36 ರೈತರಿಗೆ ಉತ್ತರ ಭಾರತ ಮೂಲದ ಕಂಪನಿ, ಬ್ಯಾಂಕ್ ಸಿಬ್ಬಂದಿ ಮೋಸ| ವಂಚಕ ಕಂಪನಿ ತಾಳಕ್ಕೆ ಕುಣಿದ ದಾವಣಗೆರೆಯ ಯುಕೋ ಬ್ಯಾಂಕ್| ಸತ್ಯಾಸತ್ಯತೆ ನೋಡದೇ ಕೋಟ್ಯಂತರ ರು. ಸಾಲ ನೀಡಿ, ತಾನೂ ಕೈ ಸುಟ್ಟುಕೊಂಡ ಬ್ಯಾಂಕ್|
ದಾವಣಗೆರೆ(ನ.22): ಪಹಣಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ, 4 ಖಾಲಿ ಚೆಕ್‌ಗಳನ್ನು ರೈತರಿಂದ ಪಡೆದು, ಅಡಕೆ ಬೆಳೆಗಾರರೆಂದು ಸುಳ್ಳು ದಾಖಲೆ ಸೃಷ್ಟಿಸಿ ಆ ರೈತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ 42 ರಿಂದ 48 ಲಕ್ಷ ರುಪಾಯಿ ವರೆಗೆ ಸಾಲ ಪಡೆದು ಕೋಟ್ಯಂತರ ರುಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅದೇ ರೈತರಿಗೆ 1 ಲಕ್ಷ ಕೊಟ್ಟು, ಉಳಿದಿದ್ದಕ್ಕೆ ಕಂಪನಿ, ಮಧ್ಯವರ್ತಿಗಳು, ಬ್ಯಾಂಕ್ ಸಿಬ್ಬಂದಿ ಸೇರಿ ಪಂಗನಾಮ ಹಾಕಿದ್ದಾರೆ.
ಮೂವರು ಯೂಕೋ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಣಜಿ ಗೊಲ್ಲರಹಳ್ಳಿ ಗ್ರಾಮದ ರೈತ ವಿ.ಅಣ್ಣಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಜಮೀನು ಇಲ್ಲದ ರೈತರ ಹೆಸರಿನಲ್ಲಿ .48 ಲಕ್ಷ ಸಾಲ, ಮುರುಕಲು ಮನೆ ಹೊಂದಿರುವ ಅಪ್ಪ-ಮಗನಿಗೆ .1 ಕೋಟಿ ಸಾಲ, ಗೋದಾಮುಗಳನ್ನು ತೋರಿಸಿ ಸಾಲ ಪಡೆದಿರುವುದು, ಖಾಲಿ ಡ್ರಮ್‌ಗಳನ್ನು ತೋರಿಸಿ ಅಡಿಕೆ ದಾಸ್ತಾನು ಮಾಡಿಡಲಾಗಿದೆ ಎಂಬುದಾಗಿ ಬ್ಯಾಂಕ್‌ಗೆ ನಂಬಿಸಿ, ದಾಖಲೆ ಸೃಷ್ಟಿಸುವ ಮೂಲಕ ಕೋಟ್ಯಂತರ ರುಪಾಯಿ ವಂಚಿಸಲಾಗಿದೆ.
'ಪ್ರಮಾಣ ಪಾಲನೆ ಮಾಡಿಲ್ಲ, ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿಲ್ಲ'
ಅಮಾಯಕ ರೈತರ ಹೆಸರಿನಲ್ಲಿ ಕೋಟಿಗಟ್ಟಲೇ ಸಾಲ ಪಡೆಯುವ ಮೂಲಕ ಉತ್ತರ ಭಾರತ ಮೂಲದ ಕಂಪನಿಯೊಂದು ವಂಚಿಸಿದೆ. ವಂಚಕ ಕಂಪನಿ ತಾಳಕ್ಕೆ ಕುಣಿದ ದಾವಣಗೆರಯ ಯುಕೋ ಬ್ಯಾಂಕ್ ಸಹ ಹಿಂದೆ ಮುಂದೆ ಪರಿಶೀಲಿಸದೆ, ಸತ್ಯಾಸತ್ಯತೆ ನೋಡದೇ ಕೋಟ್ಯಂತರ ರು. ಸಾಲ ನೀಡಿ, ತಾನೂ ಕೈ ಸುಟ್ಟುಕೊಂಡಿದೆ. ಜಿಲ್ಲೆಯ ಹಿರೇ ಅರಕೆರೆ ಹಾಗೂ ಕೆರೆಯಾಗಳಹಳ್ಳಿ ಗ್ರಾಮಗಳಲ್ಲಿರುವ ಗೋದಾಮುಗಳನ್ನು ತೋರಿಸಿ, ಕಂಪನಿ ಸಾಲ ಪಡೆದಿದೆ. ಅಡಿಗೆ ಗೋದಾಮುಗಳಲ್ಲಿ ಅಡಿಕೆ ಚೀಲದ ಬದಲಿಗೆ ಖಾಲಿ ಡ್ರಮ್ ಜೋಡಿಸಿಟ್ಟು ಬ್ಯಾಂಕ್‌ಗೆ ಪಂಗನಾಮ ಹಾಕಿದೆ.