ಊರಿಗೆ ಕಳುಹಿಸಿಕೊಡುವಂತೆ ಅಗ್ರಹಿಸಿ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರು ಬುಧವಾರ ಲಾಕ್‌ಡೌನ್ ಮಧ್ಯೆಯೂ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು(ಮೇ.07): ಊರಿಗೆ ಕಳುಹಿಸಿಕೊಡುವಂತೆ ಅಗ್ರಹಿಸಿ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರು ಬುಧವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸಿದ ನೂರಾರು ಕಾರ್ಮಿಕರು, ತಮ್ಮನ್ನು ಆದಷ್ಟುಬೇಗನೆ ಊರಿಗೆ ಕಳುಹಿಸಿಕೊಡುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯೇ ಕೊರೋನಾ ಹಾಟ್‍ಸ್ಪಾಟ್: ಅಚ್ಚರಿಯಾದ್ರೂ ಸತ್ಯ
ನಮಗೆ ವಲಸೆ ಕೇಂದ್ರಗಳಲ್ಲಿ ಸರಿಯಾದ ಆಹಾರ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಕಾರ್ಮಿಕರು, ಗುಂಪು ಗುಂಪಾಗಿ ಧರಣಿಗೆ ಮುಂದಾದರು. ಸಾಮಾಜಿಕ ಅಂತರ ಇಲ್ಲದೆ, ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೆ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಕಾರ್ಮಿಕರನ್ನು ಚದುರಿಸಿದರು. ಹಂತ ಹಂತವಾಗಿ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು.
ಜೋಕಟ್ಟೆಯಲ್ಲಿ ಪ್ರತಿಭಟನೆ:
ಜೋಕಟ್ಟೆಯಲ್ಲಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಿಂದ ಆಗಮಿಸಿ ಕೆಲಸ ಮಾಡುತ್ತಿದ್ದ ಸುಮಾರು 500ಕ್ಕೂ ಅಧಿಕ ಕಾರ್ಮಿಕರು, ಸೇವಾ ಸಿಂಧು ಸೌಲಭ್ಯ ಹಿಂತೆಗೆದುಕೊಳ್ಳಲಾಗಿದೆ, ನೋಂದಣಿ ಆಗುತ್ತಿಲ್ಲ, ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಬುಧವಾರ ಧರಣಿ ನಡೆಸಿದರು.
ಮೂವರು ಮೃತಪಟ್ಟ ದಕ್ಷಿಣ ಕನ್ನಡದಲ್ಲಿ ಮತ್ತೆರಡು ಪಾಸಿಟಿವ್..!
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎರಡು ದಿನದ ಬಳಿಕ ನೋಂದಣಿ ಕಾರ್ಯ ಕೈಗೊಂಡು ನಂತರ ವಿಶೇಷ ರೈಲಿನ ಮೂಲಕ ಊರುಗಳಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಎಲ್ಲ ಕಾರ್ಮಿಕರಿಗೆ ಈ ಬಗ್ಗೆ ತಿಳುವಳಿಕೆ ನೀಡಿದ ಐವನ್, ಸರ್ಕಾರ ಕೈಗೊಳ್ಳುವ ಕ್ರಮದ ಬಗ್ಗೆ ವಿಚಾರಿಸಿ ಕಳುಹಿಸುವ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.