
ಐದು ವರ್ಷಕ್ಕೊಮ್ಮೆ ಪ್ರಕಟವಾಗುವ ಬಣ್ಣ ಬಣ್ಣದ ಪ್ರಣಾಳಿಕೆಗಳಲ್ಲಿ ಉತ್ತರ ಕರ್ನಾಟಕ ನಮಗೆ ಎರಡು ಕಣ್ಣುಗಳಿದ್ದಂತೆ ಎಂದು ಸರ್ಕಾರಗಳು ಬರೆಯುತ್ತವೆ. ಆದರೆ ಇವತ್ತು ಅದೇ ಕಣ್ಣುಗಳಿಂದ ರಕ್ತದ ಕಣ್ಣೀರು ಸುರಿಯುತ್ತಿದ್ದರೂ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಫೈಲುಗಳನ್ನು ತಿರುವುತ್ತಿರುವ ವ್ಯವಸ್ಥೆಗೆ ಆ ಕಣ್ಣೀರು ಕಾಣಿಸುತ್ತಿಲ್ಲ. ಎಕರೆಗಟ್ಟಲೆ ಜಮೀನಿಗೆ ಒಡೆಯನಾಗಿದ್ದ ಸ್ವಾಭಿಮಾನಿ ರೈತ, ಇವತ್ತು ಬೆಂಗಳೂರಿನಂತಹ ಮಹಾನಗರಗಳ ರಸ್ತೆ ಬದಿಯಲ್ಲಿ ಸಿಮೆಂಟ್ ಮೂಟೆ ಹೊರಬೇಕಾಗಿ ಬಂದಿದೆ. ಇದಕ್ಕೆ ಕೇವಲ ಪ್ರಕೃತಿಯ ವಿಕೋಪ ಕಾರಣವಲ್ಲ, ಬದಲಾಗಿ ಈ ಭಾಗವನ್ನು ಕೇವಲ ಮತಗಳ ಲೆಕ್ಕಾಚಾರಕ್ಕೆ ಬಳಸಿಕೊಳ್ಳುವ ಆಡಳಿತಾತ್ಮಕ ವೈಫಲ್ಯವೇ ಪ್ರಮುಖ ಕಾರಣ ಎನ್ನಲಾಗಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಸ್ವಾಭಿಮಾನದ ಹೋರಾಟಗಳು ಹುಟ್ಟಿದ ನರಗುಂದ ಮತ್ತು ಗದಗ ಭಾಗದ ಜನ ಇಂದು ಹನಿ ನೀರಿಗೂ ವ್ಯವಸ್ಥೆಯ ಮುಂದೆ ಕೈಚಾಚುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದ ಗ್ರಾಮೀಣ ಭಾಗದಲ್ಲಿ ಬೆಣ್ಣಿಹಳ್ಳದ ಸುತ್ತಮುತ್ತಲಿನ ಹಳ್ಳಿಗಳು ನೀರಿಲ್ಲದೆ ಬಿಕೋ ಎನ್ನುತ್ತಿವೆ. ಬ್ಯಾಡಗಿ ಮೆಣಸಿನಕಾಯಿಯ ಖಾರಕ್ಕೆ ಹೆಸರಾದ ಹಾವೇರಿ ಹಾಗೂ ಬಾಗಲಕೋಟೆಯ ಒಣ ಭೂಮಿಯಲ್ಲಿ ಬಿತ್ತಿದ ಬೀಜಗಳು ಮಣ್ಣಿನಲ್ಲೇ ಕರಗಿಹೋಗಿವೆ. ಸಕ್ಕರೆ ನಾಡು, ಭತ್ತದ ಕಣಜ, ಗಣಿನಾಡು ಎಂದು ಸರ್ಕಾರಿ ಕಡತಗಳಲ್ಲಿ ಬಿರುದು ಪಡೆದಿರುವ ಬೆಳಗಾವಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ. ಕೃಷ್ಣೆ ನದಿ ಹರಿಯುತ್ತಾಳೆ, ಆದರೆ ಕಾಗದದ ಮೇಲೆ ಮಾತ್ರ! ಹೊಲದಲ್ಲಲ್ಲ!
'The Hindu' ಪತ್ರಿಕೆಯ ಇತ್ತೀಚಿನ ವರದಿ ಮತ್ತು ಡಾ. ಎಂ. ಗೋವಿಂದರಾವ್ ಸಮಿತಿಯ ವರದಿ ಪ್ರಕಾರ, ರಾಜ್ಯದ ಒಟ್ಟು 236 ತಾಲೂಕುಗಳಲ್ಲಿ 177 ತಾಲೂಕುಗಳು ತೀವ್ರ ಹಿಂದುಳಿದಿವೆ. ಅದರಲ್ಲಿ ಅತ್ಯಂತ ಹೆಚ್ಚು ಹಿಂದುಳಿದಿರುವ 59 ತಾಲೂಕುಗಳ ಪೈಕಿ 43 ತಾಲೂಕುಗಳು ಕೇವಲ ಉತ್ತರ ಕರ್ನಾಟಕದಲ್ಲೇ ಇ.! ಕಳೆದ ಎರಡು ದಶಕಗಳಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ₹35,380 ಕೋಟಿ ಖರ್ಚು ಮಾಡಲಾಗಿದೆ ಎಂದು ಬಜೆಟ್ ಪುಸ್ತಕಗಳು ಹೇಳುತ್ತವೆ, ಆದರೆ ಆ ಕೋಟಿಗಳು ಕೃಷಿ ಭೂಮಿಗೆ ತಲುಪುವಷ್ಟರಲ್ಲಿ ಕರಗಿ ಹೋಗಿವೆ.
