ತಡರಾತ್ರಿ ಭೂಮಿಯಿಂದ ಕೇಳಿಬಂದ ಭಾರೀ ಶಬ್ದಕ್ಕೆ ಬೆದರಿದ ಜನ, ಭೂಕಂಪವಲ್ಲ!

By Suvarna NewsFirst Published May 16, 2022, 9:24 AM IST
Highlights

* ಭೂಮಿಯಿಂದ ಕೇಳಿಬಂದ ಭಾರೀ ಶಬ್ದಕ್ಕೆ ಬೆದರಿದ ಜನ

* ಬಾಗೇಪಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ‌ ಕಂಪಿಸಿದ ಅನುಭವ

* ಯಲ್ಲಂಪಲ್ಲಿ, ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ.

ಚಿಕ್ಕಬಳ್ಳಾಪುರ(ಮೇ.16): ಇತ್ತೀಚೆಗೆ ಆಗಾಗ ಭೂಮಿಯಿಂದ ಭಾರೀ ಶಬ್ಧ ಕೇಳುತ್ತಿರುವ ಪ್ರಕರಣಗಳು ವರದಿಯಾಗುತ್ತವೆ. ಇದೀಗ ಮತ್ತೊಮ್ಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಬ್ಧವೊಂದು ಕೇಳಿ ಬಂದಿದೆ. ಇಲ್ಲಿನ ಹಳ್ಳಿಗಳಲ್ಲಿ ತಡರಾತ್ರಿ ನಿಗೂಢ ಶಬ್ಧ ಕೇಳಿ ಬಂದಿದ್ದು, ಈ ಭಾಗದ ಜನರು ಭಯಭೀತರಾಗಿದ್ದಾರೆ.

ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪೆದ್ದತುಮಕೆಪಲ್ಲಿ, ಕದಿರನ್ನಗಾರಪಲ್ಲಿ ಗ್ರಾಮಗಳಲ್ಲಿ ತಡರಾತ್ರಿ ಎರಡು ಬಾರಿ ಭಾರೀ ಶಬ್ಧ ಕೇಳಿ ಬಂದಿದ್ದು, ಶಬ್ಧದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವವೂ ಆಗಿದೆ. ಈ ಭಾರೀ ಶಬ್ದ ಹಾಗೂ ಭೂಕಂಪನದ ಅನುಭವಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಸುಮಾರು 9:30 ಹಾಗೂ 9:45 ಗಂಟೆ ಸುಮಾರಿಗೆ ಎರಡು ಬಾರಿ ಶಬ್ಧ ಕೇಳಿಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಆತಂಕದಿಂದಲೇ ಕಾಲ ಕಳೆಯುವಂತಾಗಿದೆ.

ಆದ್ರೆ ಭೂಕಂಪನವಾಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಸ್ಪಷ್ಣೆ ನೀಡಿದ್ದು, ಮತ್ತಷ್ಟು ಅಚ್ಚರಿ ಸೃಷ್ಟಿಸಿದೆ. ಸದ್ಯ ಈ ಶಬ್ಧಕ್ಕೇನು ಕಾರಣ ಎಂಬ ಬಗ್ಗೆ ಅಧ್ಯಯನ ಆರಂಭವಾಗಿದೆ. 

ಸುತ್ತಮುತ್ತಲ ಗ್ರಾಮಗಳಲ್ಲಿ ಪದೇ ಪದೇ ಕಂಪನದ ಅನುಭವ

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಗ್ರಾಮಗಳಲ್ಲಿ ಜನರಿಗೆ  ಮೂರು ಬಾರಿ ಭೂಮಿ ಕಂಪಿಸಿರುವ ಅನುಭವವಾಗುತ್ತಿದೆ. ಇದರಿಂದ ಗ್ರಾಮಸ್ಥರೆಲ್ಲ ಕಂಗಾಲಾಗಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದೂ ಆಗ್ರಹಿಸಿದ್ದಾರೆ. 

ಜನವರಿಯಲ್ಲೂ ಇಂತಹುದೇ ಅನುಭವವಾಗಿತ್ತು

ಕಳೆದ ಜನವರಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂಕಂಪನದಿಂದ ಅಲ್ಲಿನ ಜನರು ಭಯಬಿದ್ದು ಮನೆಯ ಹೊರಗಡೆ ಬಂದಿದ್ದರು. ತಾಲೂಕಿನ ಶೆಟ್ಟಿಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದಂತೆ ಆಗಿತ್ತು. ಕಳೆದ ಡಿಸೆಂಬರಿನಲ್ಲಿ ಮೂರು ಬಾರಿ ಭೂಕಂಪನ ಉಂಟಾಗಿತ್ತು. ಕೆಲವು ಮನೆಗಳು ಬಿದ್ದು ಹೋಗಿದ್ದವು, ಗೋಡೆಗಳು ಕುಸಿದು ಬಿದ್ದಿದ್ದವು. ಸುಮಾರು 7 ರಿಂದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಭೂಕಂಪನ ಸಂಭವಿಸಿತ್ತು.

click me!