ನಾನ್‌ ಕೋವಿಡ್‌ ರೋಗಿಗಳ ಪರದಾಟ ಕೇಳೋರಿಲ್ಲ..!

By Kannadaprabha News  |  First Published Apr 28, 2021, 3:37 PM IST

ಹೀರೋಳ್ಳಿ- ವಾಗ್ದರಿ ಗಡಿಯಲ್ಲಿ ಕರ್ನಾಟಕ ಚೆಕ್‌ಪೋಸ್ಟ್‌ ಪಕ್ಕವೇ ಮಹಾರಾಷ್ಟ್ರ ಚೆಕ್‌ಪೋಸ್ಟ್‌ ಸ್ಥಾಪನೆ|  ಈ ದಾರಿಯಲ್ಲಿ ಉಮ್ಮರ್ಗಾ, ಸೊಲ್ಲಾಪುರ ಆಸ್ಪತ್ರೆಗೆ ಹೋಗುವ ರೋಗಿಗಳ ಗೋಳಾಟ ಕೇಳೋರಿಲ್ಲ| ಆಸ್ಪತ್ರೆ ವಿಚಾರ ಅರಿತರೂ ಕ್ಯಾತೆ ಮುಂದುವರಿಸಿದ ಮಹಾರಾಷ್ಟ್ರ ಪೊಲೀಸರು|  


ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.28):  ಕೊರೋನಾ ಸೋಂಕು ಹರಡದಂತೆ ಕಟ್ಟುನಿಟ್ಟು ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಆಳಂದದಲ್ಲಿ ಸ್ಥಾಪಿಸಿರುವ ಹಿರೋಳ್ಳಿ ಚೆಕ್‌ಪೋಸ್ಟ್‌ ಪಕ್ಕದಲ್ಲೇ, ಮಹಾರಾಷ್ಟ್ರದವರೂ ಸಹ ವಾಗ್ದರಿ ಸೀಮೆಯಲ್ಲಿ (ಸೊಲ್ಲಾಪುರ ಜಿಲ್ಲೆ) ಕಳೆದ 5 ದಿನದಿಂದ ಸ್ಥಾಪಿಸಿರುವ ಚೆಕ್‌ಪೋಸ್ಟ್‌ ಜಿಲ್ಲೆಯ ನಾನ್‌ ಕೋವಿಡ್‌ ರೋಗಿಗಳ ಪಾಲಿಗೆ ಶಾಪವಾಗಿದೆ.

Latest Videos

undefined

ಸ್ವಲ್ಪ ಅನಾರೋಗ್ಯ ಕಾಡಿದರೂ ಸೊಲ್ಲಾಪುರ, ಉಮ್ಮರ್ಗಾ ದಾರಿ ಹಿಡಿಯೋದು ಕಲಬುರಗಿ ಮಂದಿಯ ಹವ್ಯಾಸ. ತಾಲೂಕುಗಳಿಂದ ನಿತ್ಯ ಈ ದಾರಿಯಲ್ಲಿ ರೋಗಿ/ಬಂಧುಗಳನ್ನು ಹೊತ್ತ ವಾಹನಗಳ ಸಂಚಾರ ಮಾಮೂಲು. ಆದರೀಗ ಮಹಾರಾಷ್ಟ್ರದವರು ಗಡಿಯಲ್ಲಿನ ಸಂಚಾರ ನಿಗ್ರಹಿಸಲು ಆರಂಭಿಸಿದ್ದರಿಂದ ಇಂತಹ ವಾಹನಗಳನ್ನು ತಡೆದು ಪ್ರಶ್ನೆಗಳ ಸುರಿಮಳೆಗರೆಯುತ್ತ ಸತಾಯಿಸುತ್ತಿರೋದರಿಂದ ಗಡಿಯಲ್ಲಿ ‘ನಾನ್‌ ಕೋವಿಡ್‌’ ರೋಗಿಗಳ ಪರದಾಟ ಶುರುವಾಗಿದೆ.