ತಮ್ಮ ಊರಿನಲ್ಲಿ ರಾಜನಂತೆ ಬದುಕಬೇಕಾಗಿದ್ದ ಸ್ವಾಭಿಮಾನಿ ರೈತ ಇವತ್ತು ಇಡೀ ಕುಟುಂಬದೊಂದಿಗೆ ಬೆಂಗಳೂರಿನ ಫ್ಲೈಓವರ್‌ಗಳ ಕೆಳಗೆ, ರಸ್ತೆ ಬದಿಯ ಮರದ ಕೊಂಬೆಗೆ ಹರಿದ ಸೀರೆಯ ಜೋಳಿಗೆ ಕಟ್ಟಿ ಹಸುಗೂಸನ್ನು ಮಲಗಿಸಿ, ಸಿಮೆಂಟ್ ಧೂಳಿನ ಮಧ್ಯೆ ದಿನಗೂಲಿಗಾಗಿ ಬೆವರು ಸುರಿಸುತ್ತಿದ್ದಾನೆ. ಈ ಜಿಲ್ಲೆಗಳನ್ನು 'ಬರಪೀಡಿತ' ಎಂದು ಅಧಿಕೃತವಾಗಿ ಘೋಷಿಸಲು ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ರೈತನಿಗೆ ಬೆಳೆ ಹಾನಿ ಪರಿಹಾರ ಸಿಗುತ್ತಿಲ್ಲ, ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿವೆ ಎನ್ನಲಾಗಿದೆ.
ಮಧ್ಯಂತರ ಪರಿಹಾರ ಜಮೆ: ವಿಪತ್ತು ನಿಧಿಯಿಂದ ತಕ್ಷಣವೇ ಪ್ರತಿ ರೈತನ ಖಾತೆಗೆ ಮಧ್ಯಂತರ ಪರಿಹಾರದ ಹಣ ಜಮೆ ಮಾಡಬೇಕು.
ಉದ್ಯೋಗ ಖಾತರಿ ದಿನಗಳ ಹೆಚ್ಚಳ; ವಲಸೆ ತಡೆಯಲು VG ಕೆಲಸದ ದಿನಗಳನ್ನು 100 ರಿಂದ 150 ಕ್ಕೆ ಏರಿಸಿ, ಸ್ಥಳೀಯವಾಗಿಯೇ ಕೆಲಸ ನೀಡಬೇಕು.
ಸಾಲ ವಸೂಲಾತಿಗೆ ತಡೆ: ಕೃಷಿ ಸಾಲಗಳ ಬಡ್ಡಿಯನ್ನು ತಕ್ಷಣವೇ ಮನ್ನಾ ಮಾಡಿ, ಬ್ಯಾಂಕ್‌ಗಳ ಕಿರುಕುಳಕ್ಕೆ ಕಟ್ಟುನಿಟ್ಟಿನ ತಡೆ ನೀಡಬೇಕು.
ಮೇವು ಮತ್ತು ನೀರು: ಪ್ರತಿಯೊಂದು ಪಂಚಾಯಿತಿಯಲ್ಲೂ ಉಚಿತ ಮೇವು ಬ್ಯಾಂಕ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಳಸಾ-ಬಂಡೂರಿ ಯೋಜನೆಗಳ ಹೆಸರಿನಲ್ಲಿ ಕಾಗದದ ಮೇಲೆ ಯೋಜನೆಗಳನ್ನು ಸೃಷ್ಟಿಸುತ್ತಿರುವ ವ್ಯವಸ್ಥೆಗೆ ನೆನಪಿರಲಿ, ಉತ್ತರ ಕರ್ನಾಟಕದ ರೈತರು ಭಿಕ್ಷುಕರಲ್ಲ, ಅವರು ಈ ರಾಜ್ಯದ ಆಧಾರಸ್ತಂಭ. ಅವರಿಗೆ ಬಣ್ಣದ ಭರವಸೆಗಳ ಪ್ಯಾಕೇಜ್ ಬೇಡ, ಇವತ್ತು ಬದುಕಲು ತಕ್ಷಣದ ಆಸರೆ ಬೇಕು ಎನ್ನುವುದ ಅನ್ನದಾತನ ಆಶಯವಾಗಿದೆ.