ ಪಾಲ್ಗೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ತಜ್ಞ ವೈದ್ಯರು ಕೊರೋನಾ ಪಾಸಿಟಿವ್ ಬಂದವರೆಲ್ಲರಿಗೂ ಆ್ಸಜನ್ ಬೇಕು, ರೆಮ್‌ಡಿಸಿವರ್ ಇಂಜೆಕ್ಷನ್ ಬೇಕೆಂಬಂತೆ ಬಿಂಬಿಸಲಾಗುತ್ತಿದೆ. ಇದು ಶುದ್ಧ ತಪ್ಪು ಎಂದರು.
ರೆಮ್‌ಡಿಸಿವಿಯರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ..!
ಮಾಧ್ಯಮಗಳಲ್ಲಿ ನಿತ್ಯವೂ ಆಕ್ಸಿಜನ್ ಕೊರತೆ, ಇಂಜೆಕ್ಷನ್ ಕಾಳಸಂತೆಯ ಸುದ್ದಿಗಳೇ ಪ್ರಸಾರವಾಗುತ್ತಿವೆ. ಇದರಿಂದ ಜನ ಭೀತರಾಗಿದ್ದಾರೆ. ಬೆಡ್ ಇಲ್ಲೆವಂಬ ಸುದ್ದಿಯಿಂದಲೂ ಅನೇಕರು ಕೊರೋನಾ ಪಾಸಿಟಿವ್ ಅಂದಾಕ್ಷಣ ಭಯಗೊಳ್ಳುತ್ತಿದ್ದಾರೆ. ಕೊರೋನಾ ಬಂದವರಲ್ಲಿ ಶೇ. 15 ಮಂದಿಗಷ್ಟೇ ಸಮಸ್ಯೆ ಕಾಡಬಹುದು. ಅದರಲ್ಲೂ ಶೇ. 5 ರಷ್ಟುಮಂದಿಗೆ ಮಾತ್ರ ಆಕ್ಸಿಜನ್ ಅಗತ್ಯವಾಗಬಹುದು. ರೋಗದ ಬಗ್ಗೆ ಅರಿತುಕೊಳ್ಳಬೇಕೆ ಹೊರತು ಅನಗತ್ಯ ಸಂಗತಿಗಳನ್ನು ನೆನಎದು ಭಯಪಡುವುದು ಬೇಡವೆಂದು ಡಾ. ಸಂಗ್ರಾಮ ಬಿರಾದಾರ್ ಹೇಳಿದರು.
ಪಾಸಿಟಿವ್ ಆದ ತಕ್ಷಣ ಆಕ್ಸಿಜನ್ ಬೇಕಿಲ್ರಿ:
ಆಕ್ಸಿಜನ್ ಪ್ರಮಾಣ 90 ಗಿಂತ ಕಮ್ಮಿಯಾದಲ್ಲಿ ಮಾತ್ರ ಆಕ್ಸೀಜನ್ ಹೊರಗಡೆಯಿಂದ ಕೊಡುವ ಚಿಂತನೆ ನಡೆಸಲಾಗುತ್ತದೆ. ಇದನ್ನೆಲ್ಲ ಬಿಟ್ಟು ಪಾಸಿಟಿವ್ ಆದ ತಕ್ಷಣ ಆಕ್ಸಿಜನ್‌ಗಾಗಿ ದುಂಬಾಲು ಬಿದ್ದರೆ ಹೇಗೆ? ಕೊರೋನಾ ಪಾಸೀಟಿವ್ ಆದರಲ್ಲಿ ಸಾವಿರಾರು ಮಂದಿ ನಿತ್ಯ ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬರುತ್ತಿದ್ದಾರೆ. ಈ ಸಂಗತಿ ನೋಡಿ ನೆಮ್ಮದಿಯಿಂದಿರಿ, ದೇಹಸ್ಥಿತಿ ನೋಡಿ ವೈದ್ಯರು ನಿಮ್ಮ ಚಿಕಿತ್ಸೆ ನಿರ್ಧರಿಸಲು ಬಿಡಿರೆಂದು ಡಾ. ಪ್ರತಿಮಾ ಕಾಮರೆಡ್ಡಿ ಹೇಳಿದರು.
ಪಲ್ಸ್ ಆಕ್ಸೀಮೀಟರ್ ಜೊತೆಗಿಟ್ಟುಕೊಂಡು ದೇಹದಲ್ಲಿನ ಆಕ್ಸಿಜನ್ ವಿಚಾರ ಅರಿಯಬಹುದೇ ವಿನಹಃ ಅದನ್ನೇ ಆಧರಿಸಿ ನೀವೇ ಔಷಧೋಪಚಾರಕ್ಕೆ ಮುಂದಾಗೋದು ಸರಿಯಲ್ಲ. ಏನಿದ್ದರೂ ಲಕ್ಷಣ ಕಂಡಾಕ್ಷಣ ಬೇಗ ವೈದ್ಯರ ಬಳಿ ಬಂದಲ್ಲಿ ಮುಂದಿನ ಸಂಕೀರ್ಣತೆಗಳಿಂದ ದೂರ ಇರಬಹುದು ಎಂದರು. ಮಾಸ್ಕ್, ಸಾಮಾಜಿಕ ಅಂತರದಿಂದಲೂ ಕೊರೋನಾ ಬಾಧೆಯಿಂದ ನಾವು ದೂರ ಇರಬಹುದೆಂದು ಅವರು ಹೇಳಿದರು. ವೈದ್ಯ ಸಾಹಿತ್ಯ ಪರಿಷತ್ತಿನ ಎಸ್‌ಎಸ್ ಹಿರೇಮಠ, ಶಶಿಶೇಖರ ರೆಡ್ಡಿ, ಪತ್ರಕರ್ತರ ಸಂಘದ ಭವಾನಿಸಿಂಗ್, ದೇವೇಂದ್ರ ಆವಂಟಿ ಇದ್ದರು.