ಬೆಂಗಳೂರು ಸೇರಿ ರಾಜ್ಯದಲ್ಲಿ ಮುಂದಿನ 3 ದಿನ ಸುರಿಯಲಿದೆ ಮಳೆ

By Kannadaprabha News  |  First Published Mar 3, 2020, 9:39 AM IST

ಈಗಾಗಲೇ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ವಿವಿಧ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


ಬೆಂಗಳೂರು [ಮಾ.03]:  ರಾಜ್ಯದ ಕರಾವಳಿ ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಮಧ್ಯ ಮಹಾರಾಷ್ಟ್ರದಿಂದ ರಾಜ್ಯದ ಕರಾವಳಿವರೆಗೆ ಗಾಳಿಯ ಒತ್ತಡ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇನ್ನೂ ಮೂರು ದಿನ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚದುರಿದಂತೆ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ಮೂರು ದಿನಗಳಿಂದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡು, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಭಾನುವಾರ ಮತ್ತು ಸೋಮವಾರ ಕೊಪ್ಪಳ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ದಾವಣಗೆರೆ, ವಿಜಯಪುರ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಂಗಳವಾರದಿಂದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest Videos

undefined

ಮಂಗಳೂರಲ್ಲಿ ವರ್ಷದ ಮೊದಲ ಮಳೆ, ಇಲ್ಲಿವೆ ಫೋಟೋಸ್...

ಬಿಸಿಲ ಪ್ರಮಾಣ ಹೆಚ್ಚಾಗಿರುವುದು ಹಾಗೂ ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಯಿಂದ ಈ ರೀತಿ ಮಾಚ್‌ರ್‍ ಮತ್ತು ಏಪ್ರಿಲ್‌ ಅವಧಿಯಲ್ಲಿ ಮಳೆಯಾಗಲಿದೆ. ಇದು ಮುಂಗಾರು ಮಳೆಯ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಕಳೆದ ಮೂರು ದಿನಗಳಿಂದ ಮಳೆಯಾದರೂ ಸಮುದ್ರದ ನೀರಿನ ಉಷ್ಣಾಂಶದಲ್ಲಿ ಇಳಿಕೆಯಾಗಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸೋಮವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಿರುವ ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು 4 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ ದಕ್ಷಿಣ ಕನ್ನಡದ ಮೂಡುಬಿದಿರೆ, ಉಡುಪಿ ಜಿಲ್ಲೆಯ ಕಾರ್ಕಳ, ಮಂಡ್ಯದ ಕೃಷ್ಣರಾಜಪೇಟೆಯಲ್ಲಿ ತಲಾ 3, ಮಂಗಳೂರು ವಿಮಾನ ನಿಲ್ದಾಣ, ವಿಜಯಪುರದ ಆಲಮಟ್ಟಿಯಲ್ಲಿ ತಲಾ 2, ವಿಜಯಪುರದ ಮುದ್ದೇಬಿಹಾಳ, ಚಿಕ್ಕಮಗಳೂರಿನ ಕಮ್ಮರಡಿ, ಮೈಸೂರಿನ ನಂಜನಗೂಡು, ಕೆಆರ್‌ಎಸ್‌, ಮೈಸೂರು ಮತ್ತು ಮಂಡ್ಯ ನಗರದಲ್ಲಿ ತಲಾ 1 ಸೆಂ.ಮೀ. ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

click me!