‘ಕನ್ನಡಪ್ರಭ’ ವಾಗ್ದರಿ ಗಡಿಗೆ ಬೇಟಿ ಕೊಟ್ಟಾಗ ಸೊಲ್ಲಾಪುರಕ್ಕೆ ಹೋಗಲೇಬೇಕಾದ ಜಿಲ್ಲೆಯ ಅನೇಕ ರೋಗಿಗಳ ಪರದಾಟ ಮುಗಿಲು ಮುಟ್ಟಿತ್ತು. ಪೇಷಂಟ್‌ ಕಾರ್‌ನಾಗ ಮಲಗ್ಯದರಿ, ಇಲ್ಲಿ ನೋಡ್ರಿಲ್ಲಿ ಕಾಗದ- ಪತ್ರ, ದವಾಖ್ಯಾನಿಗೆ ಹೋಗಬೇಕು. ವಾರಕ್ಕ 2 ಬಾರಿ ಡಯಾಲಿಸಿಸ್‌ ಮಾಡಬೇಕು ಇವನಿಗೆ, ಸುಮ್‌್ಕ ನಮ್ಗ ತಡವಿಕೊಂಡು ಕುಂದರಬ್ಯಾಡ್ರಿ, ಲಗೂಟ ಬಿಟ್ಟುಬಿಡ್ರಿ ಎಂದು ಬೋಧನ ಗ್ರಾಮದ ನೀಲಕಂಠಸ್ವಾಮೀ ಕುಟುಂಬ ಅಂಗಲಾಚಿದರೂ ಮಹಾರಾಷ್ಟ್ರ ಪೊಲೀಸರು ಸುಲಭದಲ್ಲಿ ಈ ಮಾತಿಗೆ ಒಪ್ಪಲಿಲ್ಲ. 1 ಗಂಟೆಗೂ ಹೆಚ್ಚುಕಾಲ ಗಡಿಯಲ್ಲೇ ರೋಗಿಯ ಕಾರು ತಡೆದು ನಿಲ್ಲಿಸಿ ಕಾಲಹರಣ ಮಾಡಿದರು!

ಕೋವಿಡ್‌ ಸೋಂಕು: 'ಎಲ್ಲರಿಗೂ ರೆಮ್‌ಡಿಸಿವಿರ್‌ ಬೇಕಿಲ್ಲ'

ಪ್ಯಾರಾಲೈಸಿಸ್‌ ಆಗಿತ್ರಿ, ಸೊಲ್ಲಾಪುರದಾಗೇ ಡಾಕ್ಟರ್‌ ತೋರಿಸೀವಿ, ಈಗ ಗುಣ ಆಗ್ಲಿಕತ್ತದ. ತಿಂಗಳಿಗೊಮ್ಮ ತೋರಸಿಲಿಕ್ಕಿ ಹೋಗಬೇಕು, ಬಲ್ಯಾಕ ಡಾಕ್ಟರ್‌ ಪತ್ರ ಅದಾವ, ನೂರೆಂಟು ಪ್ರಶ್ನೆ ಕೇಳುತ್ತ ಕುಂತರ ನಮಗ ಹೊತ್ತಾಗೋದಿಲ್ಲೇನು? ಜಗತ್ತಿಗೇ ಕೊರೋನಾ ಬಂದದ. ನಾವಂತೂ ಅದರ ಉಸಾಬರಿಗೆ ಹೋಗಿಲ್ಲ. ಹೀಂಗ ನಮಗ ಸತಾಯಿಸಿದ್ರ ಹ್ಯಾಂಗ್ರಿ? ಎಂಬ ಪಡಸಾವಳಗಿ ರೋಗಿ ಕಡೆಯವರ ಪ್ರಶ್ನೆಗೂ ಮಹಾ ಪೊಲೀಸರು ಕಿವುಡರಾಗಿದ್ದರು!
ಜಿಲ್ಲೆಯ ‘ಮಹಾ’ರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಆಳಂದದಲ್ಲಿ ಮಾಶಾಳ, ಬಳೂರಗಿ ಹಾಗೂ ಆಳಂದದಲ್ಲಿ ನಿಂಬಾಳ, ಹಿರೊಳ್ಳಿ ಹಾಗೂ ಖಜೂರಿಗಳಲ್ಲಿ ಚೆಕ್‌ಪೋಸ್ಟ್‌ ಜಿಲ್ಲಾಡಳಿತ ಸ್ಥಾಪಿಸಿದರೆ ಇದಕ್ಕೆ ಪ್ರತಿಯಾಗಿ ಕಳೆದ 5 ದಿನದಿಂದ ಮಹಾರಾಷ್ಟ್ರದವರೂ ತಮ್ಮ ಗಡಿಯಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ ಸಂಚಾರ ನಿರ್ಬಂಧಿಸುತ್ತಿದ್ದಾರೆ.

