ಯತ್ನಾಳ್‌ ಹೇಳಿಕೆ ವಿವಾದ: ಸಚಿವ ಸುರೇಶ್‌ಗೆ ಸಾಹಿತಿ ದೇವನೂರ ಪತ್ರ

Kannadaprabha News   | Asianet News
Published : Mar 03, 2020, 09:23 AM IST
ಯತ್ನಾಳ್‌ ಹೇಳಿಕೆ ವಿವಾದ: ಸಚಿವ ಸುರೇಶ್‌ಗೆ ಸಾಹಿತಿ ದೇವನೂರ ಪತ್ರ

ಸಾರಾಂಶ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಹೇಳಿಕೆ ಸಂಬಂಧ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗುತ್ತಿದ್ದು ಇದರ ಸಂಬಂಧ ಸಚಿವ ಸುರೇಶ್ ಕುಮಾರ್ ಅವರಿಗೆ ಸಾಹಿತಿ ದೇವನೂರು ಮಹಾದೇವ ಪತ್ರ ಬರೆದಿದ್ದಾರೆ. 

ಮೈಸೂರು [ಮಾ.03]:  ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ವಿರುದ್ಧದ ಹೇಳಿಕೆ ಖಂಡಿಸಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಬಹಿರಂಗ ಪತ್ರಬರೆದಿದ್ದಾರೆ. ದೊರೆಸ್ವಾಮಿ ಕುರಿತ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂದಿನ ಅವಕಾಶವಾದಿ ರಾಜಕಾರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ಮೋದಿ ವಿರೋಧಿಗಳಾಗಿದ್ದರೆ ಮೋದಿ ತಲೆಗೆ ಹತ್ತಿಪ್ಪತ್ತು ಕೋಟಿ ಫತ್ವಾ ಹೊರಡಿಸುತ್ತಿದ್ದರೇನೋ? ಇಂಥವರು ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸೋಮವಾರ ಪತ್ರಬರೆದಿರುವ ದೇವನೂರ ಅವರು,  ನೀವು ನಮ್ಮ ಸುರೇಶ್‌ ಅಂದುಕೊಂಡಿದ್ದರಿಂದಲೇ ತಮಗೆ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಹೇಳಿಕೆ, ‘‘ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ’’- ನೋಡಿ ನನಗೆ ಶಾಕ್‌ ಆಯಿತು.

ದೊರೆಸ್ವಾಮಿ ಅವರು ಕಳೆದ ಚುನಾವಣೆಯ ಹಿಂದಿನ ದಿನ ಯಾರಿಗೆ ಮತ ನೀಡಬೇಕೆಂದು ಕರೆ ನೀಡುತ್ತಾ, ಮೋದಿಯವರ ವೈಫಲ್ಯಗಳನ್ನು ಹಾಗೂ ಸರ್ವಾಧಿಕಾರಿ ಪ್ರವೃತ್ತಿಯನ್ನು ವಿವರಿಸುತ್ತಾ, ಆತ ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ. ಯಾವ ಕೆಲಸ ಮಾಡಿಲ್ಲ. ಕರ್ನಾಟಕವನ್ನು ತೆಗೆದುಕೊಂಡು ಬಿಟ್ಟರೆ ಇಡೀ ದೇಶವನ್ನು ತಗೋಬಹುದು ಎನ್ನುವ ಆಲೋಚನೆ ಇದೆ. ಆದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು’’ ಎಂದು ಹೇಳುತ್ತಾರೆ.

ಇದರ ಅರ್ಥ ಸಾಯಿಸಬೇಕು ಎಂದಾಗುವುದೇ? ಅವರ ಮಾತುಗಳಲ್ಲಿ ಎತ್ತಿದ ಸಮಸ್ಯೆಗಳತ್ತ ಕಣ್ಣೆತ್ತಿಯೂ ನೋಡುವ ಧೈರ್ಯವಿಲ್ಲದೆ, ಅದನ್ನು ಅಪಾರ್ಥ ಮಾಡಿ, ನೂರು ವರ್ಷಕ್ಕೂ ಮಿಗಿಲಾಗಿ ಅಹಿಂಸೆಯ ವ್ರತ ಪಾಲಿಸಿಕೊಂಡು, ಯಾವುದೋ ಯುಗದ ಮನುಷ್ಯನೊಬ್ಬ ನಮ್ಮ ನಡುವೆ ಬದುಕಿರುವ ಸೋಜಿಗ ಕಾಣದೆ ಸದೆಬಡಿಯುವುದಾದರೆ ನಾವು ಲಿಲ್ಲಿ ಪುಟ್ಟರಂತಾಗಿಬಿಡುತ್ತೇವೆ ಎಂದು ದೇವನೂರ ತಿಳಿಸಿದ್ದಾರೆ.

ಸಾವರ್ಕರ್ ಧೂಳಿಗೂ ದೊರೆಸ್ವಾಮಿ ಸಮವಲ್ಲ; ನಾಲಿಗೆ ಹರಿಬಿಟ್ಟ ಯತ್ನಾಳ್.

ಇಂದು ಜನಪ್ರತಿನಿಧಿಗಳು ತಮ್ಮನ್ನು ಜನಪ್ರತಿನಿಧಿಗಳು ಅಂದುಕೊಂಡಿಲ್ಲ. ಶಾಸಕರು ಶಾಸಕ ಅಂದುಕೊಂಡಿಲ್ಲ. ಯಾರೂ ತಮ್ಮ ಸ್ಥಾನಕ್ಕೆ ಹೊಣೆಗಾರರಾಗಿಲ್ಲ. ಇದು ಇಂದಿನ ಸಮಸ್ಯೆಯಾಗಿದೆ. ಉದಾಹರಣೆಗೆ, ಶ್ರೀ ಯತ್ನಾಳ್‌ ಅವರ ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಾ ಅದು ’ಗುಳೆ ಜಿಲ್ಲೆ’ ಎನ್ನಿಸಿಕೊಂಡುಬಿಟ್ಟಿದೆ. ಯತ್ನಾಳರನ್ನು ಆಯ್ಕೆ ಮಾಡಿದ ’ಮತದಾರ ಪ್ರಭುಗಳು’ ತಮ್ಮ ಹೊಟ್ಟೆತುಂಬಿಸಿಕೊಳ್ಳಲು ಕೆಲಸ ಅರಸುತ್ತಾ ಗೋವಾ, ಮಹಾರಾಷ್ಟ್ರದ ಕಡೆಗೆ ಗುಳೆ ಹೋಗುವುದು ದಿನೇದಿನೇ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಹೊಣೆಗೇಡಿಯಾಗಿದ್ದಾರೆ. ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಿರುವ ಜನ ಅವಜ್ಞೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಪಕ್ಷದಲ್ಲೇ ಇರಲಿ ತಮ್ಮಂಥವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ.

ತುಂಬಾ ಹೆಚ್ಚಾಗಿ ಬರೆದುಬಿಟ್ಟೆ. ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ? ನಿಮ್ಮ ಹೇಳಿಕೆ ನೋಡಿದಾಗ ಈ ಪ್ರಶ್ನೆ ನನ್ನೊಳಗೆ ಸುಳಿದಾಡಿತು. ಅದಕ್ಕಾಗಿ ಈ ಪತ್ರ. ಕ್ಷಮೆ ಇರಲಿ ಎಂದು ದೇವನೂರ ಮಹಾದೇವ ಹೇಳಿದ್ದಾರೆ.

PREV
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