ಆಸ್ಪತ್ರೆ ವಿಚಾರ ಅರಿತರೂ ಮಹಾ ಪೊಲೀಸರ ಕ್ಯಾತೆ ಮುಂದುವರಿದಿದೆ!

ಈ ದಾರಿಯಲ್ಲಿ ಆಸ್ಪತ್ರೆಗೆಂದು ಸೊಲ್ಲಾಪುರಕ್ಕೆ ಹೋಗಿ ಬರುವ ವಾಹನಗಳ ಅಧಿಕ, ಇದನ್ನರಿತರೂ ಮಹಾ ಪೊಲೀಸರು ರೋಗಿಗಳ ಹೊತ್ತ ವಾಹನ ತಡೆದು ಸತಾಯಿಸುತ್ತಿರೋದು ಸರಿಯಾದ ಕ್ರಮವಲ್ಲ. ಎಲ್ಲ ರಿಪೋರ್ಟ್‌ ನೋಡಿ ಬೇಗ ಆಸ್ಪತ್ರೆಗೆ ಹೋಗುವವರನ್ನು ಬಿಟ್ಟು ಬಿಡಬೇಕು. ಅವರೇನು ಕೊರೋನಾ ರೋಗಿಗಳೂ ಆಗಿರೋದಿಲ್ಲ. ನಿತ್ಯದ ತಮ್ಮ ಆರೋಗ್ಯಕ್ಕೆ ತಪಾಸಣೆಗೆ, ವೈದ್ಯರ ಭೇಟಿಗೆಂದು ಹೋಗುತ್ತಿರುತ್ತಾರೆ. ನಿತ್ಯ ಇವರು ಸತಾಯಿಸುತ್ತಲಿದ್ದಾರೆಂದು ಹೀರೋಳ್ಳಿ ಹಳ್ಳಿ ಜನ ವಿಷಾದಿಸುತ್ತಿದ್ದಾರೆ.

ಕಲಬುರಗಿ ಜಿಲ್ಲಾಡಳಿತ- ಪೊಲೀಸ್‌ ಅಧಿಕಾರಿಗಳು ಗಮನಿಸುವರೆ?

ಆಸ್ಪತ್ರೆಗೆಂದು ಸೊಲ್ಲಾಪುರ, ಉಮ್ಮರ್ಗಾಕ್ಕೆ ಹೋಗುವ ರೋಗಿಗಳ ಸುಗಮ ಸಂಚಾರಕ್ಕೆ ಗಡಿಯಲ್ಲಿ ಅವಕಾಶ ಕಲ್ಪಿಸುವ ಹೊಣೆ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೇರಿದ್ದು, ನಾನ್‌ ಕೋವಿಡ್‌ ರೋಗಿಗಳ ಸುಗಮ ಸಂಚಾರಕ್ಕೆ ಚೆಕ್‌ಪೋಸ್ಟ್‌ಗಳಲ್ಲಿ ಖಡಕ್‌ ಸೂಚನೆ, ಸಂದೇಶಗಳನ್ನು ಜಿಲ್ಲಾ ಮಟ್ಟದ ಪೊಲೀಸ್‌ ಅಧಿಕಾರಿಗಳು ರವಾನಿಸಬೇಕು. ಸೊಲ್ಲಾಪುರ, ಅಕ್ಕಲಕೋಟೆ ಪೊಲೀಸ್‌ ಅಧಿಕಾರಿಗಳೊಂದಗೆ ಮಾತುಕತೆ ನಡೆಸಿ ರೋಗಿಗಳಿರುವ ವಾಹನಗಳಿಗೆ ಸತಾಯಿಸದಂತೆ ಖಡಕ್‌ ಸೂಚನೆ ನೀಡುವ ಕೆಲಸವಾಗಬೇಕಿದೆ.
 

click me